ಡಿಕೆಶಿ ಸ್ಟೈಲ್ ಕಾಪಿ ಮಾಡಲು ಹೋಗಿ ಪೇಚಿಗೆ ಸಿಲುಕಿದ ನಲಪಾಡ್: ಕಾಂಗ್ರೆಸ್ ಪ್ರತಿಭಟನೆ ವೇಳೆ ಹೈಡ್ರಾಮಾ

By Govindaraj S  |  First Published Apr 30, 2022, 12:06 AM IST

• ಬೆಲೆ ಏರಿಕೆ, 40% ಕಮಿಷನ್ ಆರೋಪ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
• ಮಹಮ್ಮದ್ ನಲಪಾಡ್‌ಗೆ ರಾಹುಲ್ ಜಾರಕಿಹೊಳಿ, ಮೃಣಾಲ್‌ ಹೆಬ್ಬಾಳ್ಕರ್ ಸಾಥ್
• ಪ್ರತಿಭಟನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಸರ್ಕಾರ ವಿರುದ್ಧ ವಾಗ್ದಾಳಿ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಏ.30): ಬೆಲೆ ಏರಿಕೆ, 40 ಪರ್ಸೆಂಟ್ ಕಮಿಷನ್ ಆರೋಪ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ (BJP Govt) ವಿರುದ್ಧ ರಾಜ್ಯ ಯುವ ಕಾಂಗ್ರೆಸ್ (Youth Congress) ಘಟಕ ವತಿಯಿಂದ ಬೆಳಗಾವಿಯಲ್ಲಿ (Belagavi) ಪ್ರತಿಭಟನೆ (Protest) ನಡೆಸಲಾಯಿತು. ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ನಲಪಾಡ್ (Mohammed Haris Nalapad) ನೇತೃತ್ವದಲ್ಲಿ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಹನುಮಾನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. 

Latest Videos

undefined

ಯುವ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ ಸೇರಿ ಹಲವರು ಉಪಸ್ಥಿತರಿದ್ದರು. ಕ್ಯಾಂಪ್ ಪ್ರದೇಶದಿಂದ ಧರ್ಮವೀರ ಸಂಭಾಜಿ ವೃತ್ತದಿಂದ ಕಾಲೇಜು ರಸ್ತೆ ಮಾರ್ಗವಾಗಿ ಚನ್ನಮ್ಮ ವೃತ್ತದವರೆಗೆ ರ್ಯಾಲಿ ತಲುಪಿತು. ಇದೇ ವೇಳೆ ಮಹಮ್ಮದ್ ನಲಪಾಡ್, ರಾಹುಲ್ ಜಾರಕಿಹೊಳಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಮೆರವಣಿಗೆಯ ಉದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಎತ್ತಿನಗಾಡಿ ಏರಿ ಕಾರ್ಯಕರ್ತರು ಭಾಗಿಯಾದರು‌. ಇದಾದ ಬಳಿಕ ಡಿಸಿ ಕಚೇರಿಗೆ ತೆರಳಿದ ವೇಳೆ ಹೈಡ್ರಾಮಾವೇ ನಡೆಯಿತು.

ಬೆಲೆ ಏರಿಕೆ ಮುಚ್ಚಿಹಾಕಲು ಬಿಜೆಪಿಯಿಂದ‌ ಕೋಮು ಗಲಭೆ ಸೃಷ್ಟಿ Mohammed Nalapad

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ಟೈಲ್ ಕಾಪಿ ಮಾಡಲು ನಲಪಾಡ್ ಯತ್ನ: ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌.ಶಿವಕುಮಾರ್ ಬ್ಯಾರಿಕೇಡ್ ಏರಿ ಪೊಲೀಸರ ಮೇಲೆ ಜಂಪ್ ಮಾಡಿದರು. ಥೇಟ್ ಇದೇ ಮಾದರಿಯಲ್ಲಿ ಬ್ಯಾರಿಕೇಡ್ ಏರಿ  ಡಿಸಿ ಕಾಂಪೌಂಡ್ ಪ್ರವೇಶಿಸಲು ಮಹಮ್ಮದ್ ನಲಪಾಡ್ ಯತ್ನಿಸಿದರು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ಬಂದ ವೇಳೆ ಹೈಡ್ರಾಮಾವೇ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ಟೈಲ್ ಕಾಪಿ ಮಾಡಲು ಹೋಗಿ ಮಹಮ್ಮದ್ ನಲಪಾಡ್ ಪೇಚೆಗೆ ಸಿಲುಕಿದರು‌.‌ 

ಬ್ಯಾರಿಕೇಡ್ ಮೇಲೆ ಹತ್ತಿ ಜಂಪ್ ಮಾಡಲು ಹೋಗಿ ಬ್ಯಾರಿಕೇಡ್‌ನಲ್ಲಿ ಕಾಲು ಸಿಲುಕಿ ಮಹಮ್ಮದ್ ನಲಪಾಡ್ ಒಂದು ಸೆಕೆಂಡ್ ಅಲ್ಲೇ ಕುಳಿತರು. ಈ ವೇಳೆ ತಡೆಯಲು ಬಂದ ಪೊಲೀಸ್ ಪೇದೆಗೆ ಮಹಮ್ಮದ್ ನಲಪಾಡ್ ಆವಾಜ್ ಹಾಕಿದ್ದು ಸಹ ಕಂಡು ಬಂತು‌. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಮಹಮ್ಮದ್ ನಲಪಾಡ್‌ ಮನವೊಲಿಸಿದರು. ಇನ್ನು ಮನವಿ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿಗೆ '40 ಪರ್ಸೆಂಟ್ ಬಿಜೆಪಿ ಸರ್ಕಾರ' ಎಂಬ ಬರಹದ ಸೂಟಕೇಸ್ ಮಾದರಿಯ ಫೋಮ್‌ಶೀಟ್ ಕಟೌಟ್ ನೀಡಲು ಮಹಮ್ಮದ್ ನಲಪಾಡ್ ‌ಮುಂದಾದರು‌‌‌. ಆಗ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಸೂಟ್‌ಕೇಸ್‌ ಮಾದರಿ ಕಟೌಟ್ ಸ್ವೀಕರಿಸದೇ ಕೇವಲ ಮನವಿ ಪತ್ರ ಸ್ವೀಕರಿಸಿ ತೆರಳಿದರು.

ಗೃಹಸಚಿವರಿಗೆ ಅರ್ಧ ಜ್ಞಾನೇಂದ್ರ ಎಂದು ವ್ಯಂಗ್ಯವಾಡಿದ ನಲಪಾಡ್: ಪ್ರತಿಭಟನೆ ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ಬಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಮ್ಮದ್ ನಲಪಾಡ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು‌. ಈ ವೇಳೆ ಮಾತನಾಡಿದ ಮಹಮ್ಮದ್ ನಲಪಾಡ್, 'ಮೂರ್ಖ, ಜನ ವಿರೋಧಿ ಬಿಜೆಪಿ ಸರ್ಕಾರಕ್ಕೆ 40  ಪರ್ಸೆಂಟ್ ಬಿಟ್ಟು ಬೇರೆ ಏನೂ ಕಾಣಿಸುತ್ತಿಲ್ಲ. ಕಳೆದ ಏಳು ವರ್ಷದಿಂದ ಪೆಟ್ರೋಲ್, ಡಿಸೇಲ್ ದರ ಡಬಲ್ ಆಗಿದೆ. ಸಾಮಾನ್ಯ ಒಬ್ಬ ವ್ಯಕ್ತಿ ಮನೆಯಿಂದ ಆಚೆ ಬರಲು ಭಯ ಪಡುವ ಸ್ಥಿತಿ ಇದೆ. 40 ಪರ್ಸೆಂಟ್ ಸರ್ಕಾರ ಒಬ್ಬ ಯುವಕನ ಜೀವವನ್ನು ತಗೆದಿದೆ. ಸ್ವಾಮೀಜಿಗಳಿಂದ 30 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವ ಸರ್ಕಾರಕ್ಕೆ ನಾಚೆಕೆಯಾಗಬೇಕು. 

ಇಂತಹ ಸರ್ಕಾರ ಕಿತ್ತು ಬಿಸಾಕಲು ಯುವ ಕಾಂಗ್ರೆಸ್ ಮುಂದೆ ಬಂದಿದೆ. ಸರ್ಕಾರದ ವಿರುದ್ಧ ಹೋರಾಟ ಇನ್ನೂ ಮುಂದುವರೆಯುತ್ತೆ. ಪ್ರತಾಸಿಂಹ ಅವರು ಹೇಳ್ತಾರೆ ಕಾಂಗ್ರೆಸ್ ನಲ್ಲಿ ಬಣ ಇದೆ ಅಂತಾ. ಕಾಂಗ್ರೆಸ್‌ನಲ್ಲಿ ಇರೋದು ಒಂದೇ ಬಣ ಕಾಂಗ್ರೆಸ್ ಬಣ ಎಂದ ನಲಪಾಡ್. ಹಿಂದುಳಿದ ವರ್ಗ, ಕ್ರಿಶ್ಚಿಯನ್‌ರು ಭಾರತೀಯರು ಅಲ್ವಾ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಯಾವ ಧರ್ಮಕ್ಕೆ ಸೇರಿದವರು. ನಾವೇನೂ ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕು ಅಂತಾ ಅರ್ಜಿ ಹಾಕಿ ಹುಟ್ಟಿದ್ದೇವೆ‌ಯಾ? ಬಿಜೆಪಿಯರು ಹಿಂದುತ್ವ ಲೀಸ್ ಗೆ ಪಡೆದಿದ್ದಾರಾ? ಎಂದು ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.

Mohammed Nalapad controversy ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌ ವಿರುದ್ಧ ಎಫ್‌ಐಆರ್‌!

ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಮ್ಮದ್ ನಲಪಾಡ್, 'ಬಿಜೆಪಿ ಸರ್ಕಾರದಲ್ಲಿ ಇರುವವರೇ ಹಗರಣ ಮಾಡಿದವರು. 56 ಸಾವಿರ ಯುವಕರ ಜೀವನದ ಜತೆಗೆ ಆಟವಾಡಿದ್ದಾರೆ. ಈ ಬಿಜೆಪಿ ಸರ್ಕಾರಕ್ಕೆ ಮಾನ, ಮರ್ಯಾದೆ, ಜನಪರವಾದ ಕಾಳಜಿ ಇದ್ದರೆ ಇದನ್ನ ಹೇಗೆ ಬಗೆ ಹರಿಸುತ್ತಾರೆ ನೋಡಬೇಕು. ಇದರಲ್ಲಿ ಕಷ್ಟಪಟ್ಟು ಬರೆದವರು ಇರುತ್ತಾರೆ. ಪರೀಕ್ಷೆ ಬರೆದ ಎಲ್ಲರಿಗೂ ನೀವು ನ್ಯಾಯ ಕೊಡಿಸಬೇಕು. ಗೃಹ ಸಚಿವರು ಅರ್ಧ ಜ್ಞಾನೇಂದ್ರ, ಫುಲ್ ಜ್ಞಾನ ಇದಿದ್ರೇ ಕಷ್ಟ ಇರಲಿಲ್ಲ.ಅರ್ಧ ಜ್ಞಾನ ಇಟ್ಟುಕೊಂಡು ಇಂತಹ ಕೆಲಸಗಳನ್ನ ಮಾಡಿಕೊಂಡು ಬಿಡ್ತಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ಕೊಡಬೇಕು.ಅವರು ಗೃಹ ಸಚಿವರಾಗಲು ಅಸಮರ್ಥ, ಇರಲೇಬಾರದು ಅವರು. ಪೊಲೀಸರನ್ನ ಲೀಡ್ ಮಾಡಲು ನಂಬರ್ ಒನ್ ಮಿನಿಸ್ಟರ್ ಬೇಕು, ಇಂತಹ ಅರ್ಧದವರು ಆಗಲ್ಲಾ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಮಹಮ್ಮದ್ ನಲಪಾಡ್ ವಾಗ್ದಾಳಿ ನಡೆಸಿದರು‌.

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಮಹಮ್ಮದ್ ನಲಪಾಡ್, '40 ಪರ್ಸೆಂಟ್ ಸರ್ಕಾರದಿಂದ ಸಂತೋಷ ಪಾಟೀಲ್ ಸಾವನ್ನಪ್ಪಿದರು‌. ನಾವು 40 ಪರ್ಸೆಂಟ್ ತಗೊಂಡು ಬಂದ್ವಿ, ಡಿಸಿಗೆ ಕೊಡೋಕೆ ಹೋದ್ವಿ ಅವರು ತಗೊಳಿಲ್ಲ. ಆ ಜೀವ ಕೊಡೊಕೆ ಆಗುತ್ತಾ ಯಾರ ಕೈಯಲ್ಲಾದರೂ? 40 ಪರ್ಸೆಂಟ್ ದುಡ್ಡು ಎಷ್ಟಾದರೂ ಆಗಲಿ ಯೂಥ್ ಕಾಂಗ್ರೆಸ್‌ನವರು ಕೊಡ್ತೀವಿ. ಈಶ್ವರಪ್ಪರಿಗೆ ಚೆಕ್‌ನಲ್ಲಿ 40 ಪರ್ಸೆಂಟ್ ದುಡ್ಡು ಕೊಡುತ್ತೇವೆ. ನಮಗೆ ಸಂತೋಷ ಪಾಟೀಲ್ ಜೀವ ವಾಪಸ್ ಕೊಡಲಿ. ಈಶ್ವರಪ್ಪ ಎಷ್ಟು ಒಳ್ಳೆಯವರು ಅಂದ್ರೆ ಒಬ್ಬ ಯುವಕನ ಜೀವ ತಗೊಂಡಿದ್ದಾರೆ.‌ ಆ ಶಾಪ ಅವರಿಗೆ ತಟ್ಟೆ ತಟ್ಟುತ್ತೆ, ಆ ನೋವು ಅವರಿಗೆ ಬಿದ್ದೆ ಬೀಳುತ್ತೆ' ಅಂತಾ ಹೇಳಿದರು.

click me!