ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಸಹಾಯ ಧನ
ಜಮೀರ್ ಅಹಮ್ಮದ್ ಖಾನ್ ವಿರುದ್ಧ ಸಿ ಟಿ ರವಿ ಕೆಂಡಾಮಂಡಲ
ಮಗು ಚಿವುಟಿ ತೊಟ್ಟಿಲಯ ತೂಗೋ ಕೆಲಸವನ್ನು ಕಾಂಗ್ರೆಸ್ ಮಾಡ್ತಿದೆ ಎಂದ ಸಿಟಿ ರವಿ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.29): ಹುಬ್ಬಳ್ಳಿ ಗಲಭೆಕೋರರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಆಹಾರ ಕಿಟ್ , ಹಣವನ್ನು ನೀಡುವ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಗಲಭೆಕೋರರಿಗೆ ಹಣ ನೀಡುತ್ತಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ...
ನೆರವು ಕೊಡುವ ಪಾತ್ರ ಕಾಂಗ್ರೆಸ್‌ನದ್ದು
ಹುಬ್ಬಳಿ ಗಲಭೆಕೋರರಿಗೆ ಜಮೀರ್ ರಂಜಾನ ಕಿಟ್ ಹಾಗೂ ಹಣ ವಿತರಣೆ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಡಿಜೆಹಳ್ಳಿ-ಕೆಜೆಹಳ್ಳಿ, ಪಾದರಾಯನಪುರದಲ್ಲೂ ಕಾಂಗ್ರೆಸ್ ಪಾತ್ರ ಹಾಗೇ ಇತ್ತು ಅವರಿಗೆ ಹಣ, ವಕೀಲರ ನೇಮಕ ಎಲ್ಲ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.
ಆ ಸಂದರ್ಭದಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು. ಈಗ ಹುಬ್ಬಳ್ಳಿ ಪ್ರಕರಣದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ. ಬಹಿರಂಗವಾಗಿ ಕಿಟ್ ನೀಡುವ ಬಗ್ಗೆ ಹೇಳಿಕೆ ಬಂದಿರುವುದನ್ನು ಖಂಡಿಸಿದರು. ಕಾಂಗ್ರೇಸ್ ಮಗು ಚಿವುಟಿ ತೊಟ್ಟಿಲು ತೂಗೋ ಕೆಲಸವನ್ನು ಮಾಡುತ್ತಿದೆ.ರಾಜ್ಯದಲ್ಲಿ ಕೋಮುಗಲಭೆ ಹುಟ್ಟುಹಾಕಿ ವೋಟ್ ಬ್ಯಾಂಕ್ ಗಟ್ಟಿಯಾಗಿ ಇಟ್ಟು ಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಕಿಡಿಕಾರಿದರು.
ಹುಬ್ಬಳ್ಳಿ ಗಲಭೆಕೋರರ ಕುಟುಂಬಕ್ಕೆ ಜಮೀರ್ ಸಹಾಯ, ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಗಲಭೆಕೋರರಿಗೆ ನೆರವು ಕೊಡುವ ಪಾತ್ರ ಕಾಂಗ್ರೆಸ್ ನದ್ದು ಇರಬಹುದು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವ ರೀತಿ ಜಮೀರ್, ಕಾಂಗ್ರೆಸ್ ನಡುವಳಿಕೆ ಇದೆ. ಹಿಜಾಬ್ ಹಿಂದೆ ಪಿಎಫ್ ಐ ಒಂದೇ ಅಲ್ಲ ಕಾಂಗ್ರೆಸ್ ಇದೆ ಅನ್ನೋ ಅನುಮಾನವಿತ್ತು.ಆಗ ಜಾತ್ಯಾತಿತಯೇ ಚಾಂಪಿಯನ್ ಎನಿಸಿಕೊಂಡವರು ಹಿಜಾಬ್ ಪರ ನಿಂತರು, ಹಿಜಾಬ್ ಪರವಾಗಿ ವಾದವನ್ನು ಮಂಡಿಸಿದ್ರು. ಅಲ್ಲದೆ ಹಿಜಾಬ್ ವಿವಾದ ಕೋರ್ಟ್ ಗೆ ಹೋದ ಸಮಯದಲ್ಲಿ ವಕೀಲರಿಗೆ ನೆರವು ಕೊಟ್ಟಿದ್ದು ಕಾಂಗ್ರೆಸ್ ಎಂದರು.
ಅವರೆಲ್ಲಾ ಐದು- ಹತ್ತು ಸಾವಿರಕ್ಕೆ ಬರೋ ವಕೀಲರಲ್ಲ ಸಾಕಷ್ಟು ಬೇಡಿಕೆ ಇರುವ ವಕೀಲರು. ಅವರು ಎದ್ದು ನಿಂತರೆ 50 ಲಕ್ಷ ಬಿಲ್ ಮಾಡೊ ವಕೀಲರು ಮೂಲಕ ವಾದವನ್ನು ಮಾಡಿಸಿದರು. ಅವರೆಲ್ಲಾ ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದ ವಕೀಲರು ಎಂದು ಆರೋಪಿಸಿ ಹಿಜಾಬ್, ಪಾದರಾಯನಪುರ, ಡಿಜೆಹಳ್ಳಿ-ಕೆಜೆಹಳ್ಳಿ, ಹುಬ್ಬಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರ ಇರೋದು ಸ್ಪಷ್ಟವಾಗಿದೆ ಎಂದು ಟೀಕೆಸಿದರು.
ದಿವ್ಯಾ ಹಾಗರಗಿ ರಕ್ಷಣೆ ಮಾಡುವ ಕೆಲಸವನ್ನು ಬಿಜೆಪಿ ಮಾಡಿಲ್ಲ
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ದಿವ್ಯಾ ಹಾಗರಗಿಯನ್ನು ಬಿಜೆಪಿ ರಕ್ಷಣೆ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಸಿ.ಟಿ ರವಿ ತಿರುಗೇಟು ನೀಡಿದರು.
ದಿವ್ಯಾ ಹಾಗರಗಿ ರಕ್ಷಣೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ ತಾನು ಕಳ್ಳ ಪರರ ನಂಬ ಎಂಬ ಮಾತು ಕಾಂಗ್ರೆಸ್ ಅನ್ವಯವಾಗುತ್ತೆ. ತಿಪ್ಪೆ ಸಾರಿಸುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು, ಬಿಜೆಪಿಯೂ ಹಾಗೇ ಎಂದು ಭಾವಿಸಿದ್ದಾರೆ. ಬಿಜೆಪಿ ತಿಪ್ಪೆ ಸಾರಿಸುವುದಾಗಿದ್ದರೆ ದಿವ್ಯ ಹಾಗರಗಿ ಮೇಲೆ ಎಫ್.ಐ.ಆರ್. ಆಗ್ತಿರಲಿಲ್ಲ ಜೊತೆಗೆ ಎಫ್.ಐ.ಆರ್. ಮಾಡಿದ್ದು, ಸಿಐಡಿಗೆ ವಹಿಸಿದ್ದು, ಆಕೆ ಗಂಡನನ್ನ ಬಂಧಿಸಿದ್ದು ಬಿಜೆಪಿ ಸರ್ಕಾರ ಮಾಡಿದ್ದು ಈ ಪ್ರಕರಣದಲ್ಲಿ ಇರುವ ಎಲ್ಲರನ್ನೂ ಬಂಧಿಸುತ್ತಿರುವುದು ಬಿಜೆಪಿ ಸರ್ಕಾರವಾಗಿದ್ದು ಯುಪಿ ಮಾದರಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಸಾಕಷ್ಟು ಆರೋಪಗಳು ಕೇಳಿಬಂತು. ಆಗ ಅಂದಿನ ಸರ್ಕಾರ ಮಾಡಿದೇನು. ತಿಪ್ಪೆ ಸಾರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿತು. ಆದ್ರೆ ಬಿಜೆಪಿ ಸರ್ಕಾರ ನಿಷ್ಟಪಕ್ಷವಾದ ತನಿಖೆ ನಡೆಸುತ್ತಿದೆ ಎಂದರು.
ಹಿಂದೆ ಅವರದ್ದೇ ಮುಖ್ಯಮಂತ್ರಿ ಮೇಲೆ ವಾಚ್ ಪ್ರಕರಣ ಬಂತು,ಕಳ್ಳತನದ ವಾಚು, ಅಕ್ರಮದ ವಾಚು ಸಿಎಂ ಕೈಗೆ ಹೇಗೆ ಬಂತು ಎಂದು ತನಿಖೆಯ ಆಗಲಿಲ್ಲ. ಜೊತೆಗೆ ರಿಡ್ಯೂ ಹೆಸರಲ್ಲಿ ಅರ್ಕಾವತಿ ಭೂಹರಗದಲ್ಲಿ ಸಾವಿರಾರು ಎಕರೆ ಡಿನೋಟಿಫೈ ಮಾಡಿದರು .10-20 ಲಕ್ಷ, ಕೆಲವಡೆ 50 ಲಕ್ಷ ಪಡೆದರು, ತನ್ನ ಕುತ್ತಿಗೆಗೆ ಬರುತ್ತೆ ಎಂದು ಹಾಗೇ ತಿಪ್ಪೆ ಸಾರಿಸಿದರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಂಪಣ್ಣ ಆಯೋಗ ಕೂಡ ಕಾಂಗ್ರೆಸ್ ಪಾತ್ರವನ್ನ ಎತ್ತಿ ಹಿಡಿದಿತ್ತು, ತಿಪ್ಪೆ ಸಾರಿಸಿದರು ಪ್ರಶಂಸೆ ಹೇಳುವ ಮನಸ್ಥಿತಿ ಅವರಿಗಿಲ್ಲ, ಕಾಂಗ್ರೆಸ್ನಂತೆ ಬಿಜೆಪಿ ಅಲ್ಲ , ಪಿಎಸ್ ಐ ಪ್ರಕರಣದಲ್ಲಿ ಯಾರೇ, ಎಷ್ಟೆ ಪ್ರಭಾವಶಾಲಿಗಳಿದ್ದರ್ರೂ ಶಿಕ್ಷೆ ಆಗುತ್ತೆ, ಮುಚ್ಚಾಕೋ ಪ್ರಶ್ನೆಯೇ ಇಲ್ಲ ಎಂದರು.