* ಸಿದ್ದರಾಮಯ್ಯ ಭೇಟಿಯಾದ ದೇವೇಗೌಡ್ರ ಮಾನಸ ಪುತ್ರ
* ಕುತೂಹಲ ಮೂಡಿಸಿದ ಮಾಜಿ ಶಾಸಕ ದತ್ತಾ ನಡೆ
* ಕಾಂಗ್ರೆಸ್ ಸೇರ್ಪಡೆ ಬಗ್ಗೆ ದತ್ತಾ ಮೊದಲ ಪ್ರತಿಕ್ರಿಯೆ
ಬೆಂಗಳೂರು, (ಫೆ.07): ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ವೈ ಎಸ್‌ವಿ ದತ್ತಾ (YS Datta) ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.
ಹೌದು.. ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ್ರ ಮಾನಸ ಪುತ್ರ ಎಂದೇ ಕರೆಯಿಸಿಕೊಳ್ಳುವ ದತ್ತಾ ಅವರು ಕಾಂಗ್ರೆಸ್ (Congress) ಸೇರ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಅವರು ಜೆಡಿಎಸ್ ಕಾರ್ಯಚಟುವಟಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.
ಅಲ್ಲದೇ ಜೆಡಿಎಸ್ ಪಕ್ಷದ ಹಿರಿಯ ನಾಯಕ, ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ಇಂದು (ಸೋಮವಾರ) ಬೆಳಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ (Siddaramaiah) ಅವರ ನಿವಾಸಕ್ಕೆ ಬೆಂಬಲಿಗರೊಂದಿಗೆ ಭೇಟಿ ನೀಡಿದ್ದಾರೆ.
ಜೆಡಿಎಸ್ ನಡೆಗೆ ದತ್ತಾ ಅಸಮಾಧಾನ: ಕಾಂಗ್ರೆಸ್ ಸೇರ್ತಾರಾ ದೇವೇಗೌಡ್ರ ಮಾನಸ ಪುತ್ರ?
ಕಡೂರು ಕ್ಷೇತ್ರದ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ದತ್ತ ಅವರು, ಅಧಿವೇಶನದಲ್ಲಿ ರಾಗಿ ಬೆಳೆದ ರೈತರ ಸಮಸ್ಯೆಗಳು ಹಾಗೂ ರಾಗಿ ಖರೀದಿ ಬಗ್ಗೆ ಮಾತನಾಡಿ ಒತ್ತಾಯಿಸಲು ಮನವಿ ಮಾಡಿದರು.
ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವಂತೆ ಸಿದ್ದುಗೆ ಮನವಿ
ಈ ವೇಳೆ ವೈ.ಎಸ್.ವಿ ದತ್ತ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಬಹಿರಂಗವಾಗಿಯೇ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಅಭಿಮಾನಿಗಳು ಮನವಿ ಮಾಡುತ್ತಿದಂತೆ ‘ಸುಮ್ಮನಿರಿ’ ಎಂದು ವೈ.ಎಸ್.ವಿ. ದತ್ತ ಅವರು ಅಭಿಮಾನಿಗಳ ಮಾತನ್ನು ತಡೆಯುವ ಪ್ರಯತ್ನ ಮಾಡಿದರು. ಆದರೂ ಬಿಡದ ದತ್ತ ಅಭಿಮಾನಿಗಳು ‘ಸಿದ್ದರಾಮಯ್ಯನವರೇ ಕೃಷ್ಣಮೂರ್ತಿ ಅವರ ಕಾಲದಿಂದಲೂ ನೀವು ಹೇಳಿದಂತೇ ಮಾಡಿದ್ದೀವಿ, ಇದೊಂದು ಬಾರಿ ದತ್ತಾ ಅವರಿಗೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು. ಆದರೆ ಅಭಿಮಾನಿಗಳ ಬೇಡಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಸುಮ್ಮನಾದರು.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ರಾಗಿ ಖರೀದಿಸುವ ಕೇಂದ್ರ ಪುನಾರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ನೇತೃತ್ವದ ರೈತರ ನಿಯೋಗ ಇಂದು ನನ್ನನ್ನು ಭೇಟಿಯಾಗಿ, ಮನವಿ ಸಲ್ಲಿಸಿತು. pic.twitter.com/9D4BAs3AHz
— Siddaramaiah (@siddaramaiah)ಬಳಿಕ ಎಸ್ ವಿ ದತ್ತ ಮಾತನಾಡಿ, ರಾಗಿ ರೈತರ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಮಾತಾಡಲು ಬಂದಿದ್ದೆ. ವಿಧಾನ ಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲು ಮನವಿ ಮಾಡಿದ್ದೇನೆ ಎಂದರು.
ಸಿದ್ದರಾಮಯ್ಯ ಭೇಟಿ ವೇಳೆ ದತ್ತ ಬೆಂಬಲಿಗರಿಂದ ಇವರಿಗೆ ಒಂದು ಅವಕಾಶ ಕೊಡಿ ಎಂಬ ಮನವಿ ವಿಚಾರವಾಗಿ ಮಾತನಾಡಿ, ಅಭಿಮಾನದಿಂದ ಅವರು ಹಾಗೆ ಹೇಳಿದ್ದಾರೆ. ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ನಾನು ಈ ಬಗ್ಗೆ ಈಗಲೇ ಏನು ಮಾತನಾಡಲ್ಲ. ಮೌನ.. ಮೌನ ಎಂದಷ್ಟೇ ಉತ್ತರಿಸಿದರು.
ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ
ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಉಳಿದಿದೆ. ಈಗಾಗಲೇ ಜೆಡಿಎಸ್ ಕೋರ್ ಕಮಿಟಿ ಅದು ಇದು ಅಂತೆಲ್ಲ ಪಕ್ಷ ಸಂಘಟನೆಗೆ ತಯಾರಿ ನಡೆಸಿದೆ. ಆದ್ರೆ, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ವೈಎಸ್‌ವಿ ದತ್ತ ಕಾಣಿಸುತ್ತಿಲಲ್. ಅದ್ಯಾಕೋ ಅವರು ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.
ದೇವೇಗೌಡರ ಮಾನಸ ಪುತ್ರ ಎಂದೇ ಬಿಂಬಿತರಾಗಿರುವ ವೈಎಸ್‌ವಿ ದತ್ತಾ ಅವರು ಬಿಜೆಪಿ ಜತೆ ರಾಜಿ ಸಂಬಂಧ ಪಕ್ಷದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸೇರ್ತಾರಾ ಎನ್ನುವ ಗುಸು-ಗುಸು ಇದೆ.
ವೈಎಸ್‌ವಿ ದತ್ತ ಅವರ ಒಲವು ಕಾಂಗ್ರೆಸ್‌ನತ್ತ ನೆಟ್ಟಿದ್ದು, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ನಾನಾ ಲೆಕ್ಕಾಚಾರಗಳನ್ನ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ದತ್ತಾ ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.