
ನವದೆಹಲಿ : ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಚುನಾವಣೆಗೆ ಮುಹೂರ್ತ ಕೂಡಿಬಂದಿದ್ದು ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನಬೀನ್, ಜ.20ರಂದು ಅಧ್ಯಕ್ಷರಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ,.
5 ಬಾರಿ ಶಾಸಕರಾಗಿದ್ದ ಬಿಹಾರದ ನಾಯಕ ನಿತಿನ್ ಜ.19ಕ್ಕೆ ಈ ಹುದ್ದೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಒಂದು ವೇಳೆ ಇತರರು ಸ್ಪರ್ಧಿಸದಿದ್ದರೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಜ.20ರಂದು ಅವರ ಆಯ್ಕೆ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಮೂಲಗಳ ಪ್ರಕಾರ ಬಿಜೆಪಿಯಿಂದ ಬೇರೆ ನಾಯಕರು ಸ್ಪರ್ಧಿಸುವ ಸಾಧ್ಯತೆ ಕಡಿಮೆ.
2019ರಲ್ಲಿ ಜೆ.ಪಿ.ನಡ್ಡಾ ಅವರ ವಿಚಾರದಲ್ಲಿಯೂ ಇದೇ ರೀತಿಯಾಗಿತ್ತು. ಮೊದಲು ನಡ್ಡಾ ಬಿಜೆಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಆ ಬಳಿಕ 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅದೇ ರೀತಿ ಕಳೆದ ಡಿ.14ರಂದು ನಬೀನ್ ಬಿಜೆಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕಾರವಧಿ ಕಳೆದ ವರ್ಷವೇ ಕೊನೆಯಾಗಿತ್ತು, ನಾನಾ ಕಾರಣಗಳಿಂದ ಹೊಸಬರ ನೇಮಕ ಮುಂದೂಡಿಕೆಯಾಗುತ್ತಲೇ ಬಂದಿತ್ತು.
ಬಿಜೆಪಿ ಕಚೇರಿಗೆ ಚೀನಾ ನಿಯೋಗ ಭೇಟಿ!
ನವದೆಹಲಿ: ಗಲ್ವಾನ್ ಗಡಿ ಸಂಘರ್ಷ ಬಳಿಕ ಹಳಸಿದ್ದ ಭಾರತ-ಚೀನಾ ಸಂಬಂಧ ಇತ್ತೀಚೆಗೆ ಕೊಂಚ ಸುಧಾರಿಸಿದ ಬೆನ್ನಲ್ಲೇ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವೊಂದು ದಿಲ್ಲಿಯಲ್ಲಿನ ಬಿಜೆಪಿ ರಾಷ್ಟ್ರೀಯ ಕಚೇರಿಗೆ ಭೇಟಿ ನೀಡಿದೆ. ಅಲ್ಲದೆ. ಆರ್‌ಎಸ್ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಭೇಟಿಯಾಗಿದೆ. ಇದಕ್ಕೆ ಕಾಂಗ್ರೆಸ್‌ನಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಚೀನಾದ ಅಂತಾರಾಷ್ಟ್ರೀಯ ಇಲಾಖೆಯ ಉಪಸಚಿವ ಸನ್ ಹೈಯಾನ್ ಅವರ ನೇತೃತ್ವದಲ್ಲಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ(ಸಿಪಿಸಿ) ನಿಯೋಗವು ದೆಹಲಿಗೆ ಆಗಮಿಸಿದೆ. ಸೋಮವಾರ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಈ ನಿಯೋಗವು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ನೇತೃತ್ವದ ನಿಯೋಗವನ್ನು ಭೇಟಿ ಮಾಡಿತು.
ಈ ವೇಳೆ, ಸಿಪಿಸಿ ಮತ್ತು ಬಿಜೆಪಿ ನಡುವೆ ಅಂತರ್ ಪಕ್ಷ ಸಂವಹನಗಳನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾಗಿ ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಇಲಾಖೆಯ ಉಸ್ತುವಾರಿ ವಿಜಯ್ ಚೌಥಾಯಿವಾಲಾ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ಭಾರತಕ್ಕೆ ಚೀನಾದ ರಾಯಭಾರಿಯಾಗಿರುವ ಕ್ಸು ಫೀಹಾಂಗ್ ಕೂಡ ಮಾತುಕತೆ ವೇಳೆ ಉಪಸ್ಥಿತರಿದ್ದರು.ಹೊಸಬಾಳೆ ಭೇಟಿ:
ಈ ನಿಯೋಗ ಮಂಗಳವಾರ ಹೊಸಬಾಳೆಯವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದು, ಸುಮಾರು 1 ಗಂಟೆ ಸಂವಾದ ನಡೆಸಿತು. ಈ ಭೇಟಿಗಾಗಿ ಚೀನಾದ ಕಡೆಯಿಂದಲೇ ಮನವಿ ಬಂದಿತ್ತು ಎಂದು ಮೂಲಗಳು ತಿಳಿಸಿವೆ.ಕಾಂಗ್ರೆಸ್ ಕಿಡಿ:ಚೀನಾ ನಿಯೋಗದೊಂದಿಗಿನ ಬಿಜೆಪಿ ಮತ್ತು ಆರ್‌ಎಸ್‌ಎಸ್ ಭೇಟಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ. ‘ಚೀನಾ ಜತೆ ಬಿಜೆಪಿ ಯಾವ ಗೌಪ್ಯ ಒಪ್ಪಂದ ಮಾಡಿಕೊಂಡಿದೆ? ಈ ಸಂಬಂಧಕ್ಕೇನೆನ್ನುತ್ತಾರೆ? ಬಿಜೆಪಿ ಏಕೆ ದೇಶದ್ರೋಹ ಮಾಡಿದೆ?’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರ ಜತೆಗೆ, ಜಮ್ಮು ಕಾಶ್ಮೀರದ ಶಕ್ಸ್‌ಗಂ ಕಣಿವೆಯನ್ನು ಚೀನಾ ತನ್ನದೆಂದು ಹೇಳುತ್ತಿರುವ ಬಗ್ಗೆಯೂ ಪ್ರಶ್ನೆಯೆತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.