
ನವದೆಹಲಿ (ಆ.18): ಒರಾಕಲ್ ತನ್ನ ಇಂಡಿಯನ್ ಟೀಮ್‌ನ ಶೇ. 10 ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ. ಅಮೆರಿಕ ಮತ್ತು ಕೆನಡಾದಲ್ಲಿಯೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭ ಮಾಡಿದೆ. ಹೆಚ್ಚಿನ ಸಾಫ್ಟ್‌ವೇರ್ ಡೆವಲಪರ್‌ಗಳ ಮೇಲೆ ಇದು ಪ್ರಭಾವ ಬೀರಿದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿರುವ ಒರಾಕಲ್ ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ (OCI) ವಿಭಾಗ ಮತ್ತು ಅದರ ಭಾರತೀಯ ಉದ್ಯೋಗಿಗಳ ಟೀಮ್‌ನಿಂದ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ಇಂಡಿಯನ್ ಟೀಮ್‌ನ ಶೇ. 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. ಉದ್ಯೋಗ ಕಡಿತವು ಪುನರ್ರಚನೆ ವ್ಯಾಯಾಮದ ಭಾಗವಾಗಿದೆ ಎಂದು ಕಂಪನಿಯು ಹೇಳಿಕೊಂಡರೂ, H-1B ವೀಸಾಗಳ ವಿತರಣೆಯೊಂದಿಗೆ ಆಫ್‌ಶೋರಿಂಗ್ ಅನ್ನು ಕಡಿಮೆ ಮಾಡುವುದು ಮತ್ತು ಕಡಿಮೆ ಲಿಬರಲ್ ಆಗುವ ಅಮೆರಿಕದ ನೀತಿಯು ಅಂತಹ ವಜಾಗೊಳಿಸುವಿಕೆಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಈಗಾಗಲೇ ಭಾರತದಲ್ಲಿರುವ ಒರಾಕಲ್‌ನ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದರೂ, ಅಮೆರಿಕದಲ್ಲಿರುವ ಒರಾಕಲ್ ಕಂಪನಿಯ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಇನ್ನು ಕೆನಡಾದಲ್ಲಿರುವ ಉದ್ಯೋಗಿಗಳಿಗೆ ಈ ವಾರ ಮಾಹಿತಿ ಸಿಗುವ ಸಾಧ್ಯತೆ ಇದೆ. ನಿಖರ ಸಂಖ್ಯೆಯ ಅಧಿಕೃತ ದೃಢೀಕರಣವಿಲ್ಲದಿದ್ದರೂ, ವಿಶ್ವದ ಇತರ ಪ್ರದೇಶಗಳಲ್ಲಿನ ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಅಚ್ಚರಿ ಎನ್ನುವಂತೆ, ಒರಾಕಲ್ ವರ್ಜೀನಿಯಾದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ, ಆದರೆ ಮೆಕ್ಸಿಕೋದಲ್ಲಿ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಒರಾಕಲ್ ಇಂಡಿಯಾದಲ್ಲಿ ಒಟ್ಟು 28 ರಿಂದ 30 ಸಾವಿರ ಉದ್ಯೋಗಿಗಳಿದ್ದರೆ, ಜಾಗತಿಕವಾಗಿ ಅಂದಾಜು 1.62 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ಹಲವು ವರ್ಷಗಳಿಂದ ಭಾರತವೇ ಒರಾಕಲ್ ಕಂಪನಿಗೆ ಪ್ರಮುಖ ನೆಲೆಯಾಗಿತ್ತು. ಈಗ ಭಾರತದಲ್ಲಿ ಅಂದಾಜು 3 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ನಿಶ್ಚಿತವಾಗಿದೆ.
ಇನ್ನೂ ಕೆಲವು ಮೂಲಗಳ ಪ್ರಕಾರ ಒರಾಕಲ್ ತನ್ನ ಕೆಲಸದಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇತ್ತೀಚೆಗೆ ಕಂಪನಿ ಓಪನ್‌ಎಐ ಜೊತೆ ಒಪ್ಪಂದ ಕೂಡ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ, ಡೇಟಾ ಸಂಸ್ಕರಿಸಲು 'ಸ್ಟಾರ್‌ಗೇಟ್' ಯೋಜನೆಯ ಭಾಗವಾಗಿ, ಓಪನ್‌ಎಐ ಒರಾಕಲ್‌ನ ಸೌಲಭ್ಯಗಳು/ವ್ಯವಸ್ಥೆಗಳನ್ನು ಬಾಡಿಗೆಗೆ ಪಡೆಯಲಿದೆ. ಈ ಯೋಜನೆಯು ಒರಾಕಲ್ ಮತ್ತು ಸಾಫ್ಟ್‌ಬ್ಯಾಂಕ್ ಗ್ರೂಪ್ ನಡುವಿನ ಒಪ್ಪಂದವಾಗಿದ್ದು, ಇದು ಎಐ ಮೂಲಸೌಕರ್ಯದಲ್ಲಿ ಶತಕೋಟಿ ಡಾಲರ್‌ಗಳ ಹೂಡಿಕೆಯನ್ನು ಕಾಣಲಿದೆ.