ವಕೀಲರ ಹಿತರಕ್ಷಣೆಗಾಗಿ ಅಗತ್ಯವಿರುವ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನಗರದ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆಯೋಜಿಸಿದ್ದ 10ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮೈಸೂರು (ಆ.13): ವಕೀಲರ ಹಿತರಕ್ಷಣೆಗಾಗಿ ಅಗತ್ಯವಿರುವ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನಗರದ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆಯೋಜಿಸಿದ್ದ 10ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಸರ್ಕಾರದ ಅವಧಿಯಲ್ಲಿಯೇ ಈ ಕಾಯ್ದೆಯ ಕರಡು ಸಿದ್ಧವಾಗಿತ್ತು. ಈ ಸಂಬಂಧ ನಾನು ಬೆಳಗಾವಿ ಅಧಿವೇಶನದಲ್ಲಿ ಕೂಡ ಮಾತನಾಡಿದ್ದೆ. ಈಗ ನಮ್ಮದೇ ಸರ್ಕಾರ ಬಂದಿದೆ. ಈ ಬಾರಿಯ ಅಧಿವೇಶನದಲ್ಲಿ ಮಂಡಿಸಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಆದರೆ ಮುಂದಿನ ಅಧಿವೇಶನದಲ್ಲಿ ಖಂಡಿತವಾಗಿಯೂ ಮಂಡಿಸಲಾಗುವುದು ಎಂದರು.
ವಕೀಲ ವೃತ್ತಿಗೆ ರಕ್ಷಣೆ ಕೊಡಬೇಕಾದದ್ದು ನಮ್ಮ ಕರ್ತವ್ಯ. ನಿಮ್ಮ ಬೇಡಿಕೆಗೆ ನನ್ನ ಸಹಮತವಿದೆ. ಇದನ್ನು ಸರ್ಕಾರದ ಆರನೇ ಗ್ಯಾರಂಟಿ ಎಂದು ತಿಳಿಯಿರಿ. ಇನ್ನು ಬೆಂಗಳೂರಿನಲ್ಲಿ ಕರ್ನಾಟಕ ವಕೀಲರ ಪರಿಷತ್ ಹೈಕೋರ್ಚ್ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಪ್ರತ್ಯೇಕ ಕಟ್ಟಡ ಬೇಕು ಎಂದು ಕೇಳಿದ್ದೀರಿ. ವಕೀಲರ ಪರಿಷತ್ತಿಗೆ ಸ್ವಂತ ಕಟ್ಟಡ ಬೇಕು. ಆದರೆ ಬೆಂಗಳೂರಿನಲ್ಲಿ ಜಾಗದ ಕೊರತೆ ಹೆಚ್ಚಿದೆ. ನಾನು ಪರಿಷತ್ತಿಗೆ ಅಗತ್ಯವಿರುವ ಜಾಗ ಕೊಡಲು ಸಿದ್ಧನಿದ್ದೇನೆ. ನೀವು ಹತ್ತಿರದಲ್ಲಿ ಸ್ಥಳ ಗುರುತಿಸಿ ತಿಳಿಸಿದರೆ ನಾನು ಜಾಗ ನೀಡಲು ಸಿದ್ಧ ಎಂದರು.
ಕರ್ನಾಟಕ ಭ್ರಷ್ಟರಾಜ್ಯ ಆಗುತ್ತಿದೆ, ರಾಜಕೀಯ ವ್ಯವಸ್ಥೆ ಬೇಸರ ತಂದಿದೆ: ಶಾಸಕ ಬಸವರಾಜ ರಾಯರೆಡ್ಡಿ
ಇನ್ನು ಉಳಿದ ಬೇಡಿಕೆಗಳನ್ನು ಪರಿಶೀಲಿಸುತ್ತೇನೆ. ನಿಮ್ಮ ಅಗತ್ಯವಿರುವ ಬೇಡಿಕೆಯನ್ನು ಈಡೇರಿಸಲು ಸಿದ್ಧನಿದ್ದೇನೆ. ಅಂತೆಯೇ ಎಲ್ಲಾ ವಿಷಯದಲ್ಲಿಯೂ ಸಕಾರಾತ್ಮಕವಾಗಿ ಇರುತ್ತೇನೆ. ಈ ಸಮ್ಮೇಳನ ಪ್ರತಿ ಎರಡು ವರ್ಷಕ್ಕೊಮ್ಮೆಯಾದರೂ ನಡೆಯಬೇಕು. ಇಲ್ಲಿ ವಕೀಲರ ಸಮಸ್ಯೆ ಮಾತ್ರವಲ್ಲದೆ ಕಕ್ಷಿದಾರರ ಸಮಸ್ಯೆ, ಸಮಾಜದ ಸಮಸ್ಯೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕು ಎಂದರು.
ನಿಮ್ಮ ಈ ಚರ್ಚೆಗಳು ಮತ್ತು ತೀರ್ಮಾನ ಸಮಾಜಮುಖಿಯಾಗಿರಲಿ. ಸಂವಿಧಾನದ ದೇಯೋದ್ದೇಶಕ್ಕೆ ಬದ್ಧರಾಗಿ ನಾವು ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಎಷ್ಟೇ ಕಷ್ಟವಾದರೂ ಉಳಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ತಳವರ್ಗ, ಆರ್ಥಿಕವಾಗಿ ಶಕ್ತಿ ಇಲ್ಲದ ಜನರ ಬಗ್ಗೆ ಕನಿಕರದ ಬದಲಿಗೆ ಸಹಾಯ ಮಾಡುವ ಮನಸ್ಸು ಇರಬೇಕು. ಸಮಾಜದಲ್ಲಿ ಇರುವ ಅಸಮಾನತೆ ತೊಡೆದುಹಾಕಲು ಪ್ರಯತ್ನಿಸಬೇಕು. ಅಂಬೇಡ್ಕರ್ ಅವರು ಮಾಡಿದ ಐತಿಹಾಸಿಕ ಭಾಷಣವನ್ನು ಎಲ್ಲರೂ ಓದಿದರೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಸಮಾಜ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಮಾಡಿದೆ ಎಂದು ಕೇಳಿಕೊಳ್ಳುವುದು ಮುಖ್ಯ. ಆ ದೃಷ್ಟಿಯಿಂದ ಚಿಂತನೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಕೆಳ ಹಂತದ ನ್ಯಾಯಾಲಯಗಳಲ್ಲಿ ಮೀಸಲಾತಿ ಇದೆ. ಮೇಲ್ಮಟ್ಟದ ನ್ಯಾಯಾಲಯದಲ್ಲಿ ಮೀಸಲಾತಿ ಇಲ್ಲ. ಅಲ್ಲಿ ಮೀಸಲಾತಿ ಜಾರಿಯಾದರೆ ಹೆಚ್ಚು ಉಪಯುಕ್ತವಾದ ನ್ಯಾಯ ನೀಡಲು ಸಾಧ್ಯ. ಸಂವಿಧಾನ ವಿರೋಧಿಸುವವರು ಇದ್ದಾರೆ. ಸಂವಿಧಾನ ಓದದವರನ್ನೇ ಜಡ್ಜ್ ಮಾಡಿದರೆ ನ್ಯಾಯ ಹೇಗೆ ಸಿಗುತ್ತದೆ. ಬಡವರಿಗೆ ನ್ಯಾಯ ಸಿಗುವುದು ಯಾವಾಗ? ಎಂದು ಅವರು ಪ್ರಶ್ನಿಸಿದರು.
ಸಂವಿಧಾನ ಬರುವ ಮುನ್ನ ಒಂದು ರೀತಿಯ ನ್ಯಾಯದಾನ ವ್ಯವಸ್ಥೆ ಇತ್ತು. ಸಂವಿಧಾನ ಬಂದ ನಂತರ ಭಿನ್ನವಾಗಿದೆ. ಬ್ರಿಟಿಷರ ಕಾಲದಲ್ಲಿ ಹಾಗೂ ಸ್ವಾತಂತ್ರ್ಯ ದೊರೆತ ನಂತರ ಭಿನ್ನವಾಗಿದೆ. ಅದಕ್ಕೂ ಮುನ್ನ ರಾಜಮಹಾರಾಜರು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಅವರ ತೀರ್ಮಾನ ಮನುವಾದದಂತೆ ತೀರ್ಮಾನಿಸುತ್ತಿದ್ದರು. ಜಾತಿ ವ್ಯವಸ್ಥೆ ಬಲವಾಗಿದ್ದುದರಿಂದ ಒಂದೇ ರೀತಿಯ ತಪ್ಪಿಗೆ ಬೇರೆ ಬೇರೆ ಶಿಕ್ಷೆಗಳಿದ್ದವು. ಶ್ರೀಮಂತರಿಗೆ, ಮೇಲ್ಜಾತಿಯವರಿಗೆ, ಕೆಲವರ್ಗದವರಿಗೆ, ಬಡವರಿಗೆ ಬೇರೆ ರೀತಿಯ ಶಿಕ್ಷೆ ಆಗುತ್ತಿತ್ತು. ಸಂವಿಧಾನ ಬಂದ ನಂತರ ಸಮಾನತೆ ಬಂದಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದರು.
ಸಿಪಿಸಿ ತಿದ್ದುಪಡಿ ಮೂಲಕ ಬಡವರ ಪ್ರಕರಣ ವಿಲೇವಾರಿ ಮಾಡಬೇಕು: ಸಚಿವ ಎಚ್.ಕೆ.ಪಾಟೀಲ್
ಕರ್ನಾಟಕ ವಕೀಲರ ಪರಿಷತ್ತು ಅನೇಕ ಪ್ರತಿಭಾವಂತರನ್ನು ಒಳಗೊಂಡಿದೆ. ಅನೇಕಾರು ಹೈ ಕೋರ್ಚ್, ಸುಪ್ರಿಂ ಕೋರ್ಚ್ ವಕೀಲರನ್ನು ನೀಡಿದೆ. ಅನೇಕರು ನ್ಯಾಯಾಧೀಶರಾಗಿದ್ದಾರೆ. ಯಾರಿಗೆ ಅವಕಾಶ ದೊರಕಿದೆಯೋ ಅವರೆಲ್ಲ ಬುದ್ಧಿವಂತರು, ಅವಕಾಶ ದೊರಕದವರು ದಡ್ಡರು. ನಾನು ವಕೀಲನಾದಾಗ ಕುರುಬ ಜನಾಂಗದಿಂದ ನಾನೊಬ್ಬನೇ ಇದ್ದೆ. ಏಕೆಂದರೆ ಹಿಂದೆ ವಕೀಲಗಿರಿಯನ್ನು ಮೇಲ್ವರ್ಗದವರೇ ಮಾಡುತ್ತಿದ್ದರು. ನಮ್ಮೂರಿನಲ್ಲಿ ಚೆನ್ನಪ್ಪಯ್ಯ ಎಂಬುವರನ್ನು ನಮ್ಮ ತಂದೆ ಕೇಳಿದಾಗ, ಕುರುಬರು ವಕೀಲರಾಗಲು ಸಾಧ್ಯವೇನಯ್ಯ ಬೇಡ ಎಂದು ಹೇಳು ಎಂದಿದ್ದರಂತೆ. ನಾನು ಚೆನ್ನಪ್ಪಯ್ಯನ ಮಾತು ಕೇಳಿ ಕಾನೂನು ಓದಿದ್ದರೆ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಇಂತಹ ಪಟ್ಟಭದ್ರ ಹಿತಾಸಕ್ತಿಗಳು ಯಾವಾಗಲೂ ಇರುತ್ತಾರೆ ಎಂದರು.