
ಬೆಂಗಳೂರು (ಏ.30): ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಐಟಿ ಕ್ಷೇತ್ರವನ್ನು ಮರುರೂಪಿಸುತ್ತಿರುವ ಬೆನ್ನಲ್ಲೇ, ಭಾರತದ ಪ್ರಮುಖ ಐಟಿ ದೈತ್ಯ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಇನ್ಫೋಸಿಸ್ ಕಂಪನಿಯು ಯಾವುದೇ ರೀತಿಯ ಉದ್ಯೋಗ ಕಡಿತ (Layoffs) ಮಾಡುವುದಿಲ್ಲ ಎಂದು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಸ್ಪಷ್ಟಪಡಿಸಿದ್ದಾರೆ. ಕಂಪನಿಯು 'ಎಐ' ಅಲೆಗೆ ತಕ್ಕಂತೆ ತನ್ನ ಉದ್ಯೋಗಿಗಳಿಗೆ ಮರುತರಬೇತಿ (Reskilling) ನೀಡುವ ಮೂಲಕ ಮತ್ತು ಹೊಸ ನೇಮಕಾತಿಗಳ ಮೂಲಕ ಪ್ರಗತಿ ಸಾಧಿಸಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಲೀಲ್ ಪರೇಖ್, "ಕಳೆದ ಒಂದು ವರ್ಷದಲ್ಲಿ ನಾವು ಯಾವುದೇ ಉದ್ಯೋಗ ಕಡಿತ ಮಾಡಿಲ್ಲ ಮತ್ತು ಮುಂದೆಯೂ ಅಂತಹ ಯಾವುದೇ ಮುನ್ಸೂಚನೆಗಳಿಲ್ಲ" ಎಂದು ಹೇಳಿದ್ದಾರೆ. ಇತರ ಐಟಿ ಸಂಸ್ಥೆಗಳು ಆಟೋಮೇಷನ್ ನೆಪದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಾಗ ಇನ್ಫೋಸಿಸ್ ಈ ನಿರ್ಧಾರಕ್ಕೆ ಬಂದಿರುವುದು ಗಮನಾರ್ಹ. ಬೆಂಗಳೂರು ಮೂಲದ ಈ ಕಂಪನಿಯು ಈ ವರ್ಷವೂ ಸುಮಾರು 20,000 ಪದವೀಧರರನ್ನು ಕ್ಯಾಂಪಸ್ ನೇಮಕಾತಿ ಮೂಲಕ ಕೆಲಸಕ್ಕೆ ಸೇರಿಸಿಕೊಳ್ಳಲು ಯೋಜಿಸಿದೆ. ಕಳೆದ ವರ್ಷ ಕೂಡ ಇಷ್ಟೇ ಪ್ರಮಾಣದಲ್ಲಿ ನೇಮಕಾತಿ ನಡೆದಿತ್ತು.
ಕೃತಕ ಬುದ್ಧಿಮತ್ತೆಯು ಕೆಲಸದ ಸ್ವರೂಪವನ್ನು ಬದಲಿಸಬಹುದು ಆದರೆ ಕೆಲಸವನ್ನು ಇಲ್ಲದಂತೆ ಮಾಡುವುದಿಲ್ಲ ಎಂಬುದು ಪರೇಖ್ ಅವರ ಬಲವಾದ ವಾದ. ಎಐ ತಂತ್ರಜ್ಞಾನವು ಕೆಲಸದ ವ್ಯಾಪ್ತಿಯನ್ನು ವಿಸ್ತರಿಸುತ್ತದೆಯೇ ಹೊರತು ಕುಗ್ಗಿಸುವುದಿಲ್ಲ. ಆರಂಭಿಕ ಹಂತದ (Entry-level) ಕೆಲಸಗಳ ಸ್ವರೂಪ ಬದಲಾಗಬಹುದು, ಆದರೆ ಪ್ರತಿಭೆಗಳಿಗೆ ಬೇಡಿಕೆ ಇದ್ದೇ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ಫೋಸಿಸ್ ತನ್ನ ಇಂಜಿನಿಯರ್‌ಗಳಿಗೆ ಎಐ ಪರಿಕರಗಳೊಂದಿಗೆ ಮತ್ತು ಅವುಗಳಿಲ್ಲದೆಯೂ ಕೆಲಸ ಮಾಡುವಂತೆ ತರಬೇತಿ ನೀಡುತ್ತಿದೆ. ಇದರಿಂದ ಎಐ ಸಿದ್ಧಪಡಿಸಿದ ಕೋಡ್‌ಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯವನ್ನು ಅವರು ಬೆಳೆಸಿಕೊಳ್ಳಲಿದ್ದಾರೆ.
ಇನ್ಫೋಸಿಸ್ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೂ, ಇತರ ಐಟಿ ಕಂಪನಿಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಜುಲೈ 2025 ರಲ್ಲಿ ಟಿಸಿಎಸ್ (TCS) ಸುಮಾರು 12,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಎಚ್‌ಸಿಎಲ್ ಟೆಕ್ (HCLTech), ಒರಾಕಲ್ (Oracle) ಮತ್ತು ಇತ್ತೀಚೆಗೆ ಕಾಗ್ನಿಜೆಂಟ್ (Cognizant) ಕಂಪನಿಗಳು ಕೂಡ ಉದ್ಯೋಗಿಗಳನ್ನು ಮರುಹಂಚಿಕೆ ಅಥವಾ ಕಡಿತಗೊಳಿಸುವ ಪ್ರಕ್ರಿಯೆಯಲ್ಲಿವೆ.
ಪ್ರಸ್ತುತ ಇನ್ಫೋಸಿಸ್‌ನ ಒಟ್ಟು ಆದಾಯದಲ್ಲಿ ಶೇ. 5.5 ರಷ್ಟು ಕೊಡುಗೆ ಎಐ ತಂತ್ರಜ್ಞಾನದಿಂದ ಬರುತ್ತಿದೆ. ಇದು ಮುಂದಿನ ದಿನಗಳಲ್ಲಿ ಕಂಪನಿಯ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಯಾಗಲಿದೆ. ಈ ಬದಲಾವಣೆಯನ್ನು ವೇಗಗೊಳಿಸಲು ಇನ್ಫೋಸಿಸ್ ಕಂಪನಿಯು OpenAI ಮತ್ತು Anthropic ನಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಅಲ್ಲದೆ ತನ್ನದೇ ಆದ 'Topaz Fabric' ನಂತಹ ಆಂತರಿಕ ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಿದೆ.