ಗದಗ (ಅ.30) : ನಿನ್ನ ಅಧಿಕಾರ ಅವಧಿಯಲ್ಲಿ ಎಸ್ಸಿ, ಎಸ್ಟಿಗೆ ನೀನೇನು ಮಾಡಿದಿ? ನಿನ್ನ ಅಹಂಕಾರ ಹೆಚ್ಚಾಗಿದೆ ಇದಕ್ಕೆ ರಾಜ್ಯದ ಜನರು ತಕ್ಕ ಉತ್ತರ ಕೊಡುತ್ತಾರೆ ಎಂದು ಸಚಿವ ಬಿ. ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಶನಿವಾರ ರಾತ್ರಿ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
'ಶ್ರೀರಾಮುಲು ವರ್ಚಸ್ಸು ಸಹಿಸದೆ ಸಿದ್ದರಾಮಯ್ಯ ಹತಾಶ'
ಮಂಡಲ್ ಆಯೋಗದ ವರದಿ ವೇಳೆ ಸಿದ್ದರಾಮಯ್ಯ ಎಲ್ಲಿದ್ರು? ರಾಮಾ ಜೋಯಿಸ್, ಶ್ರೀರಾಮುಲು, ಬಿಜೆಪಿ ಎಲ್ಲಿತ್ತು ಎಂಬುದು ಮುಖ್ಯ ಎನ್ನುವುದಾದರೆ, ಆಗ ಸಿದ್ದರಾಮಯ್ಯ ಎಲ್ಲಿದ್ದ? ಎಸ್‌ಸಿ/ಎಸ್‌ಟಿಗೆ ನೀನೆನಾದರೂ ಮೀಸಲಾತಿ ಕೊಟ್ಟಿದ್ದಿಯಾ? ಅದನ್ನು ಮೊದಲು ಜನರಿಗೆ ಹೇಳು ಎಂದು ಏಕವಚನದಲ್ಲಿಯೇ ತೀವ್ರ ವಾಗ್ದಾಳಿ ನಡೆಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಬಿಜೆಪಿ ಮಾತ್ರ ಪಾಲಿಸುತ್ತಿದೆ. ಬಿಜೆಪಿ ಮೀಸಲಾತಿ ಕೊಟ್ಟನಂತರ ನೀನು ಈಗ ಏನೇನೋ ಕಥೆಗಳನ್ನು ಹೇಳಬೇಡ. ಆ ಕಥೆಯನ್ನು ರಾಜ್ಯದ ಜನರು ಕೇಳುವ ಪರಿಸ್ಥಿತಿಯಲಿಲ್ಲ ಎಂದ ಶ್ರೀರಾಮುಲು, ನಿನ್ನನ್ನು ಜನರು ಈಗಾಗಲೇ ತಿರಸ್ಕಾರ ಮಾಡಿದ್ದಾರೆ. ನಿನ್ನ ಅಹಂಕಾರ ಜಾಸ್ತಿಯಾಗಿದೆ ಎನ್ನುವುದು ನಿನ್ನ ಮಾತು, ವರ್ತನೆಯಿಂದಲೇ ಗೊತ್ತಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಆ ಅಹಂಕಾರ ಇಳಿಸುವ ಕೆಲಸವನ್ನು ರಾಜ್ಯದ ಜನ ಮಾಡುತ್ತಾರೆ. ಮೀಸಲಾತಿ ಕೊಡಿಸುವ ವಿಚಾರದಲ್ಲಿ ಎಸ್ಸಿ/ಎಸ್ಟಿಸಮಾಜಕ್ಕೆ ದ್ರೋಹ ಬಗೆಯುವ ಕೆಲಸ ಕಾಂಗ್ರೆಸ್ ಮಾಡಿದೆ. ನಾವೇ ಜ್ಞಾನವಂತರು ಅಂತಾ ಕಾಂಗ್ರೆಸ್‌ನವರು ಅಂದುಕೊಂಡಿದ್ದರು. ಆ ಜ್ಞಾನವಂತರು ಕೆಳಜಾತಿಗೆ ನ್ಯಾಯ ಕೊಡಿಸುವಲ್ಲಿ ಮೋಸ ಮಾಡಿದ್ದು ಈಗ ಬಯಲಾಗಿದೆ ಎಂದರು.
ಸಿದ್ದರಾಮಯ್ಯ ಜೋಕರ್, ಪೆದ್ದ, ಶಕುನಿ ಇದ್ದಂತೆ: ಸಚಿವ ಶ್ರೀರಾಮುಲು
ಕೆಳಜಾತಿ ಬಳಸಿಕೊಂಡು ಮುಖ್ಯಮಂತ್ರಿ ಆಗಿ ವಿನಃ ನ್ಯಾಯ ಕೊಡಿಸುವ ಯೋಚನೆ ಮಾಡಲೇ ಇಲ್ಲ. ಕಾಂತರಾಜು, ನಾಗಮೋಹನ್ ದಾಸ್ ವರದಿಯನ್ನು ಕಾಂಗ್ರೆಸ್ ಇಂಪ್ಲಿಮೆಂಟ್ ಯಾಕೆ ಮಾಡಲಿಲ್ಲ ಎನ್ನುವ ಬಗ್ಗೆ ಸ್ಪಷ್ಟತೆ ಕೊಡಲಿ. ನಾಗಮೋಹನದಾಸ್ ವರದಿಗೆ ಕೈ ಹಾಕಿದರೆ ಜೇನು ಗೂಡಿಗೆ ಕೈಹಾಕಿದಂತೆ ಅಂತ ಸುಮ್ಮನಿದ್ದರು. ಮೊದಲು ನಾವು ಪ್ಲಾನ್ ಮಾಡಿದ್ದು ಅಂತ ಈಗ ದೊಡ್ಡಸ್ಥಿಕೆ ಮಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದರು.