ವಿರಾಜಪೇಟೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕಲು ಜೆಡಿಎಸ್ ಮಾಸ್ಟರ್ ಪ್ಲಾನ್

By Suvarna News  |  First Published Feb 24, 2023, 9:45 PM IST

ಈ ಬಾರಿಯ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಯುವ ನಾಯಕರನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ಅದರಲ್ಲೂ ವಿರಾಜಪೇಟೆ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ಸಿಗೆ ಜಿಲ್ಲಾ ಜೆಡಿಎಸ್ ಬ್ರೇಕ್ ಹಾಕಲು ಸಿದ್ದವಾಗುತ್ತಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.24): ಈ ಬಾರಿಯ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಯುವ ನಾಯಕರನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ಅದರಲ್ಲೂ ವಿರಾಜಪೇಟೆ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ಸಿಗೆ ಜಿಲ್ಲಾ ಜೆಡಿಎಸ್ ಬ್ರೇಕ್ ಹಾಕಲು ಸಿದ್ದವಾಗುತ್ತಿದೆ. ಅಷ್ಟಕ್ಕೂ ಜೆಡಿಎಸ್ ಹೀಗೆ ಸಿಟ್ಟಿಗೆದ್ದು ನಿಂತಿರುವುದಕ್ಕೆ ಕಾರಣವೂ ಇದೆ.  ಜೆಡಿಎಸ್ ರಾಜ್ಯ ವಕ್ತಾರರಾಗಿದ್ದ ವಿರಾಜಪೇಟೆಯ ಸಂಕೇತ್ ಪೂವಯ್ಯ ಅವರು ತಾವು ಹೊತ್ತಿದ್ದ ತೆನೆಯ ಹೊರೆಯನ್ನು ಇಳಿಸಿ ಏಕಾಏಕಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇ ಇದಕ್ಕೆ ಮುಖ್ಯವಾದ ಕಾರಣ ಎನ್ನಲಾಗುತ್ತಿದೆ. ವಿರಾಜಪೇಟೆ ಭಾಗದಲ್ಲಿ ಜೆಡಿಎಸ್‌ನ ಪ್ರಮುಖ ನಾಯಕರಾಗಿದ್ದ ಸಂಕೇತ ಪೂವಯ್ಯ ಅವರು ಕಳೆದ ಹಲವು ವರ್ಷಗಳಿಂದ ಜೆಡಿಎಸ್ ನಲ್ಲಿ ಇದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದವರು. ಅಷ್ಟೇ ಅಲ್ಲ ಎಂಎಲ್ಸಿ ಚುನಾವಣೆಗೂ ಜೆಡಿಎಸ್ ನಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಪರಾಜಿತರಾಗಿದ್ದವರು. ಈಗ ಇದ್ದಕ್ಕಿದ್ದಂತೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ.

Latest Videos

undefined

ಕಾಂಗ್ರೆಸ್ ಸೇರುವಾಗ ಮಾತನಾಡಿದ್ದ  ಸಂಕೇತ ಪೂವಯ್ಯ ಅವರು ಜಾತ್ಯತೀತ ಮತಗಳು ವಿಭಜನೆ ಆಗಬಾರದು, ಅದಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಹೇಳಿದ್ದರು. ಸಂಕೇತ ಪೂವಯ್ಯ ಅವರು ಕಾಂಗ್ರೆಸ್ ಸೇರಿದ್ದು ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಮತ್ತಷ್ಟು ಬಲ ಬಂದಂತೆ ಆಗಿತ್ತು. ಆದರೆ ಸಂಕೇತ ಪೂವಯ್ಯ ಅವರು ಕಾಂಗ್ರೆಸ್ ಸೇರುವಾಗ ಹಾಡಿರುವ ಮಾತನ್ನು ಪ್ರಶ್ನಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಕಾಂಗ್ರೆಸ್ ಯಾವ ಸೀಮೆಯ ಜಾತ್ಯತೀತ ಪಕ್ಷ. ಅದು ನಿಜಕ್ಕೂ ಜಾತ್ಯತೀತ ಪಕ್ಷವೇ ಆಗಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ನೆಲಮಂಗಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗೆ ದುಡ್ಡಿನ ಮದ, ಸಾಮಾಜಿಕ ವಲಯದಲ್ಲಿ ಭಾರೀ

ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 45 ಸಾವಿರ ಮುಸಲ್ಮಾನ ಮತದಾರರನ್ನೇ ಹೊಂದಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದಿದ್ದರೆ ಜೆಡಿಎಸ್ ನಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತ ಎಂದಿದ್ದಾರೆ. ಆ ಮೂಲಕ ಜೆಡಿಎಸ್ ಕೊಡಗು ಜಿಲ್ಲಾ ಘಟಕ ಕಾಂಗ್ರೆಸ್‌ನ ಗೆದ್ದೇ ಗೆಲ್ಲುತ್ತೇವೆ ಎನ್ನುವ ಹುಮ್ಮಸ್ಸಿಗೆ ತಣ್ಣೀರು ಎರೆಚಲು ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಹೆಚ್ಚು ಮುಸಲ್ಮಾನ ಮತದಾರರಿದ್ದು ಅವರೆಲ್ಲರೂ ಸಂಕೇತ್  ಪೂವಯ್ಯ ಅವರನ್ನು ನಾಯಕರೆಂದು ನಂಬಿ ಅವರಿಗೆ ಬಲವಾಗಿದ್ದರು. ಆದರೆ ಅವರೆಲ್ಲರ ನಂಬಿಕೆಗೆ ದ್ರೋಹ ಬಗೆದು ಸಂಕೇತ್ ಪೂವಯ್ಯ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಜಾತಿ ರಾಜಕಾರಣಿ: ಕೇಂದ್ರ ಸಚಿವೆ ಕರಂದ್ಲಾಜೆ ಟೀಕೆ

ಇನ್ನು ಜೆಡಿಎಸ್ ಪಕ್ಷದಲ್ಲಿ ಬಣ ರಾಜಕೀಯ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಂ. ಗಣೇಶ್, ಯಾವುದೇ ಬಣ ರಾಜಕೀಯವಿಲ್ಲ. ಎಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಯಾರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೂ ಅವರನ್ನು ಮುಲಾಜಿಲ್ಲದೆ ಪಕ್ಷದಿಂದ ಹೊರ ಹಾಕಲಾಗುವುದು ಎಂದರು. ಇನ್ನು ಕಾಂಗ್ರೆಸ್ ನಿಂದ ಬಂದು ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯೆಂದು ಬಿಂಬಿಸಿಕೊಳ್ಳುತ್ತಿರುವ ಮುತ್ತಪ್ಪ ಅವರ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು ಯಾರೆ ಆದರೂ ಸರಿ ಪಕ್ಷದ ನೀತಿ ನಿಯಮಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಎಲ್ಲರಿಗೂ ಒಂದೇ ಶಿಸ್ತು ಕ್ರಮ ಇರುತ್ತದೆ ಎಂದು ಹೇಳಿದರು. ಒಟ್ಟಿನಲ್ಲಿ ಪಕ್ಷದೊಳಗೆ ಒಳಜಗಳಗಳಿದ್ದರೂ ಕಾಂಗ್ರೆಸ್ ವಿರುದ್ಧ ತಿರುಗಿಬೀಳುತ್ತಿರುವ ಜೆಡಿಎಸ್ ಕಾಂಗ್ರೆಸ್ನ ಗೆಲುವಿಗೆ  ನಿಜವಾಗಿಯೂ ತೊಡಕಾಗುತ್ತಾ? ಕಾದು ನೋಡಬೇಕಾಗಿದೆ.

click me!