ಕಲ್ಯಾಣ ಕರ್ನಾಟಕಕ್ಕೆ ಬಜೆಟಲ್ಲಿ 5,000 ಕೋಟಿ: ಸಿಎಂ ಬೊಮ್ಮಾಯಿ

Published : Oct 12, 2022, 06:30 AM IST
ಕಲ್ಯಾಣ ಕರ್ನಾಟಕಕ್ಕೆ ಬಜೆಟಲ್ಲಿ 5,000 ಕೋಟಿ: ಸಿಎಂ ಬೊಮ್ಮಾಯಿ

ಸಾರಾಂಶ

ಮುಂದಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರು. ನೀಡುತ್ತೇನೆ ಎಂದು  ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಯಚೂರು(ಅ.12):  ರಾಜ್ಯದಲ್ಲಿ ಈ ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 1,500 ಕೋಟಿ ರು.ಗಳ ಅನುದಾನ ನೀಡಿದ್ದೇವೆ. ನಾನು ಮುಖ್ಯಮಂತ್ರಿಯಾದ ಮೇಲೆ 3 ಸಾವಿರ ಕೋಟಿ ರು.ಗಳ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಶುರು ಮಾಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರು. ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿರುವ ಬಿಜೆಪಿ, ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ರಾಯಚೂರು ತಾಲೂಕಿನ ಗಿಲ್ಲೇಸುಗೂರು ಗ್ರಾಮದಲ್ಲಿ ಮಂಗಳವಾರ ‘ಜನಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿತು. ಮೊರದಿಂದ ಭತ್ತವನ್ನು ಸುರಿಯುವುದರ ಮೂಲಕ ವಿನೂತನವಾಗಿ ಯಾತ್ರೆಗೆ ಚಾಲನೆ ನೀಡಿದ ಸಿಎಂ, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ‘ಇನ್ನೊಂದು ಸ್ಥಾನ ಗೆಲ್ಲುವ ಆಲೋಚನೆ ಬಿಡಿ, ಗೆದ್ದು ಬಂದ ಸ್ಥಾನವನ್ನು ಮೊದಲು ಉಳಿಸಿಕೊಳ್ಳಿ. ನಾವು ಬರುತ್ತಾ ಇದ್ದೇವೆ. ರಾಯಚೂರಿನಿಂದ ಜನಸಂಕಲ್ಪ ಯಾತ್ರೆ ಆರಂಭಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಧೂಳೀಪಟವಾಗಲಿದೆ. ಇದು ಕಾಂಗ್ರೆಸ್‌ಗೆ ನನ್ನ ನೇರ ಸವಾಲು’ ಎಂದು ಘೋಷಿಸಿದರು.

ಬಿಜೆಪಿ ಟಿಕೆಟ್‌ಗಾಗಿ ಲಾಬಿ ಬೇಡ: ಬಿ.ಎಲ್‌.ಸಂತೋಷ

ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ಗೆ ಹಿಂದುಳಿದ ವರ್ಗದವರು, ದೀನದಲಿತರು ನೆನಪಾಗಲಿಲ್ಲ. ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ಬಂದರೂ 5 ವರ್ಷ ಒಂದೇ ಒಂದು ನೇಮಕಾತಿ ಮಾಡಲಿಲ್ಲ. ಕಾಂಗ್ರೆಸ್‌ ಭ್ರಷ್ಟಾಚಾರದ ಪಕ್ಷದಾಗಿದ್ದು, ಸ್ವಲ್ಪ ದಿನಗಳಲ್ಲಿಯೇ ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತೇವೆ. ನಮ್ಮ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದದಿಂದ ರಾಜ್ಯದಲ್ಲಿ ಎಸ್ಸಿ/ಎಸ್ಟಿಯವರ ಮೀಸಲಾತಿ ಪ್ರಮಾಣ ಹೆಚ್ಚಿದೆ ಎಂದರು.
ಕಾಂಗ್ರೆಸ್‌ ಮುಳುಗುತ್ತಿರುವ ಹಡಗಾಗಿದೆ ಎಂದು ವ್ಯಂಗ್ಯವಾಡಿದ ಸಿಎಂ, ಸ್ವಲ್ಪ ದಿನಗಳಲ್ಲಿ ಅಲ್ಲಿರುವವರು ಈ ಕಡೆ ಬರುವವರಿದ್ದಾರೆ. ಅದರಲ್ಲಿಯೂ ರಾಯಚೂರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದರು.

ಅಹಿಂದ ನಾಯಕನ ಹಿಂದೆ ಯಾರೂ ಇಲ್ಲ:

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಸಿಎಂ, ಅಹಿಂದ ನಾಯಕ ಸಿದ್ದರಾಮಯ್ಯನವರ ಹಿಂದೆ ಹಿಂದುಳಿದವರೂ ಇಲ್ಲ. ದಲಿತರೂ ಇಲ್ಲ. ಈಗ ಅವರ ಹಿಂದೆ ಬರೀ ಅಲ್ಪಸಂಖ್ಯಾತರು ಮಾತ್ರ ಉಳಿದು ಬಿಟ್ಟಿದ್ದಾರೆ. ಮೂಲತಃ ಸಿದ್ದರಾಮಯ್ಯನವರು ಸಮಾಜವಾದದಿಂದ ಬಂದವರು. ಆದರೆ, ಯಾವಾಗ ಕಾಂಗ್ರೆಸ್‌ ಸೇರಿದರೋ, ಅಂದಿನಿಂದ ಸಮಾಜವಾದವನ್ನು ಮಡಚಿ ಮನೆಯಲ್ಲಿಟ್ಟು ಮರೆತು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಭಾರತ್ ಜೋಡೋ ಮಾಡ್ಕೊಂಡು ಒಂದೆರಡು ರಾಜ್ಯವಾದ್ರೂ ಉಳಿಸಿಕೊಳ್ಳಲಿ: ಸಚಿವ ಡಾ. ಸುಧಾಕರ್

‘ಆ ಸಣ್ಣ ಹುಡುಗನ ಕೈಕೆಳಗೆ ಸೇವೆ ಮಾಡುತ್ತೀರಲ್ಲ. ಅವರು ಓಡು ಎಂದರೆ ಓಡುತ್ತೀರಿ, ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತೀರಿ. ಇದು ಸ್ವಾಭಿಮಾನದ ಸಂಕೇತವಲ್ಲ. ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ದೀರಿ. ಭಾರತ್‌ ಜೋಡೋ ಪಾದಯಾತ್ರೆ ಈಗ ಅಪ್ರಸ್ತುತವಾಗಿರುವ ರಾಹುಲ್‌ ಗಾಂಧಿಯವರ ರೀ ಲಾಂಚಿಂಗ್‌ ಕಾರ್ಯಕ್ರಮವಾಗಿದೆಯೇ ಹೊರತು ದೇಶಕ್ಕಾಗಿ, ಜನರಿಗಾಗಿ, ದೀನದಲಿತರಿಗಾಗಿ ಅಲ್ಲ. ಅಂತಹ ಯಾತ್ರೆಗೆ ನೀವು ಸಾಥ್‌ ನೀಡುತ್ತಿದ್ದೀರಿ. ನಿಮ್ಮ ಸ್ಥಾನ ಎಲ್ಲಿತ್ತು, ಏನಾಗಿದೆ ಎಂಬುದನ್ನು ನೀವು ನೋಡಿಕೊಳ್ಳಿ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ’ ಎಂದು ಟೀಕಿಸಿದರು.

ನಾನು ಆರ್‌ಎಸ್‌ಎಸ್‌ನ ಕೈಗೊಂಬೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಆದರೆ, ಆರ್‌ಎಸ್‌ಎಸ್‌ ಒಂದು ದೇಶಭಕ್ತಿಯ ಸಂಸ್ಥೆ. ದೇಶವನ್ನು ಒಗ್ಗೂಡಿಸಿದ, ದೇಶವನ್ನು ಕಟ್ಟಲು ಶ್ರಮಿಸಿದ, ದೀನದಲಿತರ, ಅನಾಥರ ಸೇವೆ ಮಾಡಿದ, ತಳಸಮುದಾಯಕ್ಕೆ ಧ್ವನಿಕೊಟ್ಟು ಅವರನ್ನು ಮುಖ್ಯವಾಹಿನಿಗೆ ತಂದ ಶ್ರೇಷ್ಠ ಸಂಸ್ಥೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಸಿಗಿಲ್ಲ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?