ಹೊರಟ್ಟಿ ವಿರುದ್ಧ ಯಾರು ಬಿಜೆಪಿ ಅಭ್ಯರ್ಥಿ?

By Kannadaprabha News  |  First Published Oct 27, 2021, 12:08 PM IST

*  ಲಿಂಬಿಕಾಯಿ, ಬೂದಿಹಾಳ, ದೇಶಪಾಂಡೆ ಮಧ್ಯೆ ಪೈಪೋಟಿ
*  ಸತತ ಏಳು ಬಾರಿ ಆಯ್ಕೆಯಾಗಿ ದಾಖಲೆ ಬರೆದ ಬಸವರಾಜ ಹೊರಟ್ಟಿ 
*  ಟಿಕೆಟ್‌ಗಾಗಿ ಮೂವರ ಮಧ್ಯೆ ಪೈಪೋಟಿ
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.27):  ಅತ್ತ ಹಾನಗಲ್‌(Hanagal), ಸಿಂದಗಿ(Sindagi) ಉಪಚುನಾವಣೆ(Bylection) ರಂಗು ಜೋರಾಗಿರುವ ಮಧ್ಯದಲ್ಲೇ ಇತ್ತ ‘ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ’ದಿಂದ ವಿಧಾನಪರಿಷತ್ತಿಗೆ(Vidhanaparishat) ಆಯ್ಕೆಯಾಗುವ ಚುನಾವಣೆಗೂ ಪಕ್ಷಗಳು ಸಣ್ಣದಾಗಿ ತಯಾರಿ ಆರಂಭಿಸಿದ್ದು, ಈ ಕ್ಷೇತ್ರದಿಂದ ಸತತ ಏಳು ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಬಸವರಾಜ ಹೊರಟ್ಟಿ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಬಿಜೆಪಿಯಲ್ಲಿ ಕಾರ್ಯತಂತ್ರ ಶುರುವಾಗಿದೆ.

Latest Videos

ಬರೋಬ್ಬರಿ ನಾಲ್ಕು ದಶಕಗಳಿಂದ ಅಂದರೆ 1980ರಿಂದ ಈ ಕ್ಷೇತ್ರವನ್ನು ಬಸವರಾಜ ಹೊರಟ್ಟಿ(Basavaraj Bommai) ಅವರೇ ಪ್ರತಿನಿಧಿಸುತ್ತಿದ್ದಾರೆ. ತಾವು ಎದುರಿಸಿದ ಏಳೂ ಚುನಾವಣೆಗಳಲ್ಲಿ(Election) ಗೆದ್ದು ಬೀಗಿದ್ದಾರೆ ಹೊರಟ್ಟಿ. ಎಂತೆಂಥ ಘಟಾನುಘಟಿಗಳು ಎದುರಾಳಿಗಳಾದರೂ ಇವರನ್ನು ಮಾತ್ರ ಸೋಲಿಸಲು ಸಾಧ್ಯವಾಗಿಲ್ಲ. ಇವರ ಮತದಾರರು(Voters) ಕೂಡ ಉಳಿದ ಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷಗಳಿಗೆ ಮತ ಚಲಾಯಿಸಿದರೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಾತ್ರ ಹೊರಟ್ಟಿ ಅವರಿಗೆ ನಮ್ಮ ಮತ ಎಂದು ಬಹಿರಂಗವಾಗಿಯೇ ಹೇಳುವುದುಂಟು. ಹೀಗಾಗಿ ಬರೋಬ್ಬರಿ 41 ವರ್ಷದಿಂದ ಇವರೇ ಪ್ರತಿನಿಧಿಗಳಾಗಿದ್ದಾರೆ. ಸಚಿವರೂ ಆಗಿದ್ದಾರೆ. ಇದೀಗ ಸಭಾಪತಿ(Speaker).

ಚುನಾವಣೆಗೆ ಮತ್ತೆ ಸ್ಪರ್ಧಿಸಲು ವಿಪ ಸಭಾಪತಿ ಹೊರಟ್ಟಿ ನಿರ್ಧಾರ

ಈ ಸಲ ಹೇಗೋ?:

ಮುಂದಿನ ಜೂನ್‌ ಅಥವಾ ಜುಲೈನಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಹೊರಟ್ಟಿ ಅವರಿಗೆ ಸೋಲಿನ ರುಚಿ ತೋರಿಸಬೇಕು. ಈ ಕ್ಷೇತ್ರವನ್ನೂ ವಶಕ್ಕೆ ಪಡೆಯಬೇಕೆಂಬ ಹಂಬಲ ಬಿಜೆಪಿಯದ್ದು(BJP). ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿದೆ. ಎರಡ್ಮೂರು ಸುತ್ತಿನ ಸಭೆ ನಡೆಸಿರುವ ಬಿಜೆಪಿ ಯಾರನ್ನು ಕಣಕ್ಕಿಳಿಸಿದರೆ ಉತ್ತಮ ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಈ ಕ್ಷೇತ್ರವನ್ನು ವಶಕ್ಕೆ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ ಎಂಬ ಅರಿವು ಬಿಜೆಪಿಗೂ ಇದೆ. ಈ ಸಂಬಂಧ ಈಗಾಗಲೇ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌(Nalin Kumar Kateel) ಆಗಮಿಸಿ ಸಭೆ ನಡೆಸಿ ಎಲ್ಲರೂ ಒಗ್ಗಟ್ಟಾಗಿ ಹೊರಟ್ಟಿಅವರನ್ನು ಈ ಸಲ ಕೆಳಕ್ಕಿಳಿಸಬೇಕು ಎಂದು ತಿಳಿಸಿದ್ದುಂಟು. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಗ್ರೌಂಡ್‌ ವರ್ಕ್ ಮಾಡಿಕೊಂಡರೆ ಗೆಲ್ಲಬಹುದು ಎಂದು ಮತದಾರರ ನೋಂದಣಿಗೆ ಶುರು ಹಚ್ಚಿಕೊಂಡಿದೆ.

ಯಾರಾರ‍ಯರು ಪೈಪೋಟಿ?:

ಹೊರಟ್ಟಿ ಅವರ ವಿರುದ್ಧ ಕಣಕ್ಕಿಳಿಯಲು ಮುಖ್ಯಮಂತ್ರಿಗಳ(Chief Minister) ಕಾನೂನು ಸಲಹೆಗಾರ, ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸನ್ನದ್ದರಾಗಿದ್ದಾರೆ. ಹಿಂದೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಮಾಜಿ ಸಚಿವ ಎಚ್‌.ಕೆ. ಪಾಟೀಲ್‌(HK Patil) ಅವರನ್ನು ಸೋಲಿಸಿದವರು ಇವರು. ಈ ಸಲ ತಮಗೆ ಟಿಕೆಟ್‌ ಕೊಡಿ ಎಂದು ಕೇಳಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ(Karnatak University) ಸಿಂಡಿಕೇಟ್‌ ಸದಸ್ಯರಾಗಿರುವ ಸುಧೀಂದ್ರ ದೇಶಪಾಂಡೆ, ಕರ್ನಾಟಕ(Karnataka) ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿರುವ ಸಂದೀಪ ಬೂದಿಹಾಳ ಕೂಡ ಟಿಕೆಟ್‌ ಕೇಳಿದ್ದಾರೆ. ಈ ಮೂವರ ನಡುವೆ ಇದೀಗ ಟಿಕೆಟ್‌ಗಾಗಿ ಪೈಪೋಟಿ ಇದೆ.

ಮೇಲ್ಮನೆಯಲ್ಲಿ ಕಾಗದರಹಿತ ಕಲಾಪಕ್ಕೆ ಕ್ರಮ: ಹೊರಟ್ಟಿ

ಸದ್ಯ ಬಿಜೆಪಿ ಯಾರನ್ನೂ ಅಭ್ಯರ್ಥಿಯೆಂದು ಘೋಷಿಸಿಲ್ಲ. ಮೊದಲು ಮತದಾರರ ನೋಂದಣಿ ಮಾಡಿಸಿ ಆನಂತರ ಅಭ್ಯರ್ಥಿ ಯಾರೆಂದು ಘೋಷಿಸುತ್ತೇವೆ ಎಂದು ಹೇಳಿದೆ. ಹೀಗಾಗಿ ಎಲ್ಲರೂ ಮತದಾರರ ನೋಂದಣಿಯಲ್ಲಿ ತೊಡಗಿದ್ದಾರೆ.
ಚುನಾವಣೆಯಲ್ಲಿ ಏನಾಗುತ್ತದೆಯೋ? ಯಾರು ಅಭ್ಯರ್ಥಿಯಾಗುತ್ತಾರೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ನಾನು ಏಳು ಬಾರಿ ಗೆದ್ದಿದ್ದೇನೆ. ಮತ್ತೆ ಕಣಕ್ಕಿಳಿಯುತ್ತೇನೆ. ಎದುರಾಳಿ ಯಾರಾದರೂ ಆಗಲಿ. ನನಗೇನೂ ವ್ಯತ್ಯಾಸವಾಗಲ್ಲ. ನನ್ನ ಪ್ರಯತ್ನ ನಾ ಮಾಡುತ್ತೇನೆ ಅಷ್ಟೇ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. 

ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇಬ್ಬರು, ಮೂವರು ಟಿಕೆಟ್‌ ಕೇಳಿದ್ದಾರೆ. ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತೇವೆ. ಗೆಲ್ಲಲು ರಣತಂತ್ರ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ(Mahesh Tenginakai) ಹೇಳಿದ್ದಾರೆ. 

ನಾನು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದೇನೆ. ಕಾರ್ಯಕರ್ತರು ನಾನು ಸ್ಪರ್ಧಿಸಲಿ ಎಂದು ಬಯಸಿದ್ದಾರೆ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ. ಪಕ್ಷ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ. ಗೆಲ್ಲುವ ವಿಶ್ವಾಸವಿದೆ ಎಂದು  ಮೋಹನ ಲಿಂಬಿಕಾಯಿ ತಿಳಿಸಿದ್ದಾರೆ. 
 

click me!