ಪ್ರತಿಪಕ್ಷ ನಾಯಕರಿಂದ ಚುನಾವಣಾ ರಾಜಕೀಯ: ವಿಜಯೇಂದ್ರ ಕಿಡಿ

By Govindaraj SFirst Published Sep 11, 2022, 10:59 AM IST
Highlights

ಅತಿವೃಷ್ಟಿ ಸಂಕಷ್ಟದಲ್ಲಿರುವ ಜನತೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳದ ವಿಪಕ್ಷ ನಾಯಕರು ಚುನಾವಣಾ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು. 

ಪಾಂಡವಪುರ (ಸೆ.11): ಅತಿವೃಷ್ಟಿ ಸಂಕಷ್ಟದಲ್ಲಿರುವ ಜನತೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳದ ವಿಪಕ್ಷ ನಾಯಕರು ಚುನಾವಣಾ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು. ತಾಲೂಕಿನ ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಅಧಿಕಾರದಲ್ಲಿದ್ದಾಗ ಏನೇನೂ ಮಾಡಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ದಾಖಲೆಗಳು ಇವೆ. ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.

ಕಳೆದ ನಾಲ್ಕು ದಶಕಗಳಿಂದ ರಾಜ್ಯದ ಜನ ರೀತಿಯಲ್ಲಿ ಮಳೆಯಾಗಿದೆ. ಮಳೆಯಿಂದ ಸೃಷ್ಟಿಯಾಗಿರುವ ಅವಾಂತರಗಳಿಗೆ ಕಾರಣೀಭೂತರು ಯಾರು ಎಂದು ವಿಪಕ್ಷ ನಾಯಕರು ಒಂದು ಕ್ಷಣ ಯೋಚಿಸಬೇಕು. ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳಿಗೆ ರಾಜ್ಯದ ಕಂಡರಿಯದ ಇತಿಹಾಸದಲ್ಲಿಯೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅತಿಹೆಚ್ಚು ಅನುದಾನ ನೀಡಿದ್ದಾರೆ ಎಂದು ಹೇಳಿದರು. ಚುನಾವಣೆಗೆ ಇನ್ನೂ ಏಳೆಂಟು ತಿಂಗಳುಗಳ ಕಾಲಾವಕಾಶ ಇದೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಆಡಳಿತ ಪಕ್ಷದ ಜತೆಗೆ ವಿರೋಧ ಪಕ್ಷಗಳು ಮಾಡಬೇಕಿದೆ. ಆದರೆ, ಎಲ್ಲವನ್ನು ಚುನಾವಣೆ ದೃಷ್ಟಿಯಿಂದಲೇ ನೋಡುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯ ಹನಿಟ್ರ್ಯಾಪ್: ಸಲ್ಮಾಭಾನು ಮಾಯಾಜಾಲಕ್ಕೆ ಸಿಲುಕಿದ ಜಗನ್ನಾಥ ಶೆಟ್ಟಿ

ಮಳೆ ಕಾರಣ ಪ್ರವಾಸ ಮುಂದೂಡಿಕೆ: ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಎರಡು ತಂಡ ರಚನೆಯಾಗಿದೆ. ಮಳೆ ಕಾರಣದಿಂದ ಪ್ರವಾಸ ಮುಂದೂಡಲ್ಪಟ್ಟಿದೆ. ಯಡಿಯೂರಪ್ಪ ಅವರ ಪ್ರವಾಸಕ್ಕೆ ಬ್ರೇಕ್‌ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ನಾನು ಯಾವುದೇ ಹುದ್ದೆ ಅಥವಾ ಸ್ಥಾನಮಾನಕ್ಕೆ ಆಸೆ ಪಟ್ಟವನಲ್ಲ. ನಮ್ಮ ಕಣ್ಣ ಮುಂದೆ ಇರುವ ಗುರಿ ಒಂದೇಯಾಗಿದೆ. 

ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂಬುದಾಗಿದೆ ಎಂದು ಹೇಳಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿರುವ ಡಾ.ಎನ್‌.ಎಸ್‌.ಇಂದ್ರೇಶ್‌ ಅವರಂತಯೇ ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಮುಖಂಡರು ಪಕ್ಷವನ್ನು ಬಲಯುತವಾಗಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೆ.ಆರ್‌ .ಪೇಟೆಗೆ ಮಾತ್ರ ನಮ್ಮ ಗೆಲುವು ಸೀಮಿತವಾಗಬಾರದು. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಶಕ್ತಿ ಹೊಂದಿದೆ ಎಂದರು.

ವಿಜಯೇಂದ್ರಗೆ ಸೇಬಿನ ಹಾರ: ಇದೇ ವೇಳೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ಮುಖಂಡ ಡಾ.ಎನ್‌.ಎಸ್‌.ಇಂದ್ರೇಶ್‌ ಅವರು ಬೃಹತ್‌ ಗಾತ್ರದ ಸೇಬಿನ ಹಾರ ಹಾಕಿ ಸನ್ಮಾನಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌, ಕಾರ್ಯದರ್ಶಿ ಕೆ.ಎಲ್‌.ಆನಂದ್, ಮುಖಂಡರಾದ ಡಾ.ಎನ್‌.ಎಸ್‌.ಇಂದ್ರೇಶ್‌, ಬಳಘಟ್ಟಅಶೋಕ್‌, ರಾಜೀವ್‌ ತಮ್ಮಣ್ಣ ಇತರರಿದ್ದರು.

ನನ್ನ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧರಿಸುತ್ತದೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಶಿಕಾರಿಪುರದಿಂದ ಸ್ಪರ್ಧಿಸಬೇಕೆನ್ನುವುದು ಅಲ್ಲಿನ ಕಾರ್ಯಕರ್ತರ ಅಭಿಪ್ರಾಯ. ಈ ಬಗ್ಗೆ ಕಾರ್ಯಕರ್ತರಿಂದ ಒತ್ತಡವಿದೆ. ಆದರೆ, ಶಿಕಾರಿಪುರದಿಂದ ಸ್ಪರ್ಧಿಸಬೇಕೋ ಅಥವಾ ಬೇಡವೋ ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಎಂದು ವಿಜಯೇಂದ್ರ ತಿಳಿಸಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್‌ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಮಂತ್ರಿಮಂಡಲದ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ತಂದೆ ಹುಟ್ಟೂರಿಗೆ ಬಂದಿದ್ದು ಬಹಳ ಸಂತೋಷ ಎಂದರು.

ಕೋಡಿ ಶ್ರೀ ಮತ್ತೊಂದು ಭಯಾನಕ ಭವಿಷ್ಯ: ಪ್ರಕೃತಿಯ ವಿಕೋಪದ ಬಗ್ಗೆ ಎಚ್ಚರಿಕೆ

ಬಿಎಸ್‌ವೈ ಹುಟ್ಟೂರಿಗೆ ವಿಜಯೇಂದ್ರ: ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಗ್ರಾಮದೇವತೆ ಗೋಗಾಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ, ಕೆ.ಆರ್‌.ಪೇಟೆಯ ಭೂ ವರಾಹನಾಥ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

click me!