ಕಮಲ ಪಾಳಯಕ್ಕೆ ಶಾಕ್‌: ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಪುತ್ರ ವಿವೇಕ್‌ ಕಾಂಗ್ರೆಸ್‌ಗೆ ಸೇರ್ಪಡೆ

By Kannadaprabha NewsFirst Published Apr 12, 2024, 10:22 AM IST
Highlights

ಮೊದಲು ಹಂತದಲ್ಲಿ ಮುಖಂಡರು ಸ್ವಚ್ಛ ಮನಸ್ಸಿನಿಂದ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ: ವಿವೇಕ್‌ ಹೆಬ್ಬಾರ್‌ 

ಶಿರಸಿ(ಏ.12):  ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಅವರ ಪುತ್ರ ವಿವೇಕ್‌ ಹೆಬ್ಬಾರ್ ಹಾಗೂ ಅವರ ನೂರಾರು ಬೆಂಬಲಿಗರು ಗುರುವಾರ ಬನವಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜಾ ಮತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಾಯಿ ಗಾಂವ್ಕರ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಪಂ ಮಾಜಿ ಸದಸ್ಯೆ ರೂಪಾ ನಾಯ್ಕ, ಮಂಗಲಾ ನಾಯ್ಕ, ಪ್ರಶಾಂತ ಗೌಡ್ರ ಮಲ್ಲಾಸರ್ಜನ, ಮುಖಂಡರಾದ ದ್ಯಾಮಣ್ಣ ದೊಡ್ಮನಿ, ರಘು ಗುಡ್ನಾಪುರ, ದೇವರಾಜ ರಾಮಾಪುರ, ಶಶಿಧರ ನಾಯ್ಕ, ಜಿ.ವಿ. ಭಟ್ಟ ಬಿಸ್ಲಕೊಪ್ಪ ಅರವಿಂದ ತೆಲಗುಂದ ಸೇರಿಂದತೆ ಇನ್ನಿತರ ಮುಖಂಡರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರು.

ಕಾಂಗ್ರೆಸ್‌ಗೆ ಸೇರುವೆ ಎಂದು ಅರ್ಜಿ ಕೊಟ್ಟಿಲ್ಲ: ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌

ಅದೇ ರೀತಿ ಮುಂಡಗೋಡದಲ್ಲಿ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವೇಕ ಹೆಬ್ಬಾರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ ಸೇರಿದರು.ಈ ಸಂದರ್ಭದಲ್ಲಿ ಯುವ ಮುಖಂಡ ವಿವೇಕ ಹೆಬ್ಬಾರ್ ಮಾತನಾಡಿ, ಕಾರಣಾಂತರಗಳಿಂದ ಇಲ್ಲಿಂದ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದೆವು. ನಮ್ಮ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ನಡೆಸಿಕೊಂಡ ರೀತಿಯಿಂದ ಬೇಸರದಿಂದ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ. ಮನೆಗೆ ವಾಪಸ್ಸಾಗಿರುವ ಸಂತೋಷವಾಗಿದೆ. ಅಧಿಕಾರದ ಆಸೆಗಾಗಿ ಪಕ್ಷಕ್ಕೆ ಬಂದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಅವರ ಗೆಲುವಿಗೆ ಕೊಡುಗೆ ನೀಡಬೇಕೆಂಬ ಆಸೆಯಿಂದ ಪಕ್ಷಕ್ಕೆ ಬಂದಿದ್ದೇವೆ. ಪಕ್ಷ ಸಂಘಟನೆಯಲ್ಲಿ ನಾವೆಲ್ಲರೂ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತೇವೆ ಎಂದರು.

ದೇಶದಿಂದ ಬಿಜೆಪಿ ತೊಲಗಿಸಿ: ಐವನ್ ಡಿಸೋಜಾ

ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಮತ್ತು ಸರ್ವಾಧಿಕಾರದ ನಡೆಯಿಂದ ಬಿಜೆಪಿ ಮನೆ ಖಾಲಿಯಾಗುತ್ತಿದ್ದು, ದೇಶ ಹಾಗೂ ರಾಜ್ಯದಲ್ಲಿ ಕೋಟ್ಯಂತರ ಮತ್ತು ಲಕ್ಷಾಂತರ ಜನರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಹೇಳಿದರು.

ದೇಶದ ಪ್ರತಿ ಕಡೆಯಲ್ಲಿಯೂ ಬಿಜೆಪಿ ಜನ ವಿರೋಧಿ ಆಡಳಿತ ನಡೆಸುತ್ತಿದೆ. ದೇಶ, ಸಂವಿಧಾನ ವಿರೋಧಿ ಮತ್ತು ಸರ್ವಾಧಿಕಾರದ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ದೇಶದಿಂದ ತೊಲಗಿಸಬೇಕಿದ್ದು, ಕಟ್ಟ ಕಡೆಯ ಮತದಾರರು ಬಿಜೆಪಿಯನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂಬ ಕಾರಣದಿಂದ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಬನವಾಸಿ, ಮುಂಡಗೋಡ ಹಾಗೂ ಯಲ್ಲಾಪುರ ಭಾಗದ ಬಿಜೆಪಿ ಸೇರ್ಪಡೆಗೊಂಡ ಸಾವಿರಾರು ಕಾರ್ಯಕರ್ತರನ್ನು ಪುನಃ ಕಾಂಗ್ರೆಸ್‌ಗೆ ಕರೆತರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆದೇಶದ ಮೇರೆಗೆ ಎಲ್ಲರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಸೂಕ್ತಸ್ಥಾನ ನೀಡಲಾಗುತ್ತದೆ. ಹೊಸಬರು ಹಳೆಬರು ಎಂಬುದು ಇಲ್ಲ. ಎಲ್ಲರಿಗೂ ಎಲ್ಲ ಹಕ್ಕು ಇದೆ ಎಂದರು.

ಎಐಸಿಸಿ ಕಾರ್ಯದರ್ಶಿ ಶಂಕರ ಪಾಟೀಲ ಮಾತನಾಡಿ, ಭಿನ್ನಾಭಿಪ್ರಾಯ ಬದಿಗಿಟ್ಟು ಚುನಾವಣೆಗೆಯಲ್ಲಿ ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಅವರನ್ನು ಗೆಲ್ಲಿಸಲು ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ ಪ್ರಾಸ್ತಾವಿಕ ಮಾತನಾಡಿದರು. ಗ್ಯಾರಂಟಿ ಪ್ರಾಧಿಕಾರ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಆರ್.ಎಚ್. ನಾಯ್ಕ ಕುಮಟಾ, ಪ್ರಮುಖರಾದ ರಾಮಕೃಷ್ಣ ಮೂಲಿಮನೆ, ರವಿ ನಾಯ್ಕ, ದ್ಯಾಮಣ್ಣ ದೊಡ್ಮನಿ, ಪ್ರಕಾಶ ಹೆಗಡೆ, ಸಿದ್ದು ನರೇಗಲ್, ಶ್ರೀಲತಾ ಕಾಳೇರಮನೆ, ಮಂಗಲಾ ನಾಯ್ಕ, ಮಧು ಗುಡ್ನಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಸವರಾಜ ದೊಡ್ಮನಿ ನಿರೂಪಿಸಿದರು.

ಐವನ್ ಡಿಸೋಜಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಹೊರತುಪಡಿಸಿ, ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ ಸೈಲ್, ಯುವ ಮುಖಂಡ ನಿವೇದಿತ್ ಆಳ್ವ ಸೇರಿದಂತೆ ಜಿಲ್ಲಾ ಮುಖಂಡರು ಗೈರಾಗಿದ್ದರು.

ಬಿಜೆಪಿ ರೆಬೆಲ್ಸ್‌ ಎಸ್ಟಿಎಸ್‌, ಹೆಬ್ಬಾರ್‌ರಿಂದ ಡಿ.ಕೆ.ಶಿವಕುಮಾರ್‌ ಭೇಟಿ

ಮಧುಕೇಶ್ವರನ ಆಣೆ, ಪಕ್ಷಾಂತರ ಮಾಡಲ್ಲ

ಯಾವುದೇ ಕಾರಣಕ್ಕೆ ಮತ್ತು ನಮ್ಮ ನಾಯಕರ ಮಾತಿನಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದೇವು. ಈಗ ಪುನಃ ನಮ್ಮ ಮನೆಗೆ ಮರಳುತ್ತಿದ್ದೇವೆ. ಅಧಿಕಾರದ ಆಸೆಗೆ ನಾವು ಕಾಂಗ್ರೆಸ್‌ಗೆ ಬಂದಿಲ್ಲ. ನಾವು ಪಕ್ಷ ದ್ರೋಹ ಮಾಡಿರುವುದಕ್ಕೆ ಎಲ್ಲರ ಬಳಿ ಕ್ಷಮೆ ಕೇಳುತ್ತೇನೆ. ಬನವಾಸಿಯ ಮಧುಕೇಶ್ವರ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಜೀವ ಇರುವ ವರೆಗೆ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ದ್ಯಾಮಣ್ಣ ದೊಡ್ಮನಿ ಹೇಳಿದರು.

ಮೊದಲು ಹಂತದಲ್ಲಿ ಮುಖಂಡರು ಸ್ವಚ್ಛ ಮನಸ್ಸಿನಿಂದ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಯುವ ಮುಖಂಡ ವಿವೇಕ್‌ ಹೆಬ್ಬಾರ್‌ ತಿಳಿಸಿದ್ದಾರೆ. 

click me!