
ನವದೆಹಲಿ (ಜು.02) ಐಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಲೇ ಇದೆ. ಇದರ ಜೊತೆಗೆ ಹೆಚ್ಚಿನ ಸಮಯ ಕೆಲಸ ಸೇರಿದಂತೆ ಹಲವು ಒತ್ತಡಗಳು ಹೆಚ್ಚಾಗುತ್ತಿದೆ. ಉದ್ಯೋಗ ಕಳೆದುಕೊಂಡು ಬಳಿಕ ಮರಳಿ ಕೆಲಸಕ್ಕೆ ಸೇರುವುದು ಅತೀ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಹೀಗಿರುವ ವಾರ್ಷಿಕ 45 ಲಕ್ಷ ರೂಪಾಯಿ ವೇತನದ ಟೆಕ್ಕಿ ದಿಢೀರ್ ಉದ್ಯೋಗ ಕಳೆದುಕೊಂಡಿದ್ದಾನೆ. ಕಂಪನಿಯ ಉದ್ಯೋಗ ಕಡಿತದಿಂದ ಈ ಟೆಕ್ಕಿ ಉದ್ಯೋಗ ಕಳೆದುಕೊಂಡಿದ್ದಾನೆ. ಕೆಲ ಕಂಪನಿಗಳಿಗೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದಾನೆ. ಬೆಂಗಳೂರು ಸೇರಿದಂತೆ ಭಾರತದಲ್ಲಿರುವ ಕಂಪನಿಯಿಂದ ಆಫರ್ ಬಂದಿಲ್ಲ. ಹೀಗಿರುವಾಗ ಜರ್ಮನಿಯಿಂದ ವಾರ್ಷಿಕ 80 ಲಕ್ಷ ರೂಪಾಯಿ ವೇತನದ ಜಾಬ್ ಆಫರ್ ಬಂದಿದೆ. ಆದರೆ ಈ ಆಫರ್ ಒಪ್ಪಿಕೊಳ್ಳಲು ಈ ಟೆಕ್ಕಿ ಮೀನಾಮೇಶ ಎಣಿಸುತ್ತಿದ್ದಾರೆ. ಜರ್ಮನಿ ಆಫರ್ ಒಪ್ಪಿಕೊಳ್ಳಬೇಕಾ, ಬೇಡವೇ ಅನ್ನೋ ಗೊಂದಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಲಹೆ ಕೇಳಿದ್ದಾನೆ.
80 ಲಕ್ಷ ರೂ ಕೆಲಸ ಒಪ್ಪಿಕೊಳ್ಳಬೇಕಾ?
ಈ ಕುರಿತು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿರುವ ಟೆಕ್ಕಿ ತನ್ನ ಗೊಂದಲ ಹೇಳಿಕೊಂಡಿದ್ದಾನೆ. ನಾನು ಸಾಫ್ಟ್‌ವೇರ್ ಎಂಜಿನಿಯರ್, 8 ವರ್ಷಗಳ ಅನುಭವ ಹೊಂದಿದ್ದೇನೆ. ವಾರ್ಷಿಕ 45 ಲಕ್ಷ ರೂಪಾಯಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದೇನೆ. ಆದರೆ ಇತ್ತೀಚೆಗೆ ಉದ್ಯೋಗ ಕಡಿತದಿಂದ ನಾನು ಕೆಲಸ ಕಳೆದುಕೊಂಡಿದ್ದೇನೆ. ಇದಾದ ಬಳಿಕ ಹಲವು ಕಂಪನಿಗಳಿಗೆ ಸಂದರ್ಶನ ನೀಡುತ್ತಿದ್ದೇನೆ. ಕೆಲಸಕ್ಕಾಗಿ ಅರ್ಜಿಸಲ್ಲಿಸಿದ್ದೇನೆ. ಭಾರತದ ಪ್ರಮುಖ ನಗರಗಳ ಕಂಪನಿ, ಭಾರತದಿಂದ ಹೊರಗಿರುವ ಕಂಪನಿಗಳಿಗೂ ಅರ್ಜಿ ಸಲ್ಲಿಸಿದ್ದೇನೆ. ಜರ್ಮನಿಯ ಬರ್ಲಿನ್‌ನಲ್ಲಿರುವ ಫಿನ್‌ಟೆಕ್ ಕಂಪನಿಯ ಸಂದರ್ಶನದ ಕರೆ ಬಂದಿತ್ತು. ಆನ್‌ಲೈನ್ ಮೂಲಕ ಸಂದರ್ಶನ ಕೊಟ್ಟದ್ದೆ. ಇದೀಗ ಕಂಪನಿ ಕೆಲಸದ ಆಫರ್ ನೀಡಿದೆ. ವಾರ್ಷಿಕ 80 ಲಕ್ಷ ರೂಪಾಯಿ ವೇತನ ಆಫರ್ ಮಾಡಿದೆ. ಆದರೆ ಈ ಕೆಲಸಕ್ಕೆ ನಾನು ಹೋಗಬೇಕಾ? ಜರ್ಮನಿಗೆ ಸ್ಥಳಾಂತರಗೊಳ್ಳಬೇಕಾ ಎಂದು ಟೆಕ್ಕಿ ಗೊಂದಲದಲ್ಲಿ ಪ್ರಶ್ನಿಸಿದ್ದಾನೆ.
ಬಹುತೇಕರ ಕೊಟ್ಟ ಉತ್ತರ ಬೇಡ
ಒಂದೆಡೆ ಕೆಲಸ ಕಳೆದುಕೊಂಡ ಟೆಕ್ಕಿಗೆ ಕೆಲಸ ಸಿಕ್ಕಿದೆ. ಅದು ಕೂಡ ಡಬಲ್ ಸ್ಯಾಲರಿ. 45 ಲಕ್ಷ ರೂಪಾಯಿ ಪಡೆಯುತ್ತಿದ್ದ ಟೆಕ್ಕಿಗೆ ಇದೀಗ 80 ಲಕ್ಷ ರೂಪಾಯಿ ಆಫರ್. ಆದರೆ ಬಹುತೇಕರು ಈ ಆಫರ್ ಒಪ್ಪಿಕೊಳ್ಳುವುದು ಬೇಡ, ಈ ಆಫರ್ ಹಿಡಿದು ಜರ್ಮನಿಗೆ ಸ್ಥಳಾಂತರವಾಗುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಕೆಲ ಕಾರಣಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಜರ್ಮನಿಯಲ್ಲಿ ಲೀವಿಂಗ್ ಕಾಸ್ಟ್ ತುಂಬಾ ಹೆಚ್ಚು. ದಿನ ನಿತ್ಯದ ಖರ್ಚು ವೆಚ್ಚ, ಮನೆ ಬಾಡಿಗೆ, ಕುಟುಂಬವಿದ್ದರೆ ಖರ್ಚು ವೆಚ್ಚಗಳು ಬಲು ದುಬಾರಿ. ಇನ್ನು ಶೇಕಡಾ 35 ರಿಂದ 50 ರಷ್ಟು ತೆರಿಗೆ ಪಾವತಿಸಬೇಕು. ಇವೆಲ್ಲಾ ಕಳೆದರೆ ಕೈಯೆಲ್ಲಿ 1 ಲಕ್ಷ ರೂಪಾಯಿ ಬಾಕಿ ಉಳಿಯುವುದು ಕಷ್ಟ. ಬಾಕಿ ಉಳಿಸಬೇಕು ಎಂದರೆ ಎಲ್ಲವನ್ನು ತ್ಯಾಗ ಮಾಡಿ ಜರ್ಮನಿಯಲ್ಲಿ ಜೀವನ ಸಾಗಿಸಬೇಕು ಎಂದಿದ್ದಾರೆ. ಹೀಗಾಗಿ ಈ ಆಫರ್ ಒಪ್ಪಿಕೊಳ್ಳುವುದುಕ್ಕಿಂತ ಭಾರತದಲ್ಲಿ ಉಳಿಯುವುದೇ ಉತ್ತಮ ಎಂದಿದ್ದಾರೆ.
ಜರ್ಮನಿಯಲ್ಲಿ ತೆರಿಗೆ ಹೆಚ್ಚು. ಇನ್ನು ವಾರ್ಷಿಕ ವೇತನ ಹೆಚ್ಚಳ ಪಾಲಿಸಿ ಕೇವಲ 1 ರಿಂದ 2 ಶೇಕಡಾ ಮಾತ್ರ. ಇದರ ಜೊತೆಗೆ ಜನಾಂಗೀಯ ನಿಂದನೆ ಪ್ರಕರಣಗಳು ಹೆಚ್ಚು. ವಿದೇಶಿಗರನ್ನು ಅದರಲ್ಲೂ ಭಾರತೀಯರನ್ನು ಟಾರ್ಗೆಟ್ ಮಾಡುತ್ತಾರೆ. ಇನ್ನು 2026ರಲ್ಲಿ ಇದ್ದಂತ ಜರ್ಮನಿ ಈಗಿಲ್ಲ. ಜರ್ಮನಿ ಹಿಂದಿನಂತೆ ಸುರಕ್ಷತೆ ಇಲ್ಲ. ಹೀಗಾಗಿ ಭಾರತದಿಂದ ಜರ್ಮನಿ ಅದೂ ಕೂಡ 80 ಲಕ್ಷ ರೂಪಾಯಿ ವೇತನ ಒಪ್ಪಿಕೊಳ್ಳುವುದು ಉತ್ತಮ ನಿರ್ಧಾರವಲ್ಲ ಎಂದು ಸಲಹೆ ನೀಡಿದ್ದಾರೆ.