ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ರಾಜಕಾರಣ/ ನಾಲ್ವರು ಶಾಸಕರಿದ್ದರೂ ಹೊಸದಾಗಿ ಆಯ್ಕೆಯಾದ ಹೆಬ್ಬಾರ್ ಗೆ ಒಲಿದ ಮಂತ್ರಿಗಿರಿ/ ದೇಶಪಾಂಡೆ ರಾಜಕೀಯ ಅಧ್ಯಾಯ ಕೊನೆಯಾಯಿತೆ?
ಬೆಂಗಳೂರು/ಯಲ್ಲಾಪುರ(ಫೆ.10) ಉತ್ತರ ಕನ್ನಡ ಜಿಲ್ಲೆಯಲ್ಲಿ ಬದಲಾದ ರಾಜಕಾರಣದ ವಾತಾವರಣ ನಿರ್ಮಾಣ ಆಗಿದೆ. ಯಾವಾಗ ಯಲ್ಲಾಪುರದ ಶಿವರಾಮ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೋ ಅಂದೆಯೇ ಹೊಸ ಪರಂಪರೆಗೆ ನಾಂದಿಯಾಯಿತು. ಶಿವರಾಮ ಹೆಬ್ಬಾರ್ ದೋಸ್ತಿ ಪಡೆ ತೊರೆದು ಬಿಜೆಪಿ ಸೇರಿ ಉಪಚುನಾವಣೆ ಎದುರಿಸಿ ಗೆದ್ದು ಬಂದು ಈಗ ಸಚಿವರಾಗಿದ್ದಾರೆ.
ಉತ್ತರ ಕನ್ನಡದ ಮಟ್ಟಿಗೆ ಇದೊಂದು ಹೊಸ ಅಧ್ಯಾಯ. ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರೇ ಇದ್ದರೂ ಮಂತ್ರಿಗಿರಿ ಸಿಕ್ಕಿದ್ದು ಮಾತ್ರ ಬೇರೆ ಪಕ್ಷದಿಂದ ವಲಸೆ ಬಂದು ಗೆದ್ದ ಶಿವರಾಮ ಹೆಬ್ಬಾರ್ ಅವರಿಗೆ.
undefined
ದೇಶಪಾಂಡೆ ಅಧ್ಯಾಯ ಮುಗಿಯಿತೆ? ಹಳಿಯಾಳದ ಆರ್.ವಿ. ದೇಶಪಾಂಡೆ ಜಿಲ್ಲಾ ರಾಜಕಾರಣದ ಮಟ್ಟಿಗೆ ದೊಡ್ಡ ಹೆಸರು. ಜನತಾದಳ ಉರಲಿ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಏರಲಿ ದೇಶಪಾಂಡೆ ಅವರಿಗೆ ಒಂದು ಸಚಿವ ಸ್ಥಾನ ಫಿಕ್ಸ್ ಆಗಿತ್ತು. ಸುಮಾರು 15 ವರ್ಷಕ್ಕೂ ಅಧಿಕ ಕಾಲ ದೇಶಪಾಂಡೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ ಈಗ ಬಿಜೆಪಿ ಆಡಳಿತ ಹಿಡಿದಿದೆ.
ಕಾಗೇರಿ ಕ್ರಿಯಾಶೀಲ: ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ನಿರಂತರವಾಗಿ ಗೆದ್ದು ಬರುತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಅಧಿಕಾರಕ್ಕೆ ಏರಿದಾಗ ಹಿಂದಿನಂತೆ ಶಿಕ್ಷಣ ಸಚಿವ ಸ್ಥಾನ ಸಿಗುತ್ತದೆ ಎಂದು ಪರಿಭಾವಿಸಲಾಗಿತ್ತು. ಆದರೆ ಬದಲಾದ ರಾಜಕಾರಣದ ವಾತಾವರಣ ಕಾಗೇರಿಯವರನ್ನು ವಿಧಾನಸಭೆ ಸ್ಪೀಕರ್ ಅನ್ನಾಗಿ ಮಾಡಿತ್ತು. ಅದು ಯಾಕೋ ಗೊತ್ತಿಲ್ಲ ಹಿಂದೆ ಸಚಿವರಾಗಿದ್ದಾಗಿನಕ್ಕಿಂತಲೂ ಈಗ ಸ್ಪೀಕರ್ ಆಗಿದ್ದರೂ ಕಾಗೇರಿ ದಿನಾ ದಿನಾ ಕ್ರಿಯಾಶೀಲರಾಗುತ್ತಿದ್ದಾರೆ ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿಬಂದಿದೆ.
ಯಾರಿಗೆ ಯಾವ ಖಾತೆ; ಇಲ್ಲಿದೆ ಫೈನಲ್ ಪಟ್ಟಿ
ಉತ್ತರ ಕನ್ನಡ ಶಾಸಕರ ಪಟ್ಟಿ; 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು ಕಾರವಾರ-ಅಂಕೋಲಾದಿಂದ ಬಿಜೆಪಿಯ ರೂಪಾಲಿ ನಾಯ್ಕ್. ಶಿರಸಿ-ಸಿದ್ದಾಪುರದಿಂದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ದಾಂಡೇಲಿ-ಹಳಿಯಾಳದಿಂದ ಕಾಂಗ್ರೆಸ್ ನ ಆರ್.ವಿ.ದೇಶಪಾಂಡೆ, ಕುಮಟಾ-ಹೊನ್ನಾವರದಿಂದ ಬಿಜೆಪಿಯ ದಿನಕರ ಶೆಟ್ಟಿ. ಭಟ್ಕಳದಿಂದ ಬಿಜೆಪಿಯ ಸುನೀಲ್ ನಾಯ್ಕ್, ಯಲ್ಲಾಪುರದಿಂದ ಕಾಂಗ್ರೆಸ್ ನ ಶಿವರಾಮ ಹೆಬ್ಬಾರ್ ಗೆದ್ದಿದ್ದರು.
ಅನಂತ್ ಕುಮಾರ್ ಹೆಗಡೆ: ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆ ಕಳೆದ ಅವಧಿಯಲ್ಲಿ ಕೇಂದ್ರ ಸಚಿವ ಸಚಿವ ಸ್ಥಾನ ಪಡೆದುಕೊಂಡಿದ್ದರೂ ಈ ಸಾರಿ ಕೇಂದ್ರ ನಾಯಕರ ಅವಗಣನೆಗೆ ಪಾತ್ರವಾಗಿದ್ದರು. ಅದಕ್ಕೆ ಅವರದ್ದೇ ಆದ ಒಂದಿಷ್ಟು ಕಾರಣ ಇರಬಹುದು. ಜಿಲ್ಲಾ ರಾಜಕಾರಣದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಹೆಗಡೆ ತಮ್ಮ ಸ್ಥಾನ ಮಾತ್ರ ಕಾಪಾಡಿಕೊಂಡಿದ್ದಾರೆ.
ಡಿಕೆಶಿ ಬಳಿ ಇದ್ದ ಖಾತೆಯೇ ಸಾಹುಕಾರನಿಗೆ!
ಆನಂದ್ ಅಸ್ನೋಟಿಕರ್: ಪಕ್ಷಾಂತರ ಮಾಡುತ್ತಲೇ ಇರುವ ಆನಂದ್ ಅಸ್ನೋಟಿಕರ್ ಹಿಂದಿನ ಬಿಜೆಪಿ ಅವಧಿಯಲ್ಲಿ ಸಚಿವರಾಗಿಯೂ ಇದ್ದರು. ಮೊದಲು ಕಾಂಗ್ರೆಸ್ ನಂತರ ಬಿಜೆಪಿ ಎಂದ ಅಸ್ನೋಟಿಕರ್ ಇದೀಗ ಜೆಡಿಎಸ್ ನಲ್ಲಿ ಸ್ಥಾನ ಭದ್ರ ಮಾಡಿಕೊಳ್ಳಲು ಹುಡುಕಾಟ ನಡೆಸಿದ್ದಾರೆ.
ಈಗ ಸಿಕ್ಕ ಸಚಿವ ಸ್ಥಾನ: ಬಿಜೆಪಿ ಭದ್ರಕೋಟೆಯಾಗಿಯೇ ಮಾರ್ಪಾಡಾಗಿರುವ ಉತ್ತರ ಕನ್ನಡ ಜಿಲ್ಲೆಯ 6 ಶಾಸಕ ಸ್ಥಾನದಲ್ಲಿ ನಾಲ್ವರು ಬಿಜೆಪಿ ಶಾಸಕರಿದ್ದರು. ಇಬ್ಬರು ಕಾಂಗ್ರೆಸ್ ಶಾಸಕರಿದ್ದರು. ಆದರೆ ಸಚಿವ ಸ್ಥಾನದಿಂದ ಜಿಲ್ಲೆ ವಂಚಿತವಾಗಿತ್ತು. ಈಗ 5ನೇ ಬಿಜೆಪಿ ಶಾಸಕರ ಆಯ್ಕೆಯಾಗಿದ್ದು ಅವರಿಗೆ ಸಚಿವ ಸ್ಥಾನ ಸಿಕ್ಕಂತಾಗಿದೆ. ಇಷ್ಟು ದಿನ ಉಸ್ತುವಾರಿಯಾಗಿ ಪಕ್ಕದ ಜಿಲ್ಲೆಯ ಶಶಿಕಲಾ ಜೊಲ್ಲೆ ಕಾರ್ಯನಿರ್ವಹಿಸುತ್ತಿದ್ದರು.
ಹೆಬ್ಬಾರರ ಮುಂದೆ ಸವಾಲುಗಳು: ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ ಒಲಿದು ಬಂದಿದೆ. ಜತೆಗೆ ಉಸ್ತುವಾರಿಯೂ ಸಿಗಲಿದೆ. ಅಭಿವೃದ್ಧಿಯಾಗದ ಪ್ರವಾಸೋದ್ಯಮ, ಉದ್ಯೋಗ ಅರಸಿ ನಗರ ಸೇರುತ್ತಿರುವ ಯುವಕರು, ನಿರಾಶ್ರಿತರಿಗೆ ಇನ್ನು ಸಿಗದ ಪರಿಹಾರ, ಜಿಲ್ಲೆಗೆ ಇಲ್ಲದ ಸುಸಜ್ಜಿತ ಆಸ್ಪತ್ರೆ, ಕಸ್ತೂರಿ ರಂಗನ್ ವರದಿಯ ಆತಂಕ.. ಹೀಗೆ ಹಲವಾರು ಸವಾಲುಗಳು ಹೆಬ್ಬಾರ್ ಮುಂದೆ ಇದ್ದು ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.