2023ರಲ್ಲಿ ರೈತ ಪರವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ: ರಾಹುಲ್ ಗಾಂಧಿ
ಚಿತ್ರದುರ್ಗ(ಅ.12): ಬಿಜೆಪಿ ಶಾಸಕರೇ ಕರ್ನಾಟಕದ್ದು ಭ್ರಷ್ಟ ಸರ್ಕಾರವೆಂದು ಹೇಳುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ತಮ್ಮ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟರು? ಗುತ್ತಿಗೆದಾರ ಸಂತೋಷ್ ಪಾಟೀಲ್ ಏಕೆ ಆತ್ಮಹತ್ಯೆ ಮಾಡಿಕೊಂಡರು? ಕರ್ನಾಟಕದ ಗುತ್ತಿಗೆದಾರರು ಪ್ರಧಾನ ಮಂತ್ರಿಗೆ ಏಕೆ ಪತ್ರ ಬರೆದರು, ಪ್ರಧಾನಿಗಳೇಕೆ ಇದಕ್ಕೆ ಉತ್ತರಿಸಲಿಲ್ಲ?. ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಪರಿ ಇದು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಹರಿಹಾಯ್ದ ಅವರು, 2023ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿರಬೇಕು, ಬಡವರು ಮತ್ತು ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಜನರ ಜೇಬಿಂದ ಕದಿಯುತ್ತಿದ್ದಾರೆ:
ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಅರ್ಹತೆ ಬೇಕಿಲ್ಲ, .2500 ಕೋಟಿ ಇರಬೇಕೆಂದು ರಾಜ್ಯದ ಜನಪ್ರತಿನಿಧಿಯೊಬ್ಬರು ಹೇಳುತ್ತಾರೆ. ಇದೆಲ್ಲ ಏನನ್ನು ತೋರಿಸುತ್ತದೆ? ಕರ್ನಾಟಕ ಸರ್ಕಾರ ಜನರ ಜೇಬಿನಿಂದ ಹಣ ಕದಿಯುತ್ತಿದೆ. ಪಿಎಸ್‌ಐ ಉದ್ಯೋಗ ನೀಡಲು 80 ಲಕ್ಷ, ಎಂಜಿನಿಯರ್ ನೇಮಕಕ್ಕೂ ದುಡ್ಡು ಕೊಡಬೇಕು. ರಾಜ್ಯದಲ್ಲಿ ಎರಡೂವರೆ ಲಕ್ಷ ಉದ್ಯೋಗ ಖಾಲಿ ಇವೆ ಎಂದು ಕಿಡಿಕಾರಿದರು. ಜತೆಗೆ, ಇತಿಹಾಸದಲ್ಲಿ ಮೊದಲ ಬಾರಿಗೆ ಬಡವರು, ರೈತರು ಜಿಎಸ್‌ಟಿ ಕಟ್ಟುತ್ತಿದ್ದಾರೆ. ರಸಗೊಬ್ಬರ, ಕೃಷಿ ಪರಿಕರ ಖರೀದಿಸಿದರೆæ ಜಿಎಸ್‌ಟಿ ಕೊಡಬೇಕು ಎಂದು ಆಕ್ರೋಶ ಹೊರಹಾಕಿದರು.
ಭಾರತ್ ಜೋಡೋ ಯಾತ್ರೆ ಭವಿಷ್ಯದ ರಾಜಕಾರಣಕ್ಕೆ ದಿಕ್ಸೂಚಿ
1 ಗಂಟೆ ವಿಳಂಬವಾಗಿ ಆರಂಭ:
ರಾಜ್ಯದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ 10ನೇ ದಿನವಾದ ಮಂಗಳವಾರವೂ ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಿಗದಿತ ವೇಳೆಯಂತೆ 6.30ಕ್ಕೆ ಆರಂಭವಾಗಬೇಕಿದ್ದ ಪಾದಯಾತ್ರೆ ಮಳೆ ಕಾರಣದಿಂದ ಒಂದು ಗಂಟೆ ತಡವಾಗಿ ಆರಂಭವಾಯಿತು. ಸೋಮವಾರ ರಾತ್ರಿ ಹರ್ತಿಕೋಟೆಯಲ್ಲಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳು ಬೆಳಗ್ಗೆ 7-30ಕ್ಕೆ ಹೊಸ ಹುಮ್ಮಸ್ಸಿನೊಂದಿಗೆ ಹೆಜ್ಜೆ ಹಾಕಿದರು. ಶುಭ್ರವಾದ ಬಿಳಿ ಟಿ.ಶರ್ಚ್ ತೊಟ್ಟರಾಹುಲ್ ನೇರವಾಗಿ ಹೆದ್ದಾರಿಗಿಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ರಮಾನಾಥ ರೈ ಸಾಥ್ ನೀಡಿದರು. ಚಳ್ಳಕೆರೆಯ ಸಿದ್ದಾಪುರದಲ್ಲಿ 10ನೇ ದಿನದ ಯಾತ್ರೆ ಮುಕ್ತಾಯಗೊಂಡಿತು.
ಸಮಸ್ಯೆ ಆಲಿಕೆ:
ನರೇಗಾ ಕೂಲಿಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತರು, ಚಿಂದಿ ಹಾಯುವವರ ಸಮಸ್ಯೆಗಳನ್ನು ಪಾದಯಾತ್ರೆ ವೇಳೆ ರಾಹುಲ್ ಆಲಿಸಿದರು. ಸರ್ಕಾರದಿಂದ ಯಾವ ನೆರವು ಬೇಕೆಂದು ಮಾಹಿತಿ ಪಡೆದರು. ಕಾಲಲ್ಲಿ ಪರೀಕ್ಷೆ ಬರೆದು ಶಿಕ್ಷಕಿಯಾದ ಲಕ್ಷ್ಮೀದೇವಿ ಜತೆಯೂ ರಾಹುಲ್ ಚರ್ಚೆ ಮಾಡಿದರು. ಆಕೆ ಬರೆಯುವ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು. ಗೊಲ್ಲಹಳ್ಳಿ ಬಳಿ ರಸ್ತೆ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಜತೆ ಮಾತನಾಡಿದ ರಾಹುಲ್ ಎಲ್ಲಿಂದ ಬಂದ್ರಿ? ಎಷ್ಟುಕೂಲಿ ಸಿಗುತ್ತದೆ ಎಂಬೆಲ್ಲ ಮಾಹಿತಿ ಪಡೆದರು.
Bharat Jodo Yatra :ಸೂತ್ರ ಹರಿದ ಗಾಳಿಪಟದಂತೆ, ಒಂದು ವ್ಯರ್ಥ ಹಾರಾಟ - ಸುಧಾಕರ್
ರಸ್ತೆ ಮಧ್ಯೆ ಪುಶ್ ಅಫ್ಸ್: ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಧ್ಯೆ ಹುಡುಗನೊಬ್ಬನಿಂದ ಪ್ರೇರೇಪಿತರಾಗಿ ರಸ್ತೆಯಲ್ಲೇ ಪುಶ್ ಅಫ್ಸ್ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಅಧಿನಾಯಕನಿಗೆ ಪಕ್ಷದ ಮುಖಂಡರಾದ ವೇಣುಗೋಪಾಲ್, ಡಿ.ಕೆ.ಶಿವಕುಮಾರ್ ಮತ್ತಿತರರೂ ಸಾಥ್ ನೀಡಿದರು.
ಗಾಂಧಿ ವೇಷಧಾರಿ ಅಳಲು
ಗುಂಡ್ಲುಪೇಟೆಯಿಂದ ಪಾದಯಾತ್ರೆಯ ಸಂಗಡ ನಡೆದುಕೊಂಡು ಬರುತ್ತಿರುವ ಗಾಂಧಿ ವೇಷಧಾರಿ ಮುತ್ತುರಾಜ್ ಅವರು ರಾಹುಲ್ ಗಾಂಧಿ ಭೇಟಿ ಸಾಧ್ಯವಾಗದೆ ಬೇಸರ ತೋಡಿಕೊಂಡಿದ್ದಾರೆ. ಗಾಂಧೀಜಿಯಂತೆ ವೇಷಧರಿಸಿದ ಮುತ್ತೂರಾಜ್ ಕೂಡ 10 ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದರು. ಪಾವಗಡ ತಾಲೂಕಿನ ಬೂದಿ ಬೆಟ್ಟ ಗ್ರಾಪಂ ಮಾಜಿ ಅಧ್ಯಕ್ಷರಾಗಿರುವ ಮುತ್ತೂ ರಾಜ್‌ಗೆ ರಾಹುಲ್ ಮಾತನಾಡಿಸಬೇಕೆಂಬ ಆಸೆ. ಆದರೆ ಯಾರೂ ರಾಹುಲ್ ಹತ್ತಿರ ಹೋಗಲೂ ಬಿಡುತ್ತಿಲ್ಲ ಎಂಬುದು ಅವರಿಗಿರುವ ಬೇಸರ.
ಎಐಸಿಸಿ ಧುರೀಣರಾದ ಸುರ್ಜೇವಾಲ, ವೇಣುಗೋಪಾಲ್, ಶಾಸಕರಾದ ಟಿ.ರಘುಮೂರ್ತಿ, ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಸಚಿವರಾದ ಆಂಜನೇಯ, ಡಿ.ಸುಧಾಕರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಬಿ.ಕೆ.ಹರಿಪ್ರಸಾದ್, ಅರ್ಷದ್ ರಿಜ್ವಾನ್, ಚಿತ್ರನಟಿ ಭಾವನಾ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.