ಮುಖ ನೋಡಿ ಮಣೆ ಹಾಕೋ ಸಂದರ್ಶಕರು: ಅಧ್ಯಯನ!

By Suvarna NewsFirst Published Feb 28, 2020, 3:56 PM IST
Highlights

ನಿಮಗೆ ಗೊತ್ತಾ, ನೀವು ಹಾಕಿಸಿಕೊಂಡಿರೋ ಆ ಟ್ಯಾಟೂ ಕೆಲಸ ಸಿಗದಿರಲು ಕಾರಣವಾಗಬಹುದು. ಸಂದರ್ಶನಕ್ಕೆ ನೀವು ಏನು ಧರಿಸುತ್ತೀರಿ, ಹೇಗೆ ಹೋಗುತ್ತೀರಿ ಎಂಬುದು ಉದ್ಯೋಗದಾತರ ಜಜ್ಡ್‌ಮೆಂಟ್ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಿದೆ ಅಧ್ಯಯನ.

ಉದ್ಯೋಗ ಸಂದರ್ಶನದಲ್ಲಿ ಲಿಂಗ ತಾರತಮ್ಯ, ಸಂಬಳದ ವಿಷಯದಲ್ಲಿ ತಾರತಮ್ಯ ಮುಂತಾದವೆಲ್ಲ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆದರೆ, ಸಂದರ್ಶನದಲ್ಲಿ ಅಭ್ಯರ್ಥಿಗಳ ಲುಕ್ ಕೂಡಾ ಕೆಲಸ ಮಾಡುತ್ತದೆ ಎಂದು ನಿಮಗೆ ಗೊತ್ತಾ? ಹೌದು, ಹೊಸ ಅಧ್ಯಯನವೊಂದರಲ್ಲಿ ಈ ವಿಷಯ ಹೊರಬಂದಿದೆ. 

ಪ್ರೊಫೆಶನಲ್ ಲುಕ್

ಅಧ್ಯಯನಕ್ಕಾಗಿ ಯುಕೆ ಮೂಲದ ಸುಮಾರು 1000 ಜನ ಸಂದರ್ಶಕರನ್ನು ಸಂದರ್ಶಿಸಿ, ಉದ್ಯೋಗಕ್ಕಾಗಿ ಬರುವ ಅಭ್ಯರ್ಥಿಗಳ ಲುಕ್‌ನಿಂದ ಅವರೆಷ್ಟು ಇನ್ಫ್ಲುಯೆನ್ಸ್ ಆಗುತ್ತಾರೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಆಶ್ಚರ್ಯವೆಂದರೆ ಶೇ.90ರಷ್ಟು ಸಂದರ್ಶಕರು ಅವರಿಗೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅಭ್ಯರ್ಥಿಯ ಪ್ರೊಫೆಶನಲ್ ಲುಕ್ ಮುಖ್ಯವಾಗುತ್ತದೆ ಎಂದಿದ್ದಾರೆ. 

ಟ್ಯಾಟೂ

ನೀವೇನಾದರೂ ಎಲ್ಲರಿಗೂ ಕಾಣುವ ದೇಹದ ಭಾಗದಲ್ಲಿ ಟ್ಯಾಟೂ ಹೊಂದಿದ್ದರೆ ಸಂದರ್ಶನಕ್ಕೆ ಹೋಗುವ ಮುಂಚೆ ಅದನ್ನು ಕಾಣದಂತೆ ಮುಚ್ಚಿಕೊಂಡು ಹೋಗುವುದು ಒಳಿತು. ಏಕೆಂದರೆ, ಸಂಶೋಧನೆಯ ಪ್ರಕಾರ, ಶೇ.43ರಷ್ಟು ಸಂದರ್ಶಕರು ಟ್ಯಾಟೂ ಹೊಂದಿರುವ ಅಭ್ಯರ್ಥಿಗಳನ್ನು ನೋಡುತ್ತಿದ್ದಂತೆಯೇ ಸಾರಾಸಗಟಾಗಿ ತಿರಸ್ಕರಿಸಲು ಮನಸ್ಸು ಮಾಡುತ್ತಾರಂತೆ. ಇನ್ನು ಶೇ.40ರಷ್ಟು ಸಂದರ್ಶಕರು ಅಭ್ಯರ್ಥಿಗಳು ಏನು ಉಡುಗೆ ತೊಟ್ಟಿದ್ದಾರೆ, ಆಭರಣಗಳು, ಡ್ರೆಸ್ಸಿಂಗ್ ಸೆನ್ಸ್, ಧರಿಸಿರುವ ಚಪ್ಪಲಿ ಎಲ್ಲವನ್ನೂ ಗಮನಿಸಿ ಅವರನ್ನು ಜಡ್ಜ್ ಮಾಡುತ್ತಾರಂತೆ. ಉಳಿದಂತೆ ಶೇ.30ರಷ್ಟು ಸಂದರ್ಶಕರು, ಕೂದಲಿಗೆ ಚಿತ್ರ ವಿಚಿತ್ರ ಬಣ್ಣ ಹಾಕಿಕೊಂಡವರನ್ನು ತಿರಸ್ಕರಿಸಲು ತಮಗೆ ಮನಸ್ಸಾಗುತ್ತದೆ ಎಂದಿದ್ದಾರೆ.

ಯಂಗ್ ಆಗಿ ಕಾಣುವುದು ಮುಖ್ಯವೇ?

ಅಧ್ಯಯನದ ಪ್ರಕಾರ, ಶೇ.51ರಷ್ಟು ಬಾಸ್‌ಗಳು ಅಭ್ಯರ್ಥಿಗಳ ಲುಕ್‌ನಿಂದ ತಾವು ಇನ್ಫ್ಲುಯೆನ್ಸ್ ಆಗುವುದಾಗಿ ಹೇಳಿದ್ದಾರೆ. ಆದರೆ, ಇನ್ನೂ ಸಣ್ಣ ವಯಸ್ಸಿನ ಅಭ್ಯರ್ಥಿಗಳಾದರೆ ಅವರಿಗೊಂದು ಲಾಭವಿದೆ. ಹೌದು, ಶೇ.57ರಷ್ಟು ಬಾಸ್‌ಗಳು 24 ವರ್ಷಕ್ಕಿಂತ ಸಣ್ಣವರು ಹೇಗೇ ಕಂಡರೂ ನಾವವರನ್ನು ಜಡ್ಜ್ ಮಾಡುವುದಿಲ್ಲ ಎಂದಿದ್ದಾರೆ. 

LIC ನೇಮಕಾತಿ 2020: ವಿವಿಧ ಹುದ್ದೆಗೆ ಅರ್ಜಿ ಆಹ್ವಾನ...

ಪ್ರೊಫೆಶನಲ್ ಆಗಿ ಕಾಣುವುದು ಹೇಗೆ?

ಫಸ್ಟ್ ಇಂಪ್ರೆಶನ್ ಯಾವಾಗಲೂ ಬಹಳ ಮುಖ್ಯವಾಗುವುದರಿಂದ ಸಮಯ, ಸಂದರ್ಭಕ್ಕೆ ತಕ್ಕಂತೆ ರೆಡಿಯಾಗಬೇಕು. ಅಂದ ಮೇಲೆ ಸಂದರ್ಶನಕ್ಕೆ ಪ್ರೊಫೆಶನಲ್ ಆಗಿ ರೆಡಿಯಾಗಬೇಕು. ಪುರುಷರು ಫುಲ್ ಸ್ಲೀವ್‌ಗಳ ಶರ್ಟ್ ಧರಿಸಬೇಕು. ಒಂದು ವೇಳೆ ಶಾರ್ಟ್ ಸ್ಲೀವ್ ಆಗಿದ್ದರೂ ಕೂಡಾ ಅದು ಫಾರ್ಮಲ್ ಆಗಿರಬೇಕು. ಶರ್ಟ್ ಹಾಗೂ ಪ್ಯಾಂಟ್ ಎರಡನ್ನೂ ಚೆನ್ನಾಗಿ ಐರನ್ ಮಾಡಿರಬೇಕು. ಬಹಳ ಉನ್ನತ ಹುದ್ದೆಗೆ ಸಂದರ್ಶನಕ್ಕೆ ಹೋಗುತ್ತಿದ್ದಲ್ಲಿ ಮಾತ್ರ ಟೈ ಹಾಗೂ ಬ್ಲೇಜರ್ಸ್ ಧರಿಸಿ. ಶೂಗಳು ಸಂಪೂರ್ಣ ಸ್ವಚ್ಛವಾಗಿದ್ದು ಪಾಲಿಶ್ ಆಗಿರಬೇಕು. 

ಯುವತಿಯರು ಸಂದರ್ಶನಕ್ಕೆ ಹೋಗುವಾಗ ಫಾರ್ಮಲ್ ಶರ್ಟ್ ಹಾಗೂ ಪ್ಯಾಂಟ್ ಧರಿಸಬಹುದು. ಸ್ಲೀವ್ಸ್ ಹೊಂದಿದ ಕುರ್ತಾ ಹಾಗೂ ಲೆಗ್ಗಿಂಗ್ಸ್ ಕೂಡಾ ಹೊಂದುತ್ತದೆ. ಎಲ್ಲಕ್ಕಿಂತ ಮುಖ್ಯವಾಗುವುದು ಹೀಗೆ ಧರಿಸಿದ್ದನ್ನು ನೀವು ಎಷ್ಟು ಚೆನ್ನಾಗಿ ಕ್ಯಾರಿ ಮಾಡಬಲ್ಲಿರಿ, ಅದರಲ್ಲಿ ನೀವೆಷ್ಟು ಕಂಫರ್ಟೇಬಲ್ ಆಗಿರಬಲ್ಲಿರಿ ಎಂಬುದು. ಜೊತೆಗೆ ಸ್ವಲ್ಫ ಪ್ರೊಫೆಶನಲ್ ಆ್ಯಟಿಟ್ಯೂಡ್ ಇದ್ದರೆ ಸಂದರ್ಶಕರನ್ನು ಅರ್ಧ ಗೆದ್ದಿರೆಂದೇ ಅರ್ಥ. 

ಇವನ್ನು ಅವಾಯ್ಡ್ ಮಾಡಿ

ಹೆವಿಯಾದ ಟ್ಯಾಟೂ ಹಾಗೂ ಕೆಂಪು, ಹಸಿರು ಹಳದಿ ಇತ್ಯಾದಿ ಕೂದಲಿನ ಬಣ್ಣಗಳು ಸಂದರ್ಶನಕ್ಕೆ ಬಹಳ ಆಡ್ ಎನಿಸುತ್ತವೆ. ಹಾಗಾಗಿ, ಕೂದಲು ನ್ಯಾಚುರಲ್ ಬಣ್ಣದಲ್ಲಿರಲಿ. ಟ್ಯಾಟೂಗಳಿದ್ದರೆ ಅವು ಕಾಣದಂತೆ ಬಟ್ಟೆಯಿಂದ ಕವರ್ ಮಾಡಿಕೊಂಡು ಹೋಗಿ. ಗಾಢವರ್ಣದ ಬಟ್ಟೆಗಳು ಬೇಡ. ಸದಾ ತಿಳಿಯಾದ ವರ್ಣದ ಬಟ್ಟೆಗಳು ಹೆಚ್ಚು ಒಪ್ಪುತ್ತವೆ. ಅದರಲ್ಲೂ ಅನಿಮಲ್ ಪ್ರಿಂಟ್ ಅಥವಾ ದೊಡ್ಡ ದೊಡ್ಡ ಹೂಗಳು ಇತ್ಯಾದಿ ಪ್ರಿಂಟ್ ಇರದಿರುವುದು, ಕೋಟ್‌ಗಳಿರದಿರುವುದನ್ನು ಆಯ್ಕೆ ಮಾಡಿ. ಅತಿಯಾಗಿ ಯಾವ ಆಭರಣಗಳನ್ನೂ ಧರಿಸಬೇಡಿ. ಸಣ್ಣದಾದ ಕಿವಿಯೋಲೆ, ಒಂದೊಂದು ಬಳೆ ಸಾಕು. ನೀಟಾಗಿ ಬಾಚಿದ ತಲೆ ಹಾಗೂ ಸ್ವಚ್ಛತೆ ಕೂಡಾ ಸಂದರ್ಶಕರ ಗಮನ ಸೆಳೆಯುತ್ತದೆ. ಹಾಗಾಗಿ, ಚಿತ್ರವಿಚಿತ್ರ ಹೇರ್‌ಸ್ಟೈಲ್‌ಗಳು ಬೇಡ. ಇವೆಲ್ಲದರ ಮೇಲೆ ನಿಮ್ಮ ಬಾಡಿ ಲಾಂಗ್ವೇಜ್ ಸರಿಯಾದ ಸಂದೇಶ ಸಾರುತ್ತಿರುವಂತೆ ನೋಡಿಕೊಳ್ಳಿ. 
 

click me!