ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತಗಳ ಮರು ಎಣಿಕೆ: 'ಸತ್ಯಕ್ಕೆ ಜಯ ಸಿಗಲಿದೆ' ಎಂದ ಶಾಸಕ ಟಿ.ಡಿ. ರಾಜೇಗೌಡ!

Published : Apr 18, 2026, 08:56 AM IST
Sringeri MAL TD Rajegowda

ಸಾರಾಂಶ

2023ರ ಶೃಂಗೇರಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಹೈಕೋರ್ಟ್ ಆದೇಶದಿಂದ ಹೊಸ ತಿರುವು ಪಡೆದಿದೆ. ಅಂಚೆ ಮತಗಳ ಎಣಿಕೆಯಲ್ಲಿನ ಅವ್ಯವಹಾರದ ಆರೋಪದ ಮೇಲೆ, ತಿರಸ್ಕೃತ 279 ಮತಗಳ ಮರು ಪರಿಶೀಲನೆಗೆ ನ್ಯಾಯಾಲಯ ಸೂಚಿಸಿದ್ದು, ಇದು ಕ್ಷೇತ್ರದ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ಅತೀವ ಕುತೂಹಲ ಮೂಡಿಸಿದ್ದ 2023ರ ವಿಧಾನಸಭಾ ಚುನಾವಣೆಯ ಶೃಂಗೇರಿ ಕ್ಷೇತ್ರದ ಫಲಿತಾಂಶ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಅಂಚೆ ಮತಗಳ ಎಣಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ವಿವಾದಿತ ಅಂಚೆ ಮತಗಳ ಮರು ಪರಿಶೀಲನೆಗೆ ಸೂಚನೆ ನೀಡಿದೆ. ಈ ಬೆಳವಣಿಗೆಯ ಬಳಿಕ ಕ್ಷೇತ್ರದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲರ ಚಿತ್ತ ನ್ಯಾಯಾಲಯದ ಆದೇಶ ಮತ್ತು ಮುಂದಿನ ಬೆಳವಣಿಗೆಯತ್ತ ನೆಟ್ಟಿದೆ.

ಹಿನ್ನೆಲೆ ಏನು?

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ.ಡಿ. ರಾಜೇಗೌಡರು, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರ ವಿರುದ್ಧ ಕೇವಲ 201 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದರು. ಆದರೆ ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣಾ ಸಂದರ್ಭದಲ್ಲಿ ನಡೆದ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ದೂರು ನೀಡಿದ್ದರು. ಒಟ್ಟು 2811 ಅಂಚೆ ಮತಗಳಲ್ಲಿ ಸುಮಾರು 279 ಅಂಚೆ ಮತಗಳನ್ನು ತಿರಸ್ಕರಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಹೈಕೋರ್ಟ್ ಈ 279 ಅಂಚೆ ಮತಗಳ ಮರು ಪರಿಶೀಲನೆಗೆ ಆದೇಶಿಸಿದ್ದು, ಒಂದು ವೇಳೆ ಇದರಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ ಸಂಪೂರ್ಣ ಅಂಚೆ ಮತಗಳ ಮರು ಎಣಿಕೆ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಆಡಳಿತದ ಸಿದ್ಧತೆ:

ಹೈಕೋರ್ಟ್ ಆದೇಶದಂತೆ ಮುಂದಿನ ಎರಡು ವಾರಗಳ ಒಳಗಾಗಿ ಮರು ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಸ್ಟೇ ಕೋರಿ ಅರ್ಜಿ ಸಲ್ಲಿಸಲು ಏಪ್ರಿಲ್ 20 ರವರೆಗೆ ಗಡುವು ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ರಿಟರ್ನಿಂಗ್ ಅಧಿಕಾರಿ (RO) ನೇಮಕ ಮಾಡುವಂತೆ ಕೋರಿಕೊಂಡಿದೆ. ಮುಂದಿನ 4 ದಿನಗಳ ಒಳಗಾಗಿ ಚುನಾವಣಾಧಿಕಾರಿ ನೇಮಕವಾಗುವ ಸಾಧ್ಯತೆಯಿದ್ದು, ಬಳಿಕ ಮರು ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಶಾಸಕ ಟಿ.ಡಿ. ರಾಜೇಗೌಡರ ಪ್ರತಿಕ್ರಿಯೆ:

ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಟಿ.ಡಿ. ರಾಜೇಗೌಡರು, "ಸತ್ಯಕ್ಕೆ ಯಾವಾಗಲೂ ಜಯ ಸಿಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಲಭ್ಯವಾಗಿದ್ದರೂ, ಆದೇಶದ ಪೂರ್ಣ ಪ್ರತಿಯನ್ನು ತಮ್ಮ ವಕೀಲರೊಂದಿಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಮುಂದಿನ ಕಾನೂನಾತ್ಮಕ ಹೆಜ್ಜೆ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಎಲ್ಲಾ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಅತ್ಯಂತ ಪಾರದರ್ಶಕವಾಗಿ ಮತ ಎಣಿಕೆ ನಡೆದಿದೆ ಎಂಬುದನ್ನು ಈ ವೇಳೆ ನೆನಪಿಸಿಕೊಂಡಿರುವ ಅವರು, ಅರ್ಜಿದಾರರು ಕೇವಲ ಮತ ಎಣಿಕೆಯ ಬಗ್ಗೆ ಮಾತ್ರ ನ್ಯಾಯಾಲಯದ ಮೊರೆ ಹೋಗಿದ್ದರೆ ಅಂದೇ ಸಹಕಾರ ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ. ತಮ್ಮ ಮೇಲೆ ಹೊರಿಸಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲೇ ಉತ್ತರ ಸಿಗಲಿದೆ ಎಂದಿರುವ ರಾಜೇಗೌಡರು, ಹಿಂದೆಯೂ ತಾವು ಸೋತಾಗ ಜನರ ಅಭಿವೃದ್ಧಿಗೆ ಅಡ್ಡಿಪಡಿಸದೆ ಕೆಲಸ ಮಾಡಿದ್ದೇವೆ, ಹೀಗಾಗಿ ನ್ಯಾಯಾಲಯದ ಯಾವುದೇ ತೀರ್ಪನ್ನು ಗೌರವಿಸಿ ಸ್ವೀಕರಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಶೃಂಗೇರಿ ಕ್ಷೇತ್ರದ ಈ ಅಂಚೆ ಮತಗಳ ಮರು ಪರಿಶೀಲನೆ ಮುಂಬರುವ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

women reservation bill defeat: ಕಾಂಗ್ರೆಸ್ಸಿಂದ ಇಡೀ ವಿಶ್ವದ ಮಹಿಳಾ ಕುಲಕ್ಕೆ ಅಪಮಾನ -ವಿಜಯೇಂದ್ರ
Women Reservation Bill: ಸ್ವಾರ್ಥ, ಅಪಸ್ವರವಿಲ್ಲದೆ ಮಹಿಳಾ ಮೀಸಲಾತಿ ಜಾರಿಯಾಗಲಿ