ಬರೀ ರಾಹುಲ್‌ ಗಾಂಧಿ ಟೀಶರ್ಟ್ ಯಾಕೆ? ಚಡ್ಡಿ, ಪ್ಯಾಂಟ್‌ ಬಗ್ಗೆಯೂ ಚರ್ಚಿಸಿ!

By Kannadaprabha NewsFirst Published Sep 11, 2022, 11:13 AM IST
Highlights

 ಬಿಜೆಪಿಯವರು ಅಭಿವೃದ್ಧಿ ಪರ ವಿಷಯಗಳ ಬದಲು ರಾಹುಲ್‌ ಗಾಂಧಿಯವರ ಟಿ-ಶರ್ಟ್ ಚರ್ಚೆ ಮಾಡುತ್ತಿದ್ದಾರೆ. ಟಿ-ಶರ್ಟ್ ಯಾಕೆ ಚಡ್ಡಿ, ಪ್ಯಾಂಟ್‌, ಮಲಗುವ ಕೋಣೆಯ ಬಗ್ಗೆಯೇ ಚರ್ಚೆ ಮಾಡಿಕೊಂಡಿರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಸೆ.11): ಬಿಜೆಪಿಯವರು ಅಭಿವೃದ್ಧಿ ಪರ ವಿಷಯಗಳ ಬದಲು ರಾಹುಲ್‌ ಗಾಂಧಿಯವರ ಟಿ-ಶರ್ಟ್ ಚರ್ಚೆ ಮಾಡುತ್ತಿದ್ದಾರೆ. ಟಿ-ಶರ್ಟ್ ಯಾಕೆ ಚಡ್ಡಿ, ಪ್ಯಾಂಟ್‌, ಮಲಗುವ ಕೋಣೆಯ ಬಗ್ಗೆಯೇ ಚರ್ಚೆ ಮಾಡಿಕೊಂಡಿರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ರಾಹುಲ್‌ಗಾಂಧಿ ಅವರೇನೂ 10 ಲಕ್ಷದ ಸೂಟ್‌ ಹಾಕಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಅವರು, ಸ್ವಂತ ಹಣದಲ್ಲಿ ಅವರು ಬಟ್ಟೆಹಾಕುವುದೂ ತಪ್ಪೇ? ನಾನು ರೋಲೆಕ್ಸ್‌ ವಾಚ್‌ ಹಾಕಿದ್ದೇನೆ. ನನ್ನ ಹಣದಲ್ಲಿ ನಾನು ಖರೀದಿ ಮಾಡಿದ್ದೇನೆ. ಹಣ್ಣು ಕೆಂಪು ಇದ್ದಾಗ ಮಾತ್ರ ಕಲ್ಲು ಹೊಡೆಯುತ್ತಾರೆ. ರಾಹುಲ್‌ ಗಾಂಧಿ ಪಾದಯಾತ್ರೆ ಸಹಿಸದೆ ಕುತಂತ್ರ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಜನರೇ ಉತ್ತರ ನೀಡುತ್ತಾರೆ ಎಂದು ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ರಾಹುಲ್‌ ಗಾಂಧಿ ಅವರನ್ನು ಐರಲ್‌ ಲೆಗ್‌ ಎಂದು ಕರೆಯುತ್ತಾರೆ. ಕಬ್ಬಿಣ ಎರಡು ರೀತಿ ಉಪಯೋಗಕ್ಕೆ ಬರುತ್ತದೆ. ಕತ್ತರಿಯಾಗಿ ಕಟ್‌ ಮಾಡಲು ಉಪಯೋಗಕ್ಕೆ ಬಂದರೆ, ಸೂಜಿಯಾಗಿ ಹೊಲಿಯುವುದಕ್ಕೂ ಉಪಯೋಗಕ್ಕೆ ಬರುತ್ತದೆ. ಬಿಜೆಪಿಯವರು ದೇಶವನ್ನು ತುಂಡು ಮಾಡುತ್ತಿದ್ದರೆ, ರಾಹುಲ್‌ ಗಾಂಧಿ ಅವರು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ನಮಗೂ ಬಿಜೆಪಿಗೆ ಇರುವ ವ್ಯತ್ಯಾಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಜನಸ್ಪಂದನೆ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರ, ಮೂರು ವರ್ಷದ ಆಡಳಿತಾವಧಿಯಲ್ಲಿ ನಾವು ಎಂದೂ ಜನರ ಜೊತೆ ಸ್ಪಂದಿಸಿಲ್ಲ. ಈಗ ಸ್ಪಂದಿಸುತ್ತೇವೆ ಎಂದು ಸಮಾವೇಶ ಮಾಡುತ್ತಿದ್ದಾರೆ. 40 ಪರ್ಸೆಂಟ್‌ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಜನರು ಆಕ್ರೋಶಗೊಂಡಿದ್ದಾರೆ. ಸದ್ಯದಲ್ಲೇ ಬಿಜೆಪಿಗೆ ಜನ ಉತ್ತರ ನೀಡಲಿದ್ದಾರೆ ಎಂದು ಟಾಂಗ್‌ ನೀಡಿದರು.

ಹಗ್ಗ ಕೊಡಿಸುತ್ತೇನೆ ಗಲ್ಲಿಗೆ ಹಾಕಲಿ: ಡಿಕೆಶಿ
ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸರ್ಕಾರದ ಹಳೆ ಫೈಲ್‌ಗಳ ತನಿಖೆ ನಡೆಸುವುದಾಗಿ ಹೇಳಿರುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ಅವರು ತಡ ಮಾಡುತ್ತಿರುವುದೇಕೆ? ಸಿಐಡಿ ಅಲ್ಲ, ಸಿಬಿಐ ಹಾಗೂ ಇ.ಡಿ.ಗೆ ನೀಡಲಿ. ನಾನೇ ಅವರಿಗೆ ಹಗ್ಗ ಕೊಡಿಸುತ್ತೇನೆ. ನನ್ನನ್ನು ಗಲ್ಲಿಗೆ ಹಾಕಲಿ. ಅವರಿಗೆ ಶುಭವಾಗಲಿ’ ಎಂದರು.

ನಿನ್ನ ಭ್ರಷ್ಟಾಚಾರದಿಂದಲೇ ಬೆಂಗಳೂರಿಗೆ ಈ ಸ್ಥಿತಿ: ಸಿಎಂ ವಿರುದ್ಧ ಏಕವಚನದಲ್ಲಿ ಡಿಕೆಶಿ ವಾಗ್ದಾಳಿ

ಐಕ್ಯತಾ ಯಾತ್ರೆಗೆ ಆನ್‌ಲೈನ್‌ನಲ್ಲೇ ನೋಂದಣಿ
ಬೆಂಗಳೂರು:‘ಭಾರತ್‌ ಐಕ್ಯತಾ ಯಾತ್ರೆ’ ಯಶಸ್ವಿಗೊಳಿಸಲು ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಿದ್ದು, ಸ್ವಾತಂತ್ರ್ಯ ನಡಿಗೆ ಮಾದರಿಯಲ್ಲಿ ಹೆಚ್ಚು ಮಂದಿ ಯುವಕರನ್ನು ಯಾತ್ರೆಯಲ್ಲಿ ಭಾಗವಹಿಸುವಂತೆ ಮಾಡಲು ಸಂಕಲ್ಪ ಮಾಡಿದ್ದೇವೆ.  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕನ್ಯಾಕುಮಾರಿಯಿಂದ ಈಗಾಗಲೇ ರಾಹುಲ್‌ಗಾಂಧಿ ಅವರು ಚಾಲನೆ ನೀಡಿರುವ ಪಾದಯಾತ್ರೆ ಸೆ.30 ರಂದು ಕರ್ನಾಟಕ ಪ್ರವೇಶಿಸಲಿದೆ. ಕರ್ನಾಟಕದಲ್ಲಿ ಯಶಸ್ವಿಯಾಗಿ ಯಾತ್ರೆ ನಡೆಸಲು ಯುವಕರು ಕೈ ಜೋಡಿಸಬೇಕು. ಪಾದಯಾತ್ರೆಗೆ ಆಗಮಿಸಲು ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ವಸತಿ ಮತ್ತಿತರ ವ್ಯವಸ್ಥೆ ಕಲ್ಪಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಗೊಡ್ಡು ಬೆದರಿಕೆಗಳಿಗೆ ಹೆದರುವ ಮಗನಲ್ಲ: ಬಿಜೆಪಿ ತನಿಖಾಸ್ತ್ರಕ್ಕೆ ಡಿಕೆಶಿ ತಿರುಗೇಟು

2 ದಿನ ವಿಶ್ರಾಂತಿ: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಯಾತ್ರೆ ಸಂದರ್ಭದಲ್ಲಿ ದಸರಾ ವೇಳೆ 2 ದಿನ ವಿಶ್ರಾಂತಿ ನೀಡಲಾಗುವುದು. ಯಾತ್ರೆಯಲ್ಲಿ ಆಸಕ್ತಿ ಇರುವವರಿಗೆ ನಡೆಯಲು ಅವಕಾಶ ಕಲ್ಪಿಸಿಕೊಡಲಿದ್ದು, ಕೆಲವರು 1 ದಿನ ನಡೆದರೆ, ಮತ್ತೆ ಕೆಲವರು 21 ದಿನ ನಡೆಯಬಹುದು. ಹೀಗಾಗಿ ನಾವು ಪಕ್ಷಾತೀತವಾಗಿ ಎಲ್ಲರಿಗೂ ಮುಕ್ತ ಅವಕಾಶ ನೀಡಿದ್ದು, ಯಾತ್ರಿಗಳಿಗೆ ವಾಸ್ತವ್ಯ, ಆಹಾರ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಹೇಳಿದರು.

ಜನರ ಮಧ್ಯೆ ಸಾಮರಸ್ಯ ಕಲ್ಪಿಸಿ ಶಾಂತಿ ಕಾಪಾಡುವುದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರಿಗೆ ಉದ್ಯೋಗ ಕಲ್ಪಿಸುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆದಾಯ ಕುಸಿತದ ವಿರುದ್ಧ, ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಕುರಿತು ಚರ್ಚಿಸಲು ಯಾತ್ರೆ ಹಮ್ಮಿಕೊಳ್ಳುತ್ತಿದ್ದೇವೆ. ಮಧ್ಯಾಹ್ನದ ಬಿಡುವಿನ ವೇಳೆ ರಾಹುಲ್‌ಗಾಂಧಿ ಅವರು ವಿವಿಧ ವರ್ಗಗಳ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

ಸ್ವಾತಂತ್ರ್ಯ ನಡಿಗೆ ಸಮಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 76 ಸಾವಿರ ಮಂದಿ ಇದ್ದರು. ಹೀಗಾಗಿ ಯುವಕರಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲು ನೋಂದಣಿ ಆರಂಭಿಸಿದ್ದೇವೆ. ನೀವು ಕೂಡ ನೋಂದಣಿ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿ ಎಂದು ಯುವಕರಿಗೆ ಕರೆ ನೀಡಿದರು.

click me!