14 ವರ್ಷ ಬ್ಯಾಂಕಿಂಗ್ ಅನುಭವ ಕೆಲಸ ಇಲ್ಲದೆ ಬೆಂಗಳೂರು ಸಿಗ್ನಲ್‌ನಲ್ಲಿ ಭಿಕ್ಷುಕನಾದ! ಕ್ಯಾಬ್ ಡ್ರೈವರ್ ಆಗಲು ಸಲಹೆ ಕೊಟ್ಟ ನೆಟ್ಟಿಗರು

Published : Sep 01, 2025, 07:06 PM IST
Bengaluru footpath man viral post

ಸಾರಾಂಶ

ಬೆಂಗಳೂರಿನ ಸಿಗ್ನಲ್‌ನಲ್ಲಿ 14 ವರ್ಷಗಳ ಬ್ಯಾಂಕಿಂಗ್ ಅನುಭವ ಹೊಂದಿರುವ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಮಾಜದ ವೈಫಲ್ಯವೇ ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೇ ಎಂಬ ಚರ್ಚೆಗೆ ಕಾರಣವಾಗಿದೆ.  

ಬೆಂಗಳೂರು: ನಗರದ ಜನನಿಬಿಡ ಸಿಗ್ನಲ್‌ಗಳಲ್ಲಿ ಒಂದರಲ್ಲಿ ನಡೆದ ಸನ್ನಿವೇಶವು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫುಟ್‌ಪಾತ್‌ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯ ಚಿತ್ರಗಳನ್ನು ಬಳಕೆದಾರರೊಬ್ಬರು ಹಂಚಿಕೊಂಡ ನಂತರ, ಅವನ ಈಗಿನ ಜೀವನದ ಪರಿಸ್ಥಿತಿಯ ಬಗ್ಗೆ ತೀವ್ರವಾದ ಚರ್ಚೆ ಹುಟ್ಟು ಹಾಕಿದೆ. ಆ ವ್ಯಕ್ತಿ ಕೈಯಲ್ಲಿ ಒಂದು ಚೀಟಿಯನ್ನು ಹಿಡಿದಿದ್ದು, ಪಕ್ಕದಲ್ಲಿ ಬ್ಯಾಗ್ ಇಟ್ಟುಕೊಂಡಿರುವ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಮೊದಲ ಚಿತ್ರವು ಆತ ನಿರಾಸದಾಯಕವಾಗಿ ಕುಳಿತುಕೊಂಡಿರುವ ಎರಡನೆಯ ಚಿತ್ರವು ಅವನ ಕೈಯಲ್ಲಿದ್ದ ಫ್ಲೆಕ್ಸ್ ಸಂದೇಶವನ್ನು ಹತ್ತಿರದಿಂದ ತೋರಿಸಿತು. ಆ ಫ್ಲೆಕ್ಸ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆದ ಸಂದೇಶ ಬರೆಯಲಾಗಿದೆ. ನನಗೆ ಕೆಲಸವಿಲ್ಲ, ಮನೆ ಇಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ. ನನಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ 14 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದೆ ಎಂದು ಬರೆದಿದ್ದು ಇದರ ಜೊತೆಗೆ ಆ ವ್ಯಕ್ತಿ ಡಿಜಿಟಲ್ ಪಾವತಿಗಳಿಗಾಗಿ ಒಂದು QR ಕೋಡ್‌ ಸಹ ಹಾಕಿಕೊಂಡಿದ್ದನು.

ಇದು ಸಮಾಜದ ವೈಫಲ್ಯವೇ? ವೈಯಕ್ತಿಕ ಆಯ್ಕೆಗಳ ಪರಿಣಾಮವೇ?

@Being-Brilliant ಎಂಬ ಹೆಸರಿನ ರೆಡ್ಡಿಟ್ ಬಳಕೆದಾರನು ಈ ಚಿತ್ರಗಳನ್ನು ಹಂಚಿಕೊಂಡು ಹೀಗೆ ಬರೆದಿದ್ದಾನೆ. ಬೆಂಗಳೂರಿನ ಪ್ರಮುಖ ಸಿಗ್ನಲ್‌ನಲ್ಲಿ ಈ ವ್ಯಕ್ತಿಯನ್ನು ನೋಡಿದೆ. ಅವನ ಸ್ಥಿತಿ ನೋಡುವುದು ತುಂಬಾ ಕಷ್ಟವಾಯ್ತು ಇದೊಂದು ಹೃದಯ ವಿದ್ರಾವಕ. ಆದರೆ ಇದು ಸಮಾಜದ ವೈಫಲ್ಯದ ಪರಿಣಾಮವೇ? ಅಥವಾ ಅವನ ವೈಯಕ್ತಿಕ ಆಯ್ಕೆಗಳ ಪರಿಣಾಮವೇ? ಎಂದು ಪ್ರಶ್ನೆ ಹಾಕಿ ಪೋಸ್ಟ್ ಮಾಡಿದ್ದಾನೆ. ಈ ಪ್ರಶ್ನೆಯೇ ಹಲವು ಬಳಕೆದಾರರಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಸಹಾನುಭೂತಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟೀಕೆಯಿಂದ ಉತ್ತರಿಸಿದ್ದಾರೆ.

ಬಳಕೆದಾರರ ಮಿಶ್ರ ಪ್ರತಿಕ್ರಿಯೆಗಳು

ಒಬ್ಬರು ಪ್ರತಿಕ್ರಿಯೆ ನೀಡುತ್ತಾ, ಅವರಿಗೆ 14 ವರ್ಷಗಳ ಬ್ಯಾಂಕಿಂಗ್ ಅನುಭವವಿದೆ ಎಂದಿದ್ದರೆ, ಜನರು ಅವರಿಗೆ ಸಹಾಯ ಮಾಡಬಹುದು. ಅವರ ಸಿವಿಯನ್ನು ನೋಡಿ ಶಿಫಾರಸು ಮಾಡಿದರೆ, ಕೆಲಸ ದೊರೆಯುವ ಸಾಧ್ಯತೆ ಇದೆ ಎಂದು ಸಲಹೆ ನೀಡಿದರು. ಇನ್ನೊಬ್ಬರು ಅದಕ್ಕೆ ವಿರುದ್ಧವಾಗಿ, ಯುವಕನೊಬ್ಬ ಈ ರೀತಿ ಭಿಕ್ಷೆ ಬೇಡುವ ಅಗತ್ಯವಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಕೆಲಸ ಮಾಡಲು ಸಿದ್ಧನಿದ್ದರೆ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.

ಮತ್ತೊಬ್ಬರು ಬೇರೆ ದೃಷ್ಟಿಕೋನವನ್ನು ಹಂಚಿಕೊಂಡು ಹೀಗೆ ಬರೆದರು

ದೈಹಿಕವಾಗಿ ಸಮರ್ಥರಾದವರು ಡೆಲಿವರಿ ಬಾಯ್ ಆಗಿ, ಕ್ಯಾಬ್ ಚಾಲಕನಾಗಿ, ಕಾರ್ಮಿಕ ಕೆಲಸಗಳನ್ನು ಮಾಡಬಹುದು. ಆದರೆ ದೀರ್ಘಕಾಲ ನಿರುದ್ಯೋಗಿಯಾಗಿದ್ದರೆ, ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದು ಸಹ ಒಂದು ಅಡೆತಡೆ ಎಂದು ಹೇಳಿದರು.

ಇನ್ನೊಬ್ಬ ಬಳಕೆದಾರನು ಹೃದಯಸ್ಪರ್ಶಿ ಪ್ರತಿಕ್ರಿಯೆ ನೀಡಿ, ಒಬ್ಬ ಮನುಷ್ಯನ ಜೀವನದಲ್ಲಿ ಗೌರವವು ಅವನ ಆದಾಯಕ್ಕೆ ಮಾತ್ರ ಸೀಮಿತವಾಗಿರಬಾರದು. ಅವನ ಕಥೆಯನ್ನು ತಿಳಿಯದೇ ಅವನನ್ನು ತೀರ್ಮಾನಿಸುವುದು ಅನ್ಯಾಯ. ಆ ಚಿತ್ರಗಳ ಹಿಂದೆ ದೊಡ್ಡ ಮಾನವ ಹೋರಾಟ ಅಡಗಿದೆ ಎಂದು ಬರೆದರು.

ಅದೇ ವೇಳೆ ಮತ್ತೊಬ್ಬರು ಆಶ್ಚರ್ಯ ವ್ಯಕ್ತಪಡಿಸಿ, “ಅವರು ತಮ್ಮ ಪ್ರಮಾಣಪತ್ರಗಳನ್ನು ಕಳೆದುಕೊಂಡಿದ್ದಾರೆಯೇ? ಅಥವಾ ನಾಶಪಡಿಸಿದ್ದಾರೆಯೇ? ಅದು ನಿಜವಾಗಿದ್ದರೆ ದುರ್ಘಟನೆಯೇ ಸರಿ. ಆದರೆ ಕೆಲಸ ಮಾಡಲು ಇಷ್ಟವಿಲ್ಲವೆಂದರೆ, ಅದು ಅವರ ವೈಯಕ್ತಿಕ ಸಮಸ್ಯೆಯಾಗಬಹುದು” ಎಂದು ಅಭಿಪ್ರಾಯಪಟ್ಟರು.

ಹೃದಯಸ್ಪರ್ಶಿ ಪ್ರಶ್ನೆ ಉಳಿದೇ ಉಳಿಯಿತು

ಈ ಚರ್ಚೆಯಿಂದ ಒಂದು ವಿಷಯ ಸ್ಪಷ್ಟವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರ ಬದುಕಿನ ಹಾದಿ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವರಿಗೆ ಅವಕಾಶಗಳು ಸುಲಭವಾಗಿ ದೊರೆಯುತ್ತವೆ, ಇನ್ನು ಕೆಲವರು ಅನುಭವವಿದ್ದರೂ ಸಂಕಷ್ಟಕ್ಕೆ ತುತ್ತಾಗುತ್ತಾರೆ. ಆ ವ್ಯಕ್ತಿಯ ಕಥೆ ನಿಜವಾಗಿಯೂ ಸಮಾಜದ ವೈಫಲ್ಯವೋ, ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೋ ಎಂಬ ಪ್ರಶ್ನೆ ಇನ್ನೂ ಉತ್ತರಿಸದೆಯೇ ಉಳಿದಿದೆ. ಆದರೆ ಒಂದು ವಿಷಯ ಖಚಿತ.ಅವನು ಹಿಡಿದಿದ್ದ ಚೀಟಿಯ ಸಂದೇಶ ಹಲವರ ಮನಸ್ಸಿಗೆ ತಟ್ಟಿದೆ.

 

 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?