ಕಲಬುರಗಿಯಲ್ಲಿ ಏಪ್ರಿಲ್ 16 ರಂದು ನಡೆಯುವ ಉದ್ಯೋಗ ಮೇಳಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣನ್ಯೂಸ್
ಕಲಬುರಗಿ (ಏ.13): ಕಲಬುರಗಿಯಲ್ಲಿ ಏಪ್ರಿಲ್ 16 ರಂದು ನಡೆಯುವ ಉದ್ಯೋಗ ಮೇಳಕ್ಕೆ ಕಲಬುರಗಿ ವಿಭಾಗದ ವಿವಿಧ ಜಿಲ್ಲೆಗಳಿಂದ ಉದ್ಯೋಗ ಆಕಾಂಕ್ಷಿಗಳು ಆಗಮಿಸಲು ಅನುಕೂಲವಾಗುವಂತೆ ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ. ರವಿವಾರ ಬೆಂಗಳೂರಿನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿವಿಧ ಅಧಿಕಾರಿಗಳ ಸಭೆ ನಡೆಸಿದ ಅವರು, ವಿಭಾಗ ಮಟ್ಟದ ಉದ್ಯೋಗ ಮೇಳ ಇದಾಗಿರುವುದರಿಂದ 7 ಜಿಲ್ಲಾ ಕೇಂದ್ರ ಹಾಗೂ ಅಭ್ಯರ್ಥಿಗಳ ನೋಂದಣಿ ಅನುಗುಣವಾಗಿ ತಾಲೂಕಾ ಕೇಂದ್ರದಿಂದ ಸಹ ಬಸ್ ವ್ಯವಸ್ಥೆ ಮಾಡಿ ಮುಂಚಿತವಾಗಿ ಬಸ್ ಬಿಡುವ ಸ್ಥಳ ಮತ್ತು ಸಮಯದ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಕೆ.ಕೆ.ಆರ್.ಟಿ.ಸಿ. ಎಂ.ಡಿ. ಎಂ.ರಾಚಪ್ಪ ಅವರಿಗೆ ಸೂಚಿಸಿದರು.
ಬೃಹತ್ ಉದ್ಯೋಗ ಮೇಳ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಪ್ರದೇಶದ ಶಾಸಕರು-ಸಂಸದರು ಹಾಗೂ ಇತರೆ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಗಮಿಸುವುದರಿಂದ ಕುಡಿಯುವ ನೀರು, ಶಾಮಿಯಾನದ ವ್ಯವಸ್ಥೆ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಬೇಕು. ಜನಸಂದಣಿ ನಿಯಂತ್ರಣಕ್ಕೆ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದ ಸಚಿವರು, ಉದ್ಯೋಗ ಮೇಳ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೊಕಾರ್ಪಣೆಯ ಕಾರ್ಯಕ್ರಮಕ್ಕೆ ಪ್ರತ್ಯೇಕವಾಗಿ ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಡಿ.ಸಿ ಫೌಜಿಯಾ ತರನ್ನುಮ್ ಅವರಿಗೆ ನಿರ್ದೇಶನ ನೀಡಿದರು.
ಬ್ಯಾಂಕ್ ಆಫ್ ಬರೋಡಾದಲ್ಲಿ ದೇಶದಾದ್ಯಂತ ಉದ್ಯೋಗಾವಕಾಶ!
ಪುಣೆ,ಹೈದ್ರಾಬಾದ್ ಕಂಪನಿಗಳನ್ನು ಕರೆತನ್ನಿ:
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಉದ್ಯೋಗ ಮೇಳಕ್ಕೆ ನೆರೆಯ ಪುಣೆ, ಹೈದ್ರಾಬಾದ ಮಹಾನಗರದ ಕಂಪನಿಗಳು ಭಾಗವಹಿಸುವಂತೆ ಹೆಚ್ಚು ಮುತುವರ್ಜಿ ವಹಿಸಬೇಕು. ಎಫ್.ಕೆ.ಸಿ.ಸಿ.ಐ ಅವರನ್ನು ಸಂಪರ್ಕಿಸಿ ಕಂಪನಿಗಳನ್ನು ಕರೆತರುವ ಕೆಲಸ ಮಾಡಿ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಅವರಿಗೆ ಸೂಚಿಸಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಮಾತನಾಡಿ, ಇದುವರೆಗೆ 30 ವಿವಿಧ ವಲಯದ 275 ಉದ್ಯೋಗದಾತ ಕಂಪನಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 157 ಕಂಪನಿಗಳು ನೇರವಾಗಿ, 80 ಹೆಚ್.ಆರ್. ಕನ್ಸಲಟೆಂಸಿಗಳು ಹಾಗೂ 37 ಪೇ ರೋಲ್ ಕಂಪನಿಗಳು ಸೇರಿವೆ. ಇನ್ಫೋಸಿಸ್, ವಿಪ್ರೋದಂತಹ ಐ.ಟಿ. ದೈತ್ಯ ಕಂಪನಿಗಳನ್ನು ಕರೆತರುವ ಪ್ರಯತ್ನ ನಡೆದಿದೆ. 157 ಕಂಪನಿಗಳು ನೇರವಾಗಿ, 80 ಹೆಚ್.ಆರ್. ಕರೆನ್ಸಿಗಳ ಹಾಗೂ 37 ಪೇ ರೋಲ್ ಕಂಪನಿಗಳು ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಇನ್ನು ಎರಡು ದಿನ ಬಾಕಿ ಇರುವ ಕಾರಣ ಐ.ಇ.ಸಿ. ಚಟುವಟಿಕೆ ತೀವ್ರಗೊಳಿಸಿ ಹೆಚ್ಚಿನ ನೋಂದಣಿ ಮಾಡಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಸುಮಾರು 25 ಸಾವಿರ ಜನ ನೋಂದಣಿ ನಿರೀಕ್ಷೆ ಹೊಂದಿದ್ದು, ಕೂಡಲೆ ಮಾಧ್ಯಮಗಳನ್ನು ಬಳಸಿ ಹೆಚ್ಚು ಪ್ರಚಾರ ಕಾರ್ಯ ಮಾಡಬೇಕು ಎಂದರು.
ಕರ್ನಾಟಕ ಕೌಲಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಮಾತನಾಡಿ ಈ ಬಾರಿ ಉದ್ಯೋಗ ಮೇಳದಲ್ಲಿ ಆಯಾ ಕಂಪನಿಗಳ ಲೆಟರ್ ಹೆಡ್ ನಲ್ಲಿಯೇ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ತಿಳಿಸಲಾಗಿದೆ. ಇಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಟರ್ ಸೇರಿದಂತೆ ಮೇಳದಲ್ಲಿ ಭಾಗವಹಿಸುವ ಪ್ರತಿ ಅಭ್ಯರ್ಥಿಯ ದತ್ತಾಂಶ ಸಂಗ್ರಹಿಸಲಾಗುವುದು. ಇಲ್ಲಿ ಉದ್ಯೋಗ ಸಿಗದವರಿಗೆ ಮುಂದಿನ ದಿನದಲ್ಲಿ ಅಗತ್ಯ ತರಬೇತಿ ನೀಡಿ ಪ್ಲೇಸ್ ಮೆಂಟ್ ದೊರೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನಸಭೆ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು
ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.