ಬಾಸ್‍ಗೆ ಬಾಯ್ತುಂಬಾ ಬೈಯೋಕಾದ್ರೂ ಆಫೀಸ್‍ನಲ್ಲೊಬ್ಬ ಗೆಳೆಯನಿರಬೇಕು..

By Suvarna NewsFirst Published Mar 12, 2020, 6:34 PM IST
Highlights

ಆಫೀಸ್‍ಗೆ ಹೋಗೋದು ಕೆಲಸ ಮಾಡೋಕಾದ್ರೂ ಅಲ್ಲೊಬ್ಬರು ಬೆಸ್ಟ್ ಫ್ರೆಂಡ್ ಇದ್ರೇನೆ ವೃತ್ತಿ ಬದುಕನ್ನು ಎಂಜಾಯ್ ಮಾಡೋಕಾಗೋದು. ದಿನ ಬೆಳಗ್ಗೆ ಎದ್ದು ಕಾಲೇಜ್‍ಗೆ ಹೋದಷ್ಟೇ ಖುಷಿಯಿಂದ ಆಫೀಸ್‍ಗೆ ಹೋಗೋಕೆ ಅಲ್ಲೊಬ್ಬ ಗೆಳೆಯ ಬೇಕೇಬೇಕು.

ಆಫೀಸ್‍ಗೆ ಹೋಗೋದು ಕೆಲಸ ಮಾಡೋಕ್ಕಾದ್ರೂ ಅಲ್ಲಿ ನಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸುವ, ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಒಂದು ಆತ್ಮೀಯ ಜೀವವಾದ್ರೂ ಇರಬೇಕು. ಆಗಲೇ ಆಫೀಸ್‍ಗೆ ಖುಷಿ ಖುಷಿಯಿಂದ ಹೊರಡಲು ಮನಸ್ಸು ಮುಂದಡಿಯಿಡುವುದು. ಬಹುತೇಕರು ದಿನದಲ್ಲಿ ಕನಿಷ್ಠ 8 ಗಂಟೆ ಆಫೀಸ್‍ನಲ್ಲೇ ಕಳೆಯುತ್ತಾರೆ. ಹೀಗಾಗಿ ಎಷ್ಟೇ ಕೆಲಸದ ಒತ್ತವಿದ್ರೂ ಸಹೋದ್ಯೋಗಿಗಳೊಂದಿಗೆ ನವಿರಾದ ಸಂಬಂಧವೊಂದು ಏರ್ಪಡುವುದು ಸಹಜ. ಕೆಲವರೊಡನೆ ಎಷ್ಟು ಗಾಢವಾದ ಸಂಬಂಧ ಬೆಸೆಯುತ್ತದೆಯೆಂದ್ರೆ ಅವರು ಒಂದು ದಿನ ಆಫೀಸ್‍ಗೆ ಬಂದಿಲ್ಲ ಅಂದ್ರೆ ಏನೋ ಕಳೆದುಕೊಂಡಂತೆ ಚಡಪಡಿಸುತ್ತೇವೆ. ಆಫೀಸ್‍ನಲ್ಲಿ ಎಲ್ಲರಿಗೂ ಇಂಥ ಕನಿಷ್ಠ ಒಬ್ಬ ಆತ್ಮೀಯ ಸ್ನೇಹಿತೆ ಅಥವಾ ಸ್ನೇಹಿತನಿದ್ರೆ ಒತ್ತಡ ತಗ್ಗುವ ಜೊತೆಗೆ ಕೆಲಸ ಮಾಡುವ ಉತ್ಸಾಹವೂ ಹೆಚ್ಚುತ್ತದೆ. ಹೀಗಿದ್ದಾಗಲೇ ಆರೋಗ್ಯಕರ ವೃತ್ತಿ ಬದುಕನ್ನು ಅನುಭವಿಸಲು ಸಾಧ್ಯವಾಗುವುದು. ಇಷ್ಟಕ್ಕೂ ಆಫೀಸ್‍ನಲ್ಲೊಬ್ಬರು ಬೆಸ್ಟ್ ಫ್ರೆಂಡ್ ಇರಲೇಬೇಕು ಎನ್ನುವುದು ಯಾಕೆ ಗೊತ್ತಾ?

ಮಂಡೆಬಿಸಿ ಮಾಡುವ Monday ಬ್ಲೂಸ್‍ಗೆ ಮದ್ದೇನು?

ಬಾಸ್ ಜೊತೆಗಿನ ಕಿರಿಕ್ ಹಂಚಿಕೊಳ್ಳಲು
ಆಫೀಸ್‍ಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಪತಿ ಅಥವಾ ಪತ್ನಿ ಬಳಿ ಇಲ್ಲವೆ ಕುಟುಂಬದ ಇತರ ಸದಸ್ಯರು ಅಥವಾ ಸ್ನೇಹಿತರ ಬಳಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಹಾಗೇ ಹಂಚಿಕೊಂಡ್ರೂ ಅದರಿಂದ ನಿಮಗೆ ಅಗತ್ಯವಾದ ಪರಿಹಾರ ಅಥವಾ ಪ್ರಯೋಜನ ಸಿಗದು. ಇಂಥ ವಿಷಯಗಳನ್ನು ನೀವು ನಿಮ್ಮೊಂದಿಗೆ ಕೆಲಸ ಮಾಡುವ ಆತ್ಮೀಯರ ಬಳಿ ಮಾತ್ರ ಚರ್ಚಿಸಲು ಸಾಧ್ಯ. ಅಲ್ಲದೆ, ಅವರು ಮಾತ್ರ ನಿಮ್ಮ ಸಮಸ್ಯೆಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಎಲ್ಲಕ್ಕಿಂತ ಮುಖ್ಯವಾಗಿ ಬಾಸ್ ಜೊತೆಗೆ ಏನಾದ್ರೂ ಕಿರಿಕ್ ಆದ್ರೆ ಆಫೀಸ್‍ನಲ್ಲಿರುವ ನಿಮ್ಮ ಆತ್ಮೀಯ ಫ್ರೆಂಡ್ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ನೀವು ಇವರ ಮುಂದೆ ಬಾಸ್‍ಗೆ ಬಾಯಿ ತುಂಬಾ ಬೈದು ನಿಮ್ಮ ಹತಾಶೆ, ಒತ್ತಡಗಳನ್ನು ಹೊರಹಾಕಬಹುದು. ಇವರು ನೀವು ಹಂಚಿಕೊಂಡ ಮಾಹಿತಿಯನ್ನು ಖಂಡಿತಾ ಯಾರೊಂದಿಗೂ ಶೇರ್ ಮಾಡೋದಿಲ್ಲ. 

ಆಫೀಸ್‍ಗೆ ಹೋಗಲು ಇವರೇ ನೆಪ
ಸೋಮವಾರ ಬೆಳಗ್ಗೆ ಆಫೀಸ್‍ಗೆ ಹೋಗಬೇಕಲ್ಲ ಎಂಬ ಟೆನ್ಷನ್‍ನಿಂದ ಹಾಸಿಗೆ ಮೇಲೆ ಹೊರಳಾಡುವ ನಿಮ್ಮನ್ನು ಕೆಲಸದತ್ತ ಸೆಳೆಯುವ ಶಕ್ತಿಯೇ ಈ ಬೆಸ್ಟ್ ಫ್ರೆಂಡ್. ಒಳ್ಳೆಯ ಫ್ರೆಂಡ್ ಇರುವಾಗ ಆಫೀಸ್ ಕೆಲಸ ಹೊರೆ ಅನಿಸುವುದಿಲ್ಲ. ಕಾಲೇಜ್‍ಗೆ ಹೋಗುವಾಗ ನೀವು ಎಷ್ಟು ಎಂಜಾಯ್ ಮಾಡಿಕೊಂಡು ಹೋಗುತ್ತಿದ್ರೂ ಅಷ್ಟೇ ಖುಷಿಯಿಂದ ಆಫೀಸ್‍ಗೆ ಹೋಗುತ್ತೀರಿ. ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಈ ಫ್ರೆಂಡ್ ಪ್ರೇರಣೆ ನೀಡುತ್ತಾರೆ. ಆಫೀಸ್‍ನಲ್ಲಿ ಅವರ ಕೆಲಸ ಮುಗಿದಿದ್ರೂ ನೀವು ನಿಮ್ಮ ಕೆಲಸ ಮುಗಿಸುವ ತನಕ ಕಾದು ಕುಳಿತಿರುತ್ತಾರೆ. ಇಂಥ ಫ್ರೆಂಡ್ ಆಫೀಸ್‍ನಲ್ಲಿರುವುದರಿಂದ ನಿಮಗೆ ಕೆಲಸ ಮಾಡಲು ಉತ್ಸಾಹ ಹೆಚ್ಚುವ ಜೊತೆಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಾಧ್ಯವಾಗುತ್ತದೆ.

ಬಾಸ್ ಮೇಲಿನ ಕೀಳು ಜೋಕನ್ನು ಅವರಿಗೂ ಶೇರ್ ಮಾಡಿಕೊಂಡರೆ...!

ಸದಾ ನೆರವಿನ ಹಸ್ತ ಚಾಚುತ್ತಾರೆ
ಆಫೀಸ್‍ನಲ್ಲಿ ನಿಮ್ಮ ಡೆಸ್ಕ್ ಸರಿಸಲು ಹೆಲ್ಪ್ ಮಾಡೋದ್ರಿಂದ ಹಿಡಿದು ಇತರ ಸಹೋದ್ಯೋಗಿಗಳು ನಿಮಗೇನಾದ್ರೂ ತೊಂದರೆ ನೀಡಿದ್ರೆ ಅವರ ವಿರುದ್ಧ ಧ್ವನಿಯೆತ್ತಲು ಕೂಡ ಇವರು ನಿಮಗೆ ನೆರವು ನೀಡುತ್ತಾರೆ. ಆಫೀಸ್‍ನಲ್ಲಿ ಏನಾದ್ರೂ ಸಹಾಯ ಬೇಕಿದ್ರೆ ನೀವು ಧೈರ್ಯವಾಗಿ ಇವರನ್ನು ಸಂಪರ್ಕಿಸಬಹುದು. ಕೆಲಸಕ್ಕೆ ಸಂಬಂಧಿಸಿ ಅಗತ್ಯವಾದ ಎಲ್ಲ ಮಾರ್ಗದರ್ಶನ ಹಾಗೂ ಬೆಂಬಲವನ್ನು ಇಂಥ ಸ್ನೇಹಿತರು ನೀಡುತ್ತಾರೆ. ಅಷ್ಟೇ ಅಲ್ಲ,ಆಫೀಸ್‍ನಲ್ಲಿ ನಡೆಯುವ ಎಲ್ಲ ಪಾಲಿಟಿಕ್ಸ್ನಿಂದ ನಿಮ್ಮನ್ನು ರಕ್ಷಿಸುವ ಜೊತೆಗೆ ಗಾಸಿಪ್‍ಗೆ ಆಹಾರವಾಗದಂತೆ ಎಚ್ಚರ ವಹಿಸುತ್ತಾರೆ. ಇಂಥ ಫ್ರೆಂಡ್‍ನಿಂದ ಆಫೀಸ್‍ನಲ್ಲಿ ಒತ್ತಡ ತಗ್ಗುವ ಜೊತೆಗೆ ನಿಮ್ಮ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.

ಇಬ್ಬರು ಸೇರಿದ್ರೆ ಯಾವುದೂ ಕಷ್ಟವಲ್ಲ
ಆಫೀಸ್‍ನಲ್ಲಿ ನೀವು ಮತ್ತು ನಿಮ್ಮ ಬೆಸ್ಟ್ ಫ್ರೆಂಡ್ ಇಬ್ಬರೂ ಜೊತೆಯಾಗಿ ಯಾವುದೇ ಕೆಲಸ ಕೈಗೊಂಡರೂ ಅದರಲ್ಲಿ ಯಶಸ್ಸು ಕಾಣುತ್ತೀರಿ. ಪಿಪಿಟಿ ಪ್ರೆಸೆಂಟೆನ್ಸ್ ಇರಬಹುದು, ಯಾವುದೇ ಹೊಸ ಪ್ರಾಜೆಕ್ಟ್ ಆಗಿರಬಹುದು. ನೀವು ಹಾಗೂ ನಿಮ್ಮ ಫ್ರೆಂಡ್ ಆ ಕೆಲಸವನ್ನು ಸಮರ್ಪಕವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮಿಬ್ಬರ ನಡುವೆ ಉತ್ತಮ£ ಕೋ ಆರ್ಡಿನೇಷನ್ ಇರುವ ಕಾರಣ ಯಶಸ್ಸು ಹಾಗೂ ಸೋಲನ್ನು ಸಮನಾಗಿ ಸ್ವೀಕರಿಸುತ್ತೀರಿ. ಎರಡನ್ನೂ ಸಮನಾಗಿ ಹಂಚಿಕೊಳ್ಳುತ್ತೀರಿ ಕೂಡ. 

ಮುಖ ನೋಡಿ ಮಣೆ ಹಾಕೋ ಸಂದರ್ಶಕರು: ಅಧ್ಯಯನ!

ಕಾಫಿ, ಲಂಚ್‍ಗೆ ಜೊತೆಗಾರರು
ಆಫೀಸ್‍ನಲ್ಲಿ ಕಾಫಿ ಬ್ರೇಕ್, ಲಂಚ್ ಬ್ರೇಕ್‍ಗೆ ನಿಮ್ಮ ಬೆಸ್ಟ್ ಫ್ರೆಂಡ್ ಸಾಥ್ ನೀಡುತ್ತಾರೆ. ತಲೆಹರಟೆ ಮಾಡುತ್ತ, ಬಾಕ್ಸ್ ಶೇರ್ ಮಾಡುತ್ತ ಇವರೊಂದಿಗೆ ಊಟ ಮಾಡಿದ್ರೇನೆ ಮನಸ್ಸಿಗೆ ನೆಮ್ಮದಿ. ಮಧ್ಯಾಹ್ನದ ಅವಧಿಯ ನಿದ್ದೆಯನ್ನು ಹೊಡೆದೋಡಿಸಿ ಉತ್ಸಾಹದಿಂದ ಕೆಲಸ ಮಾಡಲು ಇವರೊಂದಿಗೆ ಕಳೆದ ಲಂಚ್ ಬ್ರೇಕ್ ನೆರವು ನೀಡುತ್ತದೆ. ಅದೇರೀತಿ ಬೋರ್ ಆದಾಗ ಇಲ್ಲವೆ ಕೆಲಸ ಮಾಡಲು ಮೂಡ್ ಇಲ್ಲವೆನಿಸಿದಾಗ ಬ್ರೇಕ್ ತೆಗೆದುಕೊಂಡು ಇವರೊಂದಿಗೆ ಕಾಫಿಗೆ ಹೋಗಿ ಬಂದ್ರೆ ಮನಸ್ಸು ಹಗುರವಾಗುತ್ತೆ. ಒಟ್ಟಾರೆ ಆಫೀಸ್‍ನಲ್ಲಿ ಪಾಸಿಟಿವ್ ಎನರ್ಜಿಯೊಂದಿಗೆ ಕೆಲಸ ಮಾಡಲು ಒಬ್ಬರು ಬೆಸ್ಟ್ ಫ್ರೆಂಡ್ ಬೇಕೇಬೇಕು.

click me!