ರಾಯಚೂರಿನಲ್ಲಿ ವಾಣಿಜ್ಯೋದ್ಯಮಿಗಳ ವಿಶೇಷ ಸಭೆ

By Web DeskFirst Published Oct 11, 2019, 11:26 AM IST
Highlights

ಅ.11 ಮತ್ತು 12ರಂದು ನಗರದಲ್ಲಿ ವಾಣಿಜ್ಯೋದ್ಯಮಿಗಳ ಸಂಘದ ಪ್ರತಿನಿಧಿಗಳ ವಿಶೇಷ ಸಭೆ ಹಾಗೂ ಸಮಾವೇಶ| ಮೊದಲ ದಿನ ಸಂಘದ ಪ್ರತಿನಿಧಿಗಳ ಸಭೆ ಹಾಗೂ ಎರಡನೇ ದಿನ ಸಮಾವೇಶ, ವಿಚಾರ ಸಂಕಿರಣ| ಕಲ್ಯಾಣ ಕರ್ನಾಟಕ ಪ್ರದೇಶದ ವಾಣಿಜ್ಯೋದ್ಯಮದ ಸಮಸ್ಯೆಗಳು, ತೆರಿಗೆ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆ| 

ರಾಯಚೂರು(ಅ.11): ಈ ಭಾಗದ ಕೈಗಾರಿಕೆ, ವಾಣಿಜ್ಯ ವಲದ ಅಭಿವೃದ್ಧಿ ಸೇರಿ ಇತರೆ ವಿಷಯಗಳ ಕುರಿತು ಚರ್ಚಿಸಲು ಅ.11 ಮತ್ತು 12ರಂದು ನಗರದಲ್ಲಿ ವಾಣಿಜ್ಯೋದ್ಯಮಿಗಳ ಸಂಘದ ಪ್ರತಿನಿಧಿಗಳ ವಿಶೇಷ ಸಭೆ ಹಾಗೂ ಸಮಾವೇಶ ಏರ್ಪಡಿಸಲಾಗಿದೆ ಎಂದರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ ತ್ರಿವಿಕ್ರಮ ಜೋಶಿ ತಿಳಿಸಿದ್ದಾರೆ. 

ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಸಂಘ (ಎಫ್‌ಕೆಸಿಸಿಐ), ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮೊದಲ ದಿನ ಸಂಘದ ಪ್ರತಿನಿಧಿಗಳ ಸಭೆ ಹಾಗೂ ಎರಡನೇ ದಿನ ಸಮಾವೇಶ, ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಲ್ಯಾಣ ಕರ್ನಾಟಕ ಪ್ರದೇಶದ ವಾಣಿಜ್ಯೋದ್ಯಮದ ಸಮಸ್ಯೆಗಳು, ತೆರಿಗೆ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗುವುದು. ಹತ್ತು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮತ್ತೆ ಎಫ್‌ಕೆಸಿಸಿಐನಿಂದ ಎರಡು ದಿನಗಳ ಕಾಲ ಕಾರ್ಯಕ್ರಮವನ್ನು ನಡೆಸಲಾಗುತಿದೆ ಎಂದರು.

ಅ.11ರಂದು ಸಂಜೆ 6 ಗಂಟೆಗೆ ನಗರದ ಅಂಬೇಡ್ಕರ್‌ ವೃತ್ತದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳ ಹಾಗೂ ಪ್ರಮುಖರ ವಿಶೇಷ ಸಭೆಯು ನಡೆಯಲಿದ್ದು, ಎಫ್‌ಕೆಸಿಸಿಐನ ರಾಜ್ಯಾಧ್ಯಕ್ಷ ಸಿ.ಆರ್‌.ಜನಾರ್ದನ್‌ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಸಭೆಯಲ್ಲಿ ಈ ಭಾಗದ ಜಿಲ್ಲೆಗಳ ಕೈಗಾರಿಕೆ, ವಾಣಿಜ್ಯ ಕ್ಷೇತ್ರಗಳ ಸಾಧಕ-ಬಾಧಕ, ಅಭಿವೃದ್ಧಿಗೆ ಪೂಕರವಾದ ಅಂಶಗಳು ಮತ್ತು ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸು ಅವುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ವಿವರಿಸಿದರು.

ಎರಡನೆ ದಿನವಾದ ಅ.12 ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ವಾಣಿಜ್ಯೋದ್ಯಮಿಗಳು ಹಾಗೂ ವಿವಿಧ 28 ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಮಾವೇಶವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಉದ್ಘಾಟನೆಯನ್ನು ನೆರವೇರಿಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೇ, ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌, ಮಾಜಿ ಶಾಸಕ ಎ.ಪಾಪಾರೆಡ್ಡಿ, ಶಿಲ್ಪಾ ಮೆಡಿಕೇರ್‌ ಲೀ. ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ ಬೂತಾಡ್‌ ಅವರು ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಎಫ್‌ಕೆಸಿಸಿಐನ ರಾಜ್ಯಾಧ್ಯಕ್ಷ ಸಿ.ಆರ್‌.ಜನಾರ್ಧನ ಅವರು ವಹಿಸಿಕೊಡಲಿದ್ದಾರೆ ಎಂದು ಹೇಳಿದರು.

ಉದ್ಘಾಟನೆ ನಂತರ ಸಮಾವೇಶದಲ್ಲಿ ಆಯ್ದ ಮೂರು ವಿಷಯಗಳ ಕುರಿತು ವಿಚಾರ ಸಂಕಿರಣ ನಡೆಸಲಾಗುವುದು. ಅದರಲ್ಲಿ ಮೊದಲನೆಯದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಕುರಿತು ರಾಜ್ಯ ಎಪಿಎಂಸಿ, ಎರಡನೇಯದಾಗಿ ಕೈಗಾರಿಕಾ ವಿಷಯ ಮತ್ತು ಮೂರನೇದಾಗಿ ಜಿಎಸ್‌ಟಿ ವಿಷಯದ ಮೇಲೆ ಆಯಾ ಇಲಾಖೆಗಳ ಅಪರ ಮಟ್ಟದ ಅಧಿಕಾರಿಗಳು ವಿಚಾರ ಸಂಕಿರಣದಲ್ಲಿ ತಮ್ಮ ಆಲೋಚನೆಗಳನ್ನು ಬಿತ್ತರಿಸಲಿದ್ದಾರೆ ಎಂದರು.

ರಾಯಚೂರು, ಯಾದಗಿರಿ ಹುಬ್ಬಳ್ಳಿ ವಲಯಕ್ಕೆ

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಹುಬ್ಬಳ್ಳಿ ವಲಯಕ್ಕೆ ಸೇರಿಸುವ ಬೇಡಿಕೆಗೆ ಕೇಂದ್ರ ರೈಲ್ವೆ ಇಲಾಖೆ ಸಮ್ಮತಿ ಸೂಚಿಸಿದ್ದು, ಇಷ್ಟರಲ್ಲಿಯೇ ತಿದ್ದುಪಡಿಯಾಗಲಿದೆ ಎಂದು ಹೇಳಿದ್ದಾರೆ. 

ಇಷ್ಟುದಿನ ದಕ್ಷಿಣ ಮಧ್ಯ ರೈಲ್ವೆ ವಿಭಾಗದಡಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಗುಂತಕಲ್‌ ವಲಯದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದವು ಆದರೆ ಆ ವಲಯವನ್ನು ಬದಲಾವಣೆ ಮಾಡಿ ವಿಶಾಖಪಟ್ಟಣಕ್ಕೆ ಸೇರಿಸಿದ್ದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಎರಡೂ ಜಿಲ್ಲೆಗಳನ್ನು ದೂರದ ವಿಶಾಖಪಟ್ಟಣದ ವ್ಯಾಪ್ತಿಗೆ ಒಳಪಡಿಸುವ ನಿರ್ಧಾರವನ್ನು ಕೇಂದ್ರ ಕೈಗೊಂಡಿತ್ತು. 

ಈ ಕುರಿತು ಜಿಲ್ಲೆಯ ಸಂಸದರು, ಸಂಘದ ಪದಾಧಿಕಾರಿಗಳು ಹಾಗೂ ಇತರೆ ಮುಖಂಡರು ಕೇಂದ್ರ ಸಚಿವ ಸುರೇಶ ಅಂಗಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಇದರಿಂದಾಗುವ ಕಷ್ಟ-ನಷ್ಟಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು. ಅದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರವು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಹುಬ್ಬಳ್ಳಿ ವಲಯಕ್ಕೆ ಸೇರಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿ ತಿದ್ದುಪಡಿಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ. 

ಕಲಬುರಗಿಯನ್ನು ಸಹ ವಲಯವನ್ನಾಗಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಆದರೆ ಒಂದು ರೈಲ್ವೆ ವಲಯ ರೂಪಿಸಬೇಕಾದರೆ ಇಂತಿಷ್ಟು ಕಿಮೀ ರೈಲು ಹಳಿಯ ಸಂಪರ್ಕವಿರಬೇಕು ಎನ್ನುವ ನಿಯಮವಿರುವುದರಿಂದ ಅದಕ್ಕೆ ವಿಳಂಬವಾಗುತಿದೆ. ಕಲಬುರಗಿ ವಲಯದ ಮಾಡುವುದು ಖಚಿತವಾಗಿದ್ದು, ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳನ್ನು ಸೇರಿಸಿ ರಾಯಚೂರಿನಲ್ಲಿಯೇ ರೈಲ್ವೆ ವಲಯ ಮಾಡುವಂತೆ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಹರವಿ ನಾಗನಗೌಡ, ಬಂಜಣ್ಣ ಯಕ್ಲಾಸಪುರ, ಬಿ.ಜಗದೀಶ ಗುಪ್ತಾ, ಮಲ್ಲಿಕಾರ್ಜುನ ದೋತರಬಂಡಿ, ಹೇಮಣ್ಣ ಹುಣ್ಣೆ, ಪ್ರಭುಶಾಸ್ತ್ರಿ,ವಿ.ಲಕ್ಷ್ಮೇರೆಡ್ಡಿ ಸೇರಿದಂತೆ ಅನೇಕರಿದ್ದರು.
 

click me!