Latest Videos

ಸ್ಯಾಲರಿ ಹೈಕ್‌ ಬೇಕಾ? ಹಾಗಿದ್ರೆ ಆಫೀಸ್‌ಗೆ ಬನ್ನಿ; ಉದ್ಯೋಗಿಗಳಿಗೆ ಗೂಗಲ್‌ ನೋಟಿಸ್‌!

By Santosh NaikFirst Published Jun 9, 2023, 4:24 PM IST
Highlights

ಬುಧವಾರ ತನ್ನೆಲ್ಲಾ ಉದ್ಯೋಗಿಗಳಿಗೆ ಆಂತರಿಕ ಈ ಮೇಲ್‌ ಕಳಿಸಿರುವ ಗೂಗಲ್‌, ಎಲ್ಲಾ ಉದ್ಯೋಗಿಗಳು ಶೀಘ್ರದಲ್ಲಿಯೇ ಮರಳಿ ಆಫೀಸ್‌ಗೆ ಬಂದು ನಿಗದಿತವಾಗಿ ಕೆಲಸ ಮಾಡುವ ದಿನಚರಿಯನ್ನು ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದೆ.
 


ನವದೆಹಲಿ (ಜೂ. 9): ಕೋವಿಡ್‌ 19 ಎನ್ನುವುದು ಬಹುಶಃ ಈಗ ಹಳೆಯ ಸುದ್ದಿ. ಈಗ ವಿಶ್ವದ ಬಹುತೇಕ ಕಂಪನಿಗಳು ಒಂದಲ್ಲಾ ಒಂದು ರೀತಿಯಲ್ಲಿ ತನ್ನೆಲ್ಲಾ ಉದ್ಯೋಗಳಿಗಳನ್ನು ಕಚೇರಿಗೆ ಮರಳಿ ಕರೆಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭ ಮಾಡುತ್ತಿದೆ. ಈಗ ಮರಳಿ ಕಚೇರಿಗೆ ಬಂದು ಕೆಲಸ ಮಾಡುವ ನಿಯಮವನ್ನು ಇನ್ನಷ್ಟು ಕಠಿಣ ಮಾಡಿದ ಕಂಪನಿಗಳ ಸಾಲಿಗೆ ಗೂಗಲ್‌ ಸೇರ್ಪಡೆಯಾಗಿದೆ. ಆ ಮೂಲಕ ತನ್ನ ಉದ್ಯೋಗಿಗಳು ಹೆಚ್ಚಾಗಿ ಕಂಪನಿಯ ಇತರ ಉದ್ಯೋಗಿಗಳ ಜೊತೆ ಬೆರೆಯಬೇಕು ಎನ್ನುವ ಗುರು ಇರಿಸಲಾಗಿದೆ. ಆಂತರಿಕವಾಗಿ ಕಳಿಸಿರುವ ಈ ಮೇಲ್‌ನಲ್ಲಿ  ಉದ್ಯೋಗಿಗಳನ್ನು ವಾರಕ್ಕೆ ಮೂರು ದಿನ ಕಚೇರಿಗೆ ಬರುವುದು ಕಡ್ಡಾಯ ಮಾಡುವುದು ಮಾತ್ರವಲ್ಲ, ಪ್ರತಿ ವರ್ಷದ ಉದ್ಯೋಗಿಯ ನಿರ್ವಹಣೆಯ ಪರಿಶೀಲನೆಯ ಸಮಯದಲ್ಲಿ ಅವರ ಕಚೇರಿ ಹಾಜರಾತಿಯನ್ನೂ ಪ್ರಮುಖ ಅಂಶವನ್ನಾಗಿ ಪರಿಗಣಿಸುವುದಾಗಿ ತಿಳಿಸಿದೆ. ಹಾಗಾಗಿ ವಾರದಲ್ಲಿ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಗೂಗಲ್‌ ತಿಳಿಸಿದೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ಸುದ್ದಿ ಪ್ರಕಟ ಮಾಡಿದೆ.

ಅದರೊಂದಿಗೆ ವರ್ಕ್‌ ಫ್ರಂ ಹೋಮ್‌ ಮಾಡುತ್ತಿರುವ ಉದ್ಯೋಗಿಗಳ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಏರಿಕೆ ಮಾಡುವುದಾಗಲಿ, ಈಗಿರುವ ವರ್ಕ್‌ ಫ್ರಂ ಹೋಮ್‌ಅನ್ನು ಉದ್ಯೋಗಿಗಳಿಗೆ ಶಾಶ್ವತ ಮಾಡುವ ಯಾವುದೇ ಯೋಜನೆಗಳು ಗೂಗಲ್‌ಗೆ ಇಲ್ಲ. ತೀರಾ ಅಪರೂಪದ ಪ್ರಸಂಗಗಳಲ್ಲಿ ಮಾತ್ರವೇ, ಸಂಪೂರ್ಣವಾಗಿ ವರ್ಕ್‌ ಫ್ರಂ ಹೋಮ್‌ ಅವಕಾಶ ನೀಡುವುದಾಗಿ ತಿಳಿಸಿದೆ.

ನಮ್ಮ ಉದ್ಯೋಗಿಗಳು ಈಗಾಗಲೇ ಒಂದು ವರ್ಷದಿಂದ ಹೈಬ್ರಿಡ್‌ ಮಾಡೆಲ್‌ಅಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರದಲ್ಲಿ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಉಳಿದ ಎರಡು ದಿನವನ್ನು ವರ್ಕ್‌ ಫ್ರಂ ಹೋಮ್‌ ಮಾಡುತ್ತಿದ್ದಾರೆ ಎಂದು ಗೂಗಲ್‌ ವಕ್ತಾರ ರಾನ್‌ ಲಾಮೋಂಟ್‌ ತಿಳಿಸಿದ್ದಾರೆ. ಇದು ಉತ್ತಮವಾಗಿ ಸಾಗುತ್ತಿದೆ. ನಮ್ಮ ಉದ್ದೇಶ ಏನೆಂದರೆ ಗೂಗಲರ್‌ಗಳು ಎಲ್ಲರ ಜೊತೆಯನ್ನೂ ಬೆರೆಯಬೇಕು. ಹಾಗಾಗಿ ತೀರಾ ಅಪರೂಪದ ಪ್ರಸಂಗದಲ್ಲಿ ಮಾತ್ರವೇ ವರ್ಕ್‌ ಫ್ರಂ ಹೋಮ್‌ ನೀಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ, ವಾರದಲ್ಲಿ ಮೂರು ದಿನವನ್ನು ಕಚೇರಿಯಲ್ಲಿ ಬಂದು ಕೆಲಸ ಮಾಡಿ ಎಂದು ಹೇಳಿದ ಮೊದಲ ಕಂಪನಿ ಗೂಗಲ್‌. ಕೋವಿಡ್‌-19 ಸಾಂಕ್ರಾಮಿಕದ ಕಾರಣದಿಂದಾಗಿ ಅಂದಾಜು ಎರಡು ವರ್ಷಗಳ ಕಾಲ ಉದ್ಯೋಗಿಗಳು ವರ್ಕ್‌ ಫ್ರಂ ಹೋಮ್‌ ಮಾಡಿದ ಬಳಿಕ ಈ ನಿರ್ಧಾರ ಮಾಡಲಾಗಿತ್ತು.  ಉದ್ಯೋಗಿಗಳನ್ನು ವಾಪಾಸ್‌ ಕಚೇರಿಗೆ ತರುವುದು ಗೂಗಲ್‌ ಪಾಲಿಗೆ ಇಂದೂ ಕಷ್ಟದ ಕೆಲಸ ಆಗಿದೆ.

ನಮ್ಮ ಹೈಬ್ರಿಡ್‌ ವರ್ಕ್ ಅತ್ಯುತ್ತಮವಾಗಿದೆ. ಇದರಲ್ಲಿ ಕಚೇರಿಯಲ್ಲಿ ಇತರ ಉದ್ಯೋಗಿಗಳ ಜೊತೆ ಬೆರೆಯುವುದು ಮಾತ್ರವಲ್ಲದೆ, ವರ್ಕ್ ಫ್ರಂ ಹೋಮ್‌ನ ಅವಕಾಶವನ್ನೂ ಪಡೆಯಲಿದ್ದೇವೆ. ಅಂದಾಜು ಒಂದು ವರ್ಷದಿಂದ ಇದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಆದರೆ, ಕಚೇರಿಗೆ ಉದ್ಯೋಗಿಗಳ ಹಾಜರಾತಿಯನ್ನು ಅವರ ವಾರ್ಷಿಕ ವೇತನ ಪರಿಷ್ಕರಣೆ ವೇಳೆ ಪ್ರಮುಖ ಅಂಶವಾಗಿ ಪರಿಗಣಿಸುವ ವಿಚಾರದ ಕುರಿತಾದ ಪ್ರಶ್ನೆಗೆ ಗೂಗಲ್‌ ಉತ್ತರ ನೀಡಿಲ್ಲ.

ಗೂಗಲ್ ಸಿಇಒ ಸುಂದರ್ ಪಿಚೈ ಬಾಲ್ಯದ ಮನೆ ಮಾರಾಟ: ತಮಿಳು ನಟ, ನಿರ್ಮಾಪಕನಿಂದ ಆಸ್ತಿ ಖರೀದಿ

ಟೆಕ್‌ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾಪಾಸ್‌ ಕಚೇರಿಗೆ ಕರೆತರುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಶ್ರಮ ವಹಿಸುತ್ತಿದೆ. ಉದ್ಯೋಗಿಗಳ ಮರಳಿ ಆಫೀಸ್‌ಗೆ ಕರೆ ತರುವ ನಿಟ್ಟಿನಲ್ಲಿ ವರ್ಕ್‌ ಫ್ರಂ ಹೋಮ್‌ ಸಂಸ್ಕೃತಿಯನ್ನೇ ಮುಚ್ಚಲು ಗೂಗಲ್‌ನಂಥ ಕಂಪನಿಗಳು ಯೋಚನೆ ಮಾಡಿವೆ. ಇನ್ನುಕೆಲವು ಕಂಪನಿಗಳು ಉದ್ಯೋಗಿಗಳನ್ನು ಅಫೀಸ್‌ಗೆ ಕರೆತರಲು ಕ್ರಿಯೇಟಿವ್‌ ಐಡಿಯಾಗಳನ್ನು ಮಾಡುತ್ತಿವೆ. ಕ್ಲೌಡ್‌ ಕಂಪನಿಯಾಗಿರುವ ಸೇಲ್ಸ್‌ಫೋರ್ಸ್‌, ಜೂನ್‌ 12 ರಿಂದ ಜೂನ್‌ 23ರವರೆಗೆ ತನ್ನ ಎಷ್ಟು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುತ್ತಾರೋ, ಪ್ರತಿಯೊಬ್ಬರ ಹೆಸರಿನಲ್ಲಿ 10 ಡಾಲರ್‌ ಹಣವನ್ನು ದತ್ತಿ ಕಾರ್ಯಗಳಿಗೆ ನೀಡುವುದಾಗಿ ಘೋಷಣೆ ಮಾಡಿದೆ.

2 ವರ್ಷದಿಂದ ಲಾಗಿನ್ ಆಗದ ಜಿಮೇಲ್, ಯೂಟ್ಯೂಟ್ ಖಾತೆ ಡಿಲೀಟ್, ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್!

click me!