* ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ದೇವೇಗೌಡ
* ಆರ್.ಎಸ್.ಎಸ್. ಅನ್ನು ದೇವೇಗೌಡ ಹೊಗಳಿದ್ದರು ಎಂದಿದ್ದ ಬಿಜೆಪಿ ನಾಯಕರು
* ನಾನು RSS ಹೊಗಳಿಲ್ಲ ಎಂದು ಸ್ಪಷ್ಟನೆ ಕೊಟ್ಟ ದೇವೇಗೌಡ
ಬೆಂಗಳೂರು, ( ಅ.08): ಆರ್‌ಎಸ್‌ಎಸ್ (RSS) ಹೊಗಳಿದ್ದರು ಎನ್ನುವ ಮಾತುಗಳು ಹಾಗೂ ನಾಯಕರ ಪೋಸ್ಟ್‌ಗೆ ಸ್ವತಃ ಮಾಜಿ ಪ್ರಧಾನಿ ದೇವೇಗೌಡ (HD Devegowda) ಅವರು ಟಾಂಗ್ ಕೊಟ್ಟಿದ್ದಾರೆ.
ಆರ್.ಎಸ್.ಎಸ್. ಅನ್ನು ಸ್ವತಃ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೇ ಹೊಗಳಿದ್ದರು. ಆರ್.ಎಸ್.ಎಸ್. ಬಗ್ಗೆ ಆರೋಪ ಮಾಡುವ ಮೊದಲು ಕುಮಾರಸ್ವಾಮಿಯವರು ದೇವೇಗೌಡರನ್ನು ಕೇಳಿ ತಿಳಿದುಕೊಳ್ಳಬಹುದಿತ್ತು ಎಂದು ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಹೇಳಿದ್ದರು.
ಸೇವೆ, ಸಂಸ್ಕಾರ RSS ಗುತ್ತಿಗೆಯಲ್ಲ... ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು?
ಇನ್ನು ಈ ಬಗ್ಗೆ ಇಂದು (ಅ.08) ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ನಾನು ಆರ್.ಎಸ್.ಎಸ್. ನ ಯಾವುದೇ ಬೈಟಕ್ ಕೂತಿಲ್ಲ, ಸಂಘ ಪರಿವಾರವನ್ನು ಹೊಗಳಿಯೂ ಇಲ್ಲ. ಯಾರ್ಯಾರು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ನನಗೂ ಆರ್.ಎಸ್.ಎಸ್. ಗೂ ಏನು ಸಂಬಂಧ? ಆರ್.ಎಸ್.ಎಸ್. ಬಗ್ಗೆ ಗಂಧ ಗಾಳಿ ಗೊತ್ತಿಲ್ಲ. ನಾನು ಆರ್.ಎಸ್.ಎಸ್. ಹೊಗಳಿದ್ದೇನೆ ಎಂಬುದು ಶುದ್ಧ ಸುಳ್ಳು. ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ ಬಂದಾಗ ಕೆಲ ಸಮಯ ಮಾತುಕತೆ ನಡೆಸಿದ್ದೆವು, ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಚರ್ಚಿಸಿದ್ದೆವು. ನಾನು ಯಾವ ಸಂಘ ಪರಿವಾರವನ್ನೂ ಹೊಗಳಿಲ್ಲ ಎಂದು ಸ್ಪಷ್ಟಪಡಿಸಿದರು.