ಕ್ಷೇತ್ರ ಮರುವಿಂಗಡಣೆ : ದಕ್ಷಿಣ ಭಾರತಕ್ಕೆ ಅನ್ಯಾಯವೇ? ಸಿದ್ದರಾಮಯ್ಯ ವಾದಕ್ಕೆ ಬೊಮ್ಮಾಯಿ ಖಡಕ್ ಉತ್ತರ

Kannadaprabha News   | Kannada Prabha
Published : Apr 18, 2026, 09:48 AM IST
women reservation bill 2026

ಸಾರಾಂಶ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರು ಜನರನ್ನು ದಾರಿ ತಪ್ಪಿಸುವ ವಿತಂಡವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಕಾಂಗ್ರೆಸ್ ವಾದ ಅಲ್ಲಗೆಳೆದಿದ್ದಾರೆ.

  • ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ

 ಒಬ್ಬ ವ್ಯಕ್ತಿಗೆ ಒಂದೇ ಓಟು ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕು. ಶ್ರೀಮಂತರಿಗೆ ಹೆಚ್ಚಿನ ಓಟಿನ ಅಧಿಕಾರ, ಬಡವರಿಗೆ ಕಡಿಮೆ ಓಟಿನ ಅಧಿಕಾರ ಅಥವಾ ಜಾತಿ ಆಧಾರದ ಮೇಲೆ ಓಟಿನ ಅಧಿಕಾರ ಇಂಥ ಯಾವುದೇ ಭೇದ-ಭಾವ ಇರಬಾರದು ಎನ್ನುವ ಕಾರಣಕ್ಕೆ ಪ್ರತಿಯೊಬ್ಬರಿಗೂ ಒಂದೇ ಓಟು ಎಂಬುದು ಸಮಾನತೆಯ ಭದ್ರತೆಯ ಅಡಿಪಾಯದಲ್ಲಿ ನಮ್ಮ ಸಂವಿಧಾನಶಿಲ್ಪಿ ಕೊಟ್ಟಿರುವ ಹಕ್ಕು.

ಮಹಿಳೆಯರ ಮೀಸಲಾತಿ ವಿಚಾರಕ್ಕೆ ಬರುವುದಾದರೆ 2023ರಲ್ಲಿ ತಗೆದುಕೊಂಡ ನಿರ್ಣಯದ ಪ್ರಕಾರ ಶೇ.50ರಷ್ಟು ಲೋಕಸಭಾ ಸೀಟು ಹೆಚ್ಚಳ ಮಾಡಿ ಅವುಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಿಡಬೇಕು ಎನ್ನುವುದು ಈಗಾಗಲೇ ಸಂವಿಧಾನದಲ್ಲಿ ತಿದ್ದುಪಡಿಯಾಗಿ ಸಂಸತ್ತಿನಲ್ಲಿ ಕಾನೂನೂ ಆಗಿದೆ. ಈ ಕಾನೂನನ್ನು 2034ಕ್ಕೆ ಜಾರಿ ಮಾಡುವುದು ಆಗಿನ ಸಂವಿಧಾನ ತಿದ್ದುಪಡಿಯ ಭಾಗವಾಗಿತ್ತು. ಆ ಸಂದರ್ಭದಲ್ಲಿ ಎಲ್ಲಾ ವಿಚಾರಗಳಿಗೆ ಒಪ್ಪಿಕೊಂಡರೂ 2029ಕ್ಕೇ ಮೀಸಲಾತಿ ಅನುಷ್ಠಾನ ಆಗಬೇಕು ಎಂದು ಕಾಂಗ್ರೆಸ್‌ನ ಸರ್ವೋಚ್ಚ ನಾಯಕಿ ಸೋನಿಯಾ ಗಾಂಧಿ ಅವರೇ ಸಂಸತ್ತಿನಲ್ಲಿ ಪ್ರಬಲವಾಗಿ ವಾದ ಮಂಡಿಸಿದ್ದರು. ಈಗ ಕಾಂಗ್ರೆಸ್ ನಾಯಕರ ಒತ್ತಾಸೆಯಂತೆಯೇ ನಮ್ಮ ಪ್ರಧಾನಿಗಳು 2029ಕ್ಕೇ ಮಹಿಳಾ ಮೀಸಲಾತಿ ಅನುಷ್ಠಾನ ಮಾಡಲು ಸಂಸತ್ತಿನಲ್ಲಿ ಮತ್ತೆ ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ತಂದಿದ್ದಾರೆ.

ಸಿದ್ದರಾಮಯ್ಯರ ವಿತಂಡವಾದ:

ಈ ತಿದ್ದುಪಡಿ ವಿಧೇಯಕದಲ್ಲಿ ಎರಡು ಮಹತ್ವದ ಅಂಶಗಳಿವೆ. ಅವುಗಳಲ್ಲಿ ಮೊದಲನೆಯದು ಸಂಸತ್ತಿನ ಸೀಟುಗಳ ಸಂಖ್ಯೆ ಶೇ.50ರಷ್ಟು ಹೆಚ್ಚಳ ಮಾಡುವುದು, ಅಂದರೆ ಈಗಿರುವ ಸೀಟುಗಳ ಸಂಖ್ಯೆಯನ್ನು 543 ರಿಂದ 850ಕ್ಕೆ ಹೆಚ್ಚಿಸುವುದು. ಇದಕ್ಕೆ ಆಧಾರ ಏನು? ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿರುವುದರಿಂದ ಅವರಿಗೆ ಶಿಕ್ಷೆ ಆಗಬಾರದು ಎನ್ನುವುದು ಮತ್ತು ಅಂದು ಸಂಸತ್ತಿನಲ್ಲಿ ಅಂಗೀಕರಿಸಿದ ಆಗಿನ ಸಂಸತ್‌ ಸದಸ್ಯರ ಸಂಖ್ಯೆಯ ಶೇ.50ರಷ್ಟು ಹೆಚ್ಚಳ ಮಾಡಬೇಕೆನ್ನುವ ಕಾರಣಕ್ಕೆ 2011ರ ಜನಸಂಖ್ಯೆ ಆಧಾರದ ಮೇಲೆ ಈ ಕ್ಷೇತ್ರ ಮರುವಿಂಗಡಣೆಗೆ ಮುಂದಾಗಲಾಗಿದೆ. ಇದರರ್ಥ ಕ್ಷೇತ್ರ ಮರುವಿಂಗಡಣೆ 2026ರಲ್ಲಿ ನಡೆಯುವ ಜನಗಣತಿ ಜನಸಂಖ್ಯೆ ಆಧಾರದ ಮೇಲೆ ಅಲ್ಲ ಎನ್ನುವುದು ಬಹಳ ಸ್ಪಷ್ಟ. ಆದರೆ, ಇಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿರುವ ವಿತಂಡವಾದ, ಜನರನ್ನು ದಾರಿ ತಪ್ಪಿಸುವ ವಾದದ ಬುನಾದಿಯೇ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಸೀಟುಗಳನ್ನು ಹಂಚಿಕೆ ಮಾಡುತ್ತಾರೆ ಎನ್ನುವುದು.

ಆದರೆ ಅಂದು ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ವಿಧೇಯಕವು ಸಂಸತ್ತಿನಲ್ಲಿರುವ ಸ್ಥಾನಗಳ ಆಧಾರದ ಶೇ.50ರಷ್ಟು ಹೆಚ್ಚಾಗುತ್ತದೆ ಎನ್ನುವುದು ಬಹಳ ಸ್ಪಷ್ಟ. ಈಗಿನ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಸಹಜವಾಗಿ ಹೆಚ್ಚೇ ಇದೆ. ಐತಿಹಾಸಿಕವಾಗಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರ ಅಲ್ಲಿನ ಜನಸಂಖ್ಯೆ ಹೆಚ್ಚಿದೆ. ಕ್ಷೇತ್ರಗಳೂ ಹೆಚ್ಚಿವೆ. ಅಂಬೇಡ್ಕರ್ ಅವರ ಒಬ್ಬರಿಗೆ ಒಂದು ಓಟು ಎನ್ನುವ ಕಾರಣಕ್ಕೆ ಅಲ್ಲಿ ಕ್ಷೇತ್ರಗಳು ಹೆಚ್ಚಿವೆ.

ಕಳೆದ ಬಾರಿ 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆದಾಗ ಯುಪಿಎ ಸರ್ಕಾರವೇ ಇತ್ತು. ಯುಪಿಎ ಸರ್ಕಾರ ಆಗ 543 ಸ್ಥಾನಗಳನ್ನು ಯಥಾಸ್ಥಿತಿಯಲ್ಲಿಟ್ಟು ಕ್ಷೇತ್ರ ಮರುವಿಂಗಡಣೆ ಮಾಡಿದರು. ಇದನ್ನು ಡಿಲಿಮಿಟೇಷನ್ ಸಮಿತಿಯಲ್ಲೇ ನಿರ್ಧರಿಸಲಾಗಿತ್ತೇ ಹೊರತು ವಿಧೇಯಕದಲ್ಲಿ ಅಲ್ಲ. ಆದರೆ ಪ್ರತಿಪಕ್ಷಗಳು ಅನಗತ್ಯವಾಗಿ ಸುಳ್ಳು ಹೇಳುವ ಮೂಲಕ ದಾರಿತಪ್ಪಿಸುವ ರಾಜಕಾರಣ ಮಾಡುತ್ತಿವೆ.

ಈ ಕಾರಣಕ್ಕೆ ದಕ್ಷಿಣ ರಾಜ್ಯ ಮತ್ತು ಉತ್ತರ ರಾಜ್ಯಗಳ ವ್ಯತ್ಯಾಸ ಐತಿಹಾಸಿಕವಾಗಿ ಮುಂದುವರೆದಿದೆ. ಹಾಗಿದ್ದರೆ 2008ರಲ್ಲಿ ಯುಪಿಎ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಕಡಿಮೆ ಸೀಟು ಕೊಟ್ಟು ಅನ್ಯಾಯ ಮಾಡಿದೆ ಎನ್ನುವ ವಾದವನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರಾ? ಅವರು ಈಗ ಮಾಡುತ್ತಿರುವ ವಿತಂಡ ವಾದವನ್ನೇ ಮಂಡಿಸಿದರೆ ಯುಪಿಎ ಸರ್ಕಾರ ಕೂಡ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವನ್ನೇ ಮಾಡಿದೆ ಎಂದು ಒಪ್ಪಿಕೊಂಡಂತಾಗುತ್ತದೆ. ಇದು ಒಳಗಿನ ಸತ್ಯ.

ಈಗ ಪ್ರತಿಯೊಂದು ರಾಜ್ಯದ ಶೇ.50 ರಷ್ಟು ಸ್ಥಾನ ಹೆಚ್ಚಾದಾಗ ಅದೇ ಅನುಪಾತದಲ್ಲಿ ಅಂದರೆ ಕರ್ನಾಟಕದಲ್ಲಿ 28ಕ್ಕೆ 14 ಸೇರಿಸಿದರೆ 42 ಆಗುತ್ತದೆ. ಅದೇ ರೀತಿ ಬೇರೆ ರಾಜ್ಯಗಳದ್ದೂ ಹೆಚ್ಚಳವಾಗುತ್ತದೆ.‌ ಇದನ್ನು ಮಾಡುವಾಗ ಕೆಲ ರಾಜ್ಯಗಳಲ್ಲಿ ಒಂದೆರಡು ಸ್ಥಾನ ಹೆಚ್ಚು ಕಡಿಮೆಯಾಗಬಹುದು, ಅದನ್ನು ಬಿಟ್ಟರೆ ಅಮೂಲಾಗ್ರವಾಗಿ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ.

ಸಿದ್ದರಾಮಯ್ಯ ವಾದಕ್ಕೆ ಆಧಾರ ಇಲ್ಲ

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಉತ್ತರ-ದಕ್ಷಿಣವನ್ನು ವಿಭಜಿಸುವ ಮೂಲಕ ರಾಜಕೀಯ ಮಾಡುತ್ತಿವೆ‌. ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾದಕ್ಕೆ ಯಾವುದೇ ರೀತಿಯ ತತ್ವದ ಆಧಾರವಾಗಲಿ, ಕಾನೂನು ಆಧಾರವಾಗಲಿ ಇಲ್ಲ. ಅವರ ಮೊದಲನೆಯ ವಾದ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಸ್ಥಾನ ಹೆಚ್ಚಳವಾಗುತ್ತವೆ ಎನ್ನುವುದು. ಯಾವುದೇ ರಾಜ್ಯದಲ್ಲಿ ಯಾವುದೇ ಒಂದು ಪಕ್ಷ ನಿರಂತರ ಅಧಿಕಾರ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳಾದ ಸಮಾಜವಾದಿ, ಬಿಎಸ್‌ಪಿ ಪಕ್ಷ ಅಧಿಕಾರ ನಡೆಸುತ್ತಿದ್ದವು. ಈಗ ಬಿಜೆಪಿ ಬಂದಿದೆ. ಅದೇ ರೀತಿ ರಾಜಸ್ಥಾನದಲ್ಲಿ ಮೊದಲು ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹೀಗೆ ನಿರಂತರವಾಗಿ ಅಧಿಕಾರ ಬದಲಾವಣೆ ಆಗುತ್ತದೆ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಅನುಕೂಲ ಆಗುತ್ತದೆ ಎನ್ನುವ ಸಿದ್ದರಾಮಯ್ಯ ಅವರ ವಾದವನ್ನು ನೋಡಿದರೆ ಅಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಅಧಿಕಾರಕ್ಕೆ ಬರುವುದೇ ಇಲ್ಲ ಎಂದು ಅವರೇ ಒಪ್ಪಿಕೊಂಡಂತಾಗುತ್ತದೆಯಲ್ಲವೇ?

ಎರಡನೆಯದಾಗಿ ಅವರ ಮತ್ತೊಂದು ವಾದದ ಪ್ರಕಾರ ಒಂದು ವ್ಯಕ್ತಿಗೆ ಒಂದು ಓಟು ಜೊತೆಗೆ ಇತರ ಮಾನದಂಡವೂ ಇರಬೇಕು ಎನ್ನುವುದು. ಹಾಗಿದ್ದರೆ ಯಾವ ಮಾನದಂಡ ಇಡಬೇಕು? ಯಾವ ಮಾನದಂಡ ಶಾಶ್ವತ? ಎನ್ನುವ ಪ್ರಶ್ನೆಯೂ ಬರುತ್ತದೆ. ಹಾಗೆ ನೋಡಿದರೆ ಕೆಲ ರಾಜ್ಯಗಳ ಮಾನದಂಡ ಬದಲಾಗುತ್ತವೆ. ಮಾನವ ಅಭಿವೃದ್ಧಿ ಮಾನದಂಡ, ಆರ್ಥಿಕ ಮಾನದಂಡವೂ ಬದಲಾಗುತ್ತವೆ‌. ಕೇರಳ ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯವಾಗಿತ್ತು. ಈಗ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿ ಬೇರೆ ಬೇರೆ ಮಾನದಂಡ ಇಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡೇ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಗೆ ಒಂದೇ ಓಟು ಎಂದು ತೀರ್ಮಾನ ಮಾಡಿದ್ದಾರೆ.

ಇಂದು ಎಲ್ಲಾ ವಿಚಾರ ಮಾಡಿರುವ ಅಂಬೇಡ್ಕರ್ ವಿಚಾರವನ್ನೇ ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅಂಬೇಡ್ಕರ್ ವಿರುದ್ಧ ನಿಲುವು ತೆಗೆದುಕೊಂಡು ತಮ್ಮ ರಾಜಕೀಯ ವಿಚಾರ ಪ್ರತಿಪಾದಿಸುತ್ತಿದ್ದಾರೆ.

ವಿರೋಧಿಸುವುದಷ್ಟೇ ಅವರ ಗುರಿ:

ಕರ್ನಾಟಕದ ಕಾಂಗ್ರೆಸ್ ಆಗಲಿ, ತಮಿಳುನಾಡಿನ ಡಿಎಂಕೆ ಆಗಲಿ ಬಹಳ ಸ್ಪಷ್ಟವಾದ ನೀತಿ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಒಳ್ಳೆಯ ಕೆಲಸ ಮಾಡಲಿ, ಯಾವುದೇ ಕಾನೂನು ತರಲಿ, ಯಾವುದೇ ನೀತಿ ರೂಪಿಸಲಿ. ಅದನ್ನು ವಿರೋಧಿಸುವುದೇ ಅವರ ಏಕೈಕ ಕೆಲಸ. ಮಹಿಳಾ ಮಿಸಲಾತಿ ಬಗ್ಗೆ ಸಾಕಷ್ಟು ಮಾತನಾಡುವ ಕಾಂಗ್ರೆಸ್ ಈ ಕಾನೂನು ವಿರೋಧಿಸುವ ಮೂಲಕ ಮಹಿಳಾ ಮೀಸಲಾತಿ ವಿರೋಧಿ ಎನ್ನುವುದನ್ನು ಬಹಳ ಸ್ಪಷ್ಟವಾಗಿ ಒಪ್ಪಿಕೊಂಡಂತಾಗಿದೆ. ಮಹಿಳೆಯರಿಗೆ ಅಧಿಕಾರ ಕೊಡಬಾರದು ಎನ್ನುವ ಪುರುಷ ಪ್ರಧಾನ ಸಮಾಜದ ಹಿಂದಿನ ಮನಸ್ಥಿತಿಗೆ ಬೆಂಬಲ ಕೊಡುವ ರೀತಿ ಅವರು ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದು ರೆಟ್ರೊಗ್ರೆಟ್ ಸ್ಟೆಪ್. ಅಭಿವೃದ್ಧಿ ಮತ್ತು ಸುಧಾರಣೆ ಎಂದೂ ಭಾರತದಲ್ಲಿ ಆಗಬಾರದು ಎನ್ನುವ ನಿಲುವಾಗಿದೆ.

ಬಡವರು ಬಡವರಾಗಿಯೇ ಉಳಿಯಬೇಕು, ಆಳುವವರು ಆಳುವವರಾಗಿಯೇ ಇರಬೇಕು. ಮಹಿಳೆಯರು ತಮ್ಮ ಹಕ್ಕು ವಿಧಾನಸಭೆ, ಸಂಸತ್ತಿನಲ್ಲಿ ಪ್ರತಿಪಾದಿಸಬಾರದು, ದೀನ ದಲಿತರ ಧ್ವನಿ ಕ್ಷೀಣವಾಗಿರಬೇಕು ಎಂಬ ಕಾರಣಕ್ಕೆ ಯಥಾಸ್ಥಿತಿಯ ಮನಸ್ಥಿತಿ ಈ ಎಲ್ಲಾ ಪಕ್ಷಗಳಿಗಿದೆ. ಈ ರೀತಿಯ ಮನಸ್ಥಿತಿ ದೇಶಕ್ಕೇ ಮಾರಕ. ನಾವು 21ನೇ ಶತಮಾನದಲ್ಲಿದ್ದೇವೆ. ಎಲ್ಲ ದೇಶ, ರಾಜ್ಯಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಮಾಡುವಾಗ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸಿದ್ದರು. ಅದೇ ತತ್ವ ಮಹಿಳಾ ಮೀಸಲಾತಿಯಲ್ಲಿದೆ. ಅದೇ ಅಂಬೇಡ್ಕರ್‌ ತತ್ವವನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಕಾರಗೊಳಿಸುತ್ತಿದ್ದಾರೆ. ಇದಕ್ಕೆ ಬೆಂಬಲ ಕೊಡುವುದು ಪ್ರತಿಯೊಬ್ಬ ನಾಗರಿಕರು, ರಾಜಕಾರಣಿಗಳ ಕರ್ತವ್ಯ. ಇದನ್ನು ಮಾಡದೇ ಹೋದರೆ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರ ವಿರೋಧಿ, ಅಭಿವೃದ್ಧಿ ವಿರೋಧಿ, ಬದಲಾವಣೆಯ ವಿರೋಧಿ ಇರುವ ಕೇವಲ ರಾಜಕೀಯ ಮತ ಬ್ಯಾಂಕ್‌ಗಾಗಿ ರಾಜಕಾರಣ ಮಾಡುತ್ತಿರುವ ಪಕ್ಷ ಎನ್ನುವ ಶಾಶ್ವತ ಆರೋಪಕ್ಕೆ ಅವರು ಗುರಿಯಾಗುತ್ತದೆ.

ಆದ್ದರಿಂದ ವಿತಂಡವಾದ ಬಿಟ್ಟು ವಾಸ್ತವಾಂಶ ಮತ್ತು ಸತ್ಯದ ಮೇಲೆ ಈ ವಿಧೇಯಕಗಳ ಮೇಲೆ ಪುನರ್ ಚರ್ಚೆ ಮಾಡಿ ಅವರು ತೀರ್ಮಾನ ಮಾಡಬೇಕು. ಹಿಂದೆ ಡಿಲಿಮಿಟೇಷನ್ ಮಾಡಿದಾಗ ಯಾವುದೇ ರಾಜ್ಯಗಳ ಜೊತೆ ಚರ್ಚೆ ಮಾಡಿರಲಿಲ್ಲ. ಅದು ಸಂಸತ್ತಿನಲ್ಲಿ ಚರ್ಚೆ ಮಾಡಿ ಡಿಲಿಮಿಟೇಷನ್ ಕಮಿಷನ್‌ಗೆ ಬೇಕಾದ ಷರತ್ತುಗಳನ್ನು ಹಾಕಿ ಡಿಲಿಮಿಟೇಷನ್ ಕಮಿಷನ್ ರಚನೆಯಾಗುತ್ತದೆ. ಅದು ಹಿಂದಿನಿಂದ ಬಂದಿರುವ ಪರಂಪರೆ. ಹೀಗಾಗಿ ಸಿದ್ದರಾಮಯ್ಯ ಅವರು ಇದರ ಬಗ್ಗೆ ಸರಿಯಾದ ಮಾಹಿತಿ ಪಡೆಯಬೇಕು ಮತ್ತು ಮುಖ್ಯಮಂತ್ರಿಯಾಗಿ ಸಾರ್ವಜನಿಕವಾಗಿ ಮಾತನಾಡುವಾಗ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಪ್ರಧಾನಿ ಮೋದಿಯವರು ಈ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗುವುದಿಲ್ಲ, ಸೀಟುಗಳು ಹೆಚ್ಚಾಗುತ್ತವೆ ಎಂದು ಹೇಳಿರುವುದು ಸತ್ಯ. ಅದಕ್ಕೆ ಬೆಂಬಲ ಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ದಕ್ಷಿಣ ರಾಜ್ಯ ಮತ್ತು ಉತ್ತರ ರಾಜ್ಯಗಳ ವ್ಯತ್ಯಾಸ ಐತಿಹಾಸಿಕವಾಗಿ ಮುಂದುವರೆದಿದೆ. ಹಾಗಿದ್ದರೆ 2008ರಲ್ಲಿ ಯುಪಿಎ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಕಡಿಮೆ ಸೀಟು ಕೊಟ್ಟು ಅನ್ಯಾಯ ಮಾಡಿದೆ ಎನ್ನುವ ವಾದವನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರಾ? ಅವರು ಈಗ ಮಾಡುತ್ತಿರುವ ವಿತಂಡ ವಾದವನ್ನೇ ಮಂಡಿಸಿದರೆ ಯುಪಿಎ ಸರ್ಕಾರ ಕೂಡ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವನ್ನೇ ಮಾಡಿದೆ ಎಂದು ಒಪ್ಪಿಕೊಂಡಂತಾಗುತ್ತದೆ.

ಅಂಬೇಡ್ಕರ್‌ ತತ್ವವನ್ನು ನಮ್ಮ ಪ್ರಧಾನಿ ಮೋದಿಯವರು ಸಾಕಾರಗೊಳಿಸುತ್ತಿದ್ದಾರೆ. ಇದಕ್ಕೆ ಬೆಂಬಲ ಕೊಡುವುದು ಪ್ರತಿಯೊಬ್ಬ ನಾಗರಿಕರು, ರಾಜಕಾರಣಿಗಳ ಕರ್ತವ್ಯ. ಇದನ್ನು ಮಾಡದೇ ಹೋದರೆ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರ ವಿರೋಧಿ, ಅಭಿವೃದ್ಧಿ ವಿರೋಧಿ, ಬದಲಾವಣೆಯ ವಿರೋಧಿ ಇರುವ ಕೇವಲ ರಾಜಕೀಯ ಮತ ಬ್ಯಾಂಕ್‌ಗಾಗಿ ರಾಜಕಾರಣ ಮಾಡುತ್ತಿರುವ ಪಕ್ಷ ಎನ್ನುವ ಶಾಶ್ವತ ಆರೋಪಕ್ಕೆ ಅವರು ಗುರಿಯಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Davanagere By-Election 2026: ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!
ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತಗಳ ಮರು ಎಣಿಕೆ: 'ಸತ್ಯಕ್ಕೆ ಜಯ ಸಿಗಲಿದೆ' ಎಂದ ಶಾಸಕ ಟಿ.ಡಿ. ರಾಜೇಗೌಡ!