
ಮುಂಬೈ (ಆ.27) ಕಚೇರಿ, ಫ್ಯಾಕ್ಟರಿ ಸೇರಿದಂತೆ ಯಾವುದೇ ಕ್ಷೇತ್ರವಾಗಿರಲಿ ಸದ್ಯ ಭಾರತದಲ್ಲಿ 8 ರಿಂದ 9 ಗಂಟೆ ಕೆಲಸದ ಸಮಯವಿದೆ. ಇದು ಹೆಚ್ಚಾಗಬೇಕು ಅನ್ನೋ ಕೂಗನ್ನು ಹಲವು ಕಂಪನಿ ಸಂಸ್ಥಾಪಕರು ವ್ಯಕ್ತಪಡಿಸಿದ್ದಾರೆ. ಈ ಪೈಕಿ ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸಕ್ಕ ಸೂಚಿಸಿದರೆ, ಎಲ್ ಆ್ಯಂಡ್ ಟಿ ಮುಖ್ಯಸ್ಥ ಸುಬ್ರಹ್ಮಣ್ಯ ವಾರದಲ್ಲಿ 90 ಗಂಟೆ ಕೆಲಸಕ್ಕೆ ಸೂಚಿಸಿದ್ದರು. ಈ ಚರ್ಚೆ, ವಿವಾದ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರ ಸದ್ದಿಲ್ಲದೆ ಖಾಸಗಿ ವಲಯದಲ್ಲಿನ ಕೆಲಸದ ಸಮಯವನ್ನು ದಿನಕ್ಕೆ 10ಗಂಟೆಗೆ ವಿಸ್ತರಿಸಲು ಮುಂದಾಗಿದೆ. ಈ ಕುರಿತು ಕಾರ್ಮಿಕ ಸಚಿವಾಲಯ ತಿದ್ದುಪಡಿ ತರಲು ಕರಡು ಸಿದ್ಧಪಡಿಸಿ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸಿದೆ.
ಮಹಾರಾಷ್ಟ್ರ ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಶ್‌ಮೆಂಟ್ ಕಾಯ್ದೆ 2017ರ ಅಡಿಯಲ್ಲಿ ಕಾರ್ಮಿಕರ ಕೆಲಸದ ಸಮಯ ನಿಗಧಿಪಡಿಸಲಾಗಿದೆ. ಹೊಟೆಲ್, ಮನರಂಜನೆ ಕ್ಷೇತ್ರ ಸೇರದಂತೆ ಹಲವು ಖಾಸಗಿ ಕ್ಷೇತ್ರಗಳ ಕೆಲಸದ ಅವದಿಯನ್ನು 20017 ಕಾಯ್ದೆಯಡಿ ನಿಗದಿಪಡಿಸಲಾಗಿದೆ. ಇದೀಗ ಈ ಕಾಯ್ದೆಗೆ ತಿದ್ದುಪಡಿ ತಂದು ಸದ್ಯ ಇರುವ 9 ಗಂಟೆ ಕೆಲಸದ ಅವಧಿಯನ್ನು 10 ಗಂಟೆಗೆ ವಿಸ್ತರಿಸಲು ಮಹಾರಾಷ್ಟ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಈ ಕಾಯ್ದೆಯಲ್ಲಿ ಐದು ಪ್ರಮುಖ ಬದಲಾವಣೆ ತರಲು ಕಾರ್ಮಿಕ ಸಚಿವಾಲಯ ಮುಂದಾಗಿದೆ.
2017ರ ಕಾಯ್ದೆಯಡಿ ಬರುವ ಖಾಸಗಿ ಕ್ಷೇತ್ರಗಳಲ್ಲಿ ಪ್ರತಿ ದಿನ ಕೆಲಸದ ಸಮಯ 10 ಗಂಟೆಗೆ ವಿಸ್ತರಿಸಲಾಗುತ್ತಿದೆ. 10 ಗಂಟೆಗೂ ಹೆಚ್ಚು ದುಡಿಸಿಕೊಳ್ಳುವಂತಿಲ್ಲ ಎಂದು ಸೆಕ್ಷನ್ 12ರಲ್ಲಿ ತಿದ್ದುಪಡಿ ತರಲು ಮುಂದಾಗಿದೆ. ಸತತವಾಗಿ ಗರಿಷ್ಠ 6 ಗಂಟೆ ಕೆಲಸ ಮಾಡಬಹುದು. ಇದರ ಬಳಿಕ ಕನಿಷ್ಠ 30 ನಿಮಿಷಗಳ ಬ್ರೇಕ್ ನೀಡಬೇಕು. ಸದ್ಯ ಸತತವಾಗಿ 5 ಗಂಟೆ ಕೆಲಸ ಮಾಡುವ ನಿಯಮವಿದೆ. ಇದನ್ನು 6 ಗಂಟೆ ವಿಸ್ತರಿಸಿ ಅರ್ಧಗಂಟೆ ಬ್ರೇಕ್ ನೀಡಲು ಪ್ರಸ್ತಾಪ ಸಲ್ಲಿಸಲಾಗಿದೆ.
ಓವರ್ ಟೈಮ್ ಡ್ಯೂಟಿ ಮಾಡುವ ನಿಯಮದಲ್ಲೂ ಕೆಲ ಬದಲಾವಣೆ ಮಾಡಲಾಗುತ್ತಿದೆ. ಸದ್ಯ ಮೂರು ತಿಂಗಳಿಗೆ 125 ಗಂಟೆ ಓವರ್ ಟೈಮ್ ಡ್ಯೂಟಿ ಮಾಡಲು ಅವಕಾಶವಿದೆ. ಈ ಸಮಯವನ್ನು 144 ಗಂಟೆಗೆ ವಿಸ್ತರಿಸಲಾಗುತ್ತದೆ. ಸದ್ಯ ಪ್ರತಿ ದಿನ ಡ್ಯೂಟಿ ಹಾಗೂ ಓರ್ ಟೈಮ್ ಡ್ಯೂಟಿ 10.5 ಗಂಟೆ ಮೀರುವಂತಿಲ್ಲ. ಇದನ್ನು ಪ್ರತಿ ದಿನ 12 ಗಂಟೆಗೆ ವಿಸ್ತರಿಸಲಾಗುತ್ತದೆ. ಗರಿಷ್ಠ ಒಂದು ದಿನ ಒಬ್ಬ ಕಾರ್ಮಿಕ ತನ್ನ ಕೆಲಸ ಹಾಗೂ ಓವರ್ ಟೈಮ್ 12 ಗಂಟೆ ಮಾತ್ರ ಮಾಡಲು ಸಾಧ್ಯ. ಅದಕ್ಕಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ, ಮಾಡುವಂತಿಲ್ಲ ಎಂಬು ತಿದ್ದುಪಡಿ ನಿಯಮ ತರಲಾಗುತ್ತಿದೆ.