10 ತಿಂಗಳಲ್ಲಿ ಸರ್ಕಾರದಿಂದ ಶೂನ್ಯ ಉದ್ಯೋಗ ಸೃಷ್ಟಿ: ಯಡಿಯೂರಪ್ಪ

By Kannadaprabha NewsFirst Published Apr 12, 2024, 11:23 AM IST
Highlights

ಕಾಂಗ್ರೆಸ್‌ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕತ್ವ ಇಲ್ಲ. ಸರ್ಕಾರದ ಸಾಧನೆಯ ಬೆಂಬಲವೂ ಇಲ್ಲ. ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಜನರ ದಾರಿ ತಪ್ಪಿಸಿ ಬೆಂಬಲ ಗಳಿಸುವ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ ಬಿ.ಎಸ್‌.ಯಡಿಯೂರಪ್ಪ 

ಬೆಂಗಳೂರು(ಏ.12):  ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕಳೆದ 10 ತಿಂಗಳ ಅವಧಿಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಿದೆ ಎಂದು ವಿವರ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕತ್ವ ಇಲ್ಲ. ಸರ್ಕಾರದ ಸಾಧನೆಯ ಬೆಂಬಲವೂ ಇಲ್ಲ. ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಜನರ ದಾರಿ ತಪ್ಪಿಸಿ ಬೆಂಬಲ ಗಳಿಸುವ ಭ್ರಮೆಯಲ್ಲಿದ್ದಾರೆ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಎಂ.ಬಿ.ಪಾಟೀಲ್‌ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ‘ಎಕ್ಸ್‌’ ಖಾತೆಯಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ. ಈ ಸರ್ಕಾರ ಕಳೆದ 10 ತಿಂಗಳಲ್ಲಿ ಒಂದೇ ಒಂದು ಉದ್ಯೋಗ ಸೃಷ್ಟಿಸದೆ ದಾಖಲೆ ಮಾಡಿದೆ. ಇದು ಕಾಂಗ್ರೆಸ್‌ ಸಾಧನೆ ಎಂದು ಲೇವಡಿ ಮಾಡಿದರು.

ರಾಜ್ಯದ ಉದ್ದಗಲಕ್ಕೂ ಬಿಜೆಪಿ-ಜೆಡಿಎಸ್ ಅಲೆ: ಯಡಿಯೂರಪ್ಪ

ರಾಜ್ಯ ಸರ್ಕಾರ ತಲಾ 10 ಕೆ.ಜಿ. ಉಚಿತ ಅಕ್ಕಿ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಈವರೆಗೂ ಒಂದೇ ಒಂದು ಕಾಳು ಅಕ್ಕಿ ನೀಡಿಲ್ಲ. ಇದು ಕಾಂಗ್ರೆಸ್‌ ಸಾಧನೆ. ಕೇಂದ್ರ ಕಿಸಾನ್‌ ಸಮ್ಮಾನ್ ಯೋಜನೆಯಡಿ ರಾಜ್ಯದ 54 ಲಕ್ಷ ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರು. ನೀಡುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ರು. ಸೇರಿಸಿ ಕೊಡುತ್ತಿದೆ. ಈ ಸರ್ಕಾರ ಆ 4 ಸಾವಿರ ರು. ನಿಲ್ಲಿಸಿದೆ. ಏಕೆಂದರೆ, ಈ ಸರ್ಕಾರ ದಿವಾಳಿಯಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಸರ್ಕಾರ ಕಳೆದ 10 ತಿಂಗಳಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಸ್ಥಾಪಿಸಿಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ ಎಂದು ಟಾಂಗ್‌ ನೀಡಿದರು.

ನಾವು ಪ್ರಧಾನಿ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಕೈಗೊಂಡಿರುವ ಸಾಧನೆಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಅಂಕಿ-ಅಂಶಗಳಿಲ್ಲದೆ ಉದ್ಯೋಗ ಸೃಷ್ಟಿಯ ಬಗ್ಗೆ ಪ್ರಶ್ನೆ ಮಾಡುತ್ತಿದೆ. 2014ರಲ್ಲಿ ದೇಶದಲ್ಲಿ 15.54 ಭವಿಷ್ಯ ನಿಧಿ ಖಾತೆಗಳಿದ್ದವು. 2022ರ ವೇಳೆ ಈ ಖಾತೆಗಳ ಸಂಖ್ಯೆ 22.05 ಕೋಟಿ ದಾಟಿದೆ. ಅಂದರೆ, 7 ಕೋಟಿ ಹೊಸ ಉದ್ಯೋಗ ಸೇರ್ಪಡೆಯಾಗಿದೆ. ಇದೇ ಅವಧಿಯಲ್ಲಿ 5 ಕೋಟಿ ಇದ್ದ ಎಂಎಸ್‌ಎಂಇ ಉದ್ಯಮಗಳು 6.30 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಯ ಬಗ್ಗೆ ಮಾಹಿತಿ ನೀಡಿದರು.

ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಸುರಕ್ಷತೆ, ಅಖಂಡತೆಗಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ 28 ಸ್ಥಾನಗಳಲ್ಲೂ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ದೇಶದ ವಿಭಜನೆ, ಜಾತಿ, ಮತ, ಧರ್ಮದ ಅಪಸ್ಪರ ತೆಗೆಯುವ ಇಂಡಿ ಮೈತ್ರಿ ಕೂಟವನ್ನು ದೇಶಭಕ್ತ ರಾಜ್ಯದ ಜನರು ತಿರಸ್ಕರಿಸಲಿದ್ದಾರೆ ಎಂದರು.

click me!