
ಒಂದು ಸಣ್ಣ ಅಂಗಡಿ, ತಿಂಗಳಿಗೆ ಕೇವಲ 3ರಿಂದ 4 ಸಾವಿರ ರೂಪಾಯಿ ಆದಾಯ. ಇಷ್ಟಿದ್ದರೂ ಶಶಾಂಕ್ ಅಗರ್ವಾಲ್ ತಂದೆ ಸೋಲೊಪ್ಪಿಕೊಳ್ಳಲಿಲ್ಲ. ಮಗನ ದೊಡ್ಡ ಕನಸನ್ನು ನನಸಾಗಿಸುವ ಪಣ ತೊಟ್ಟಿದ್ದರು. ಅದಕ್ಕೆ ಮಗ ಶಶಾಂಕ್ ಸಂಪೂರ್ಣ ಸಾಥ್ ನೀಡಿದ್ದರು. ಅಪ್ಪನ ಶ್ರಮಕ್ಕೆ ಈಗ ಶಶಾಂಕ್ ಅವರಿಂದ ಫಲ ಸಿಕ್ಕಿದೆ. ತಂದೆ ಸಾಲ ಮಾಡಿ ಮಗನನ್ನು ಓದಿಸ್ತಿದ್ರೆ ಮಗ ಜೀವನವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಓದು ಮುಂದುವರೆಸಿದ್ರು. ಈಗ 1.5 ಕೋಟಿ ವಾರ್ಷಿಕ ಸಂಬಳ ಪಡೆಯುತ್ತಿದ್ದಾರೆ.
ಇದು ರಾಜಸ್ಥಾನದ ಶಶಾಂಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ. ಬಡ ಕುಟುಂಬದಲ್ಲಿ ಬೆಳೆದ ಶಶಾಂಕ್ ಅವರ ತಂದೆ ಸಗಟು ಅಂಗಡಿ ನಡೆಸುತ್ತಿದ್ದರು. ಆದಾಯ ಕಡಿಮೆಯಿದ್ದರೂ ಮಗನ ವಿದ್ಯಾಭ್ಯಾಸಕ್ಕೆ ಅವರು ಯಾವುದೇ ಕೊರತೆ ಮಾಡಲಿಲ್ಲ. ಅಗತ್ಯವಿದ್ದಾಗ ಸಾಲ ಮಾಡಿ ಮಗನ ಶಿಕ್ಷಣಕ್ಕೆ ಹಣ ಹೊಂದಿಸಿದರು. ಶಶಾಂಕ್ ಕೂಡ ತಂದೆಯ ಕಷ್ಟವನ್ನು ಅರ್ಥಮಾಡಿಕೊಂಡು ಓದಿನಲ್ಲಿ ಸಂಪೂರ್ಣ ಗಮನ ಹರಿಸಿದರು. 12ನೇ ತರಗತಿ ಮುಗಿಸಿದ ಬಳಿಕ ಎಂಜಿನಿಯರಿಂಗ್ ಓದುವ ಗುರಿ ಇಟ್ಟುಕೊಂಡರು.
ಅದಕ್ಕಾಗಿ ಕಠಿಣ ಪರಿಶ್ರಮ ಪಟ್ಟ ಅವರು 2018ರಲ್ಲಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 330 ಅಂಕಗಳನ್ನು ಪಡೆದರು. ನಂತರ ಜೆಇಇ ಅಡ್ವಾನ್ಸ್ಡ್ನಲ್ಲೂ ಉತ್ತಮ ರ್ಯಾಂಕ್ ಪಡೆದು, ದೇಶದ ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆದರು. ಅಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದ ಶಶಾಂಕ್, ಓದಿನ ಜೊತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನೂ ಬೆಳೆಸಿಕೊಂಡರು.
ಪೈಥಾನ್, ಸಿ++, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡೇಟಾ ಸ್ಟ್ರಕ್ಚರ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳೂ ಸಿಕ್ಕವು. ಇಂಟರ್ನ್ಶಿಪ್ ಬಳಿಕ ಕ್ವಾಂಟಿಟೇಟಿವ್ ಟ್ರೇಡಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಇದೀಗ ಝನ್ಸ್ಕಾರ್ ಕಾರ್ಪೊರೇಷನ್ನಲ್ಲಿ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರ ವಾರ್ಷಿಕ ಪ್ಯಾಕೇಜ್ ಸುಮಾರು 1.5 ಕೋಟಿ ರೂಪಾಯಿ. ಅಂದರೆ ತಿಂಗಳಿಗೆ ಸರಾಸರಿ 8.75 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ ಶಶಾಂಕ್.
ಶಶಾಂಕ್ ಅನೇಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಬಡಕುಟುಂಬದಲ್ಲಿ ಹುಟ್ಟೋದು ತಪ್ಪಲ್ಲ. ಸಣ್ಣಪುಟ್ಟ ಕನಸು ಕಾಣೋದು ತಪ್ಪು. ಎಲ್ಲಿ ಹುಟ್ಟಿದ್ರೂ ದೊಡ್ಡ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮಿಸೋದು ಮುಖ್ಯ. ಎಷ್ಟೆ ಕಷ್ಟ ಬಂದ್ರೂ ಗುರಿ ಕಡೆ ಗಮನವಿದ್ರೆ ಯಶಸ್ಸು ಸುಲಭ ಎಂಬುದನ್ನು ಶಶಾಂಕ್ ತೋರಿಸಿದ್ದಾರೆ.