ಹೊರೆಯಾದ್ರೂ ಗ್ಯಾರಂಟಿ ನಿಲ್ಲಲ್ಲ : ಕಾಂಗ್ರೆಸ್‌

Kannadaprabha News   | Kannada Prabha
Published : Feb 27, 2026, 05:52 AM IST
Priyank kharge

ಸಾರಾಂಶ

ನಮಗೆ ಎಷ್ಟೇ ಕಷ್ಟವಾದರೂ ಜನರಿಗೆ ಸ್ವಾಭಿಮಾನದ ಬದುಕು ಕೊಡುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೂ ಇವುಗಳನ್ನು ನಿಲ್ಲಿಸುವುದಿಲ್ಲ. ಪ್ರಣಾಳಿಕೆಯಲ್ಲಿ ಈ ಯೋಜನೆಗಳನ್ನು ಘೋಷಿಸಲಾಗಿತ್ತು. ಈ ಯೋಜನೆಗಳು ಅಭಿವೃದ್ಧಿಯ ಭಾಗ. ಆರ್ಥಿಕವಾಗಿ ಏನೇ ಇದ್ದರೂ ನಮ್ಮಲ್ಲಿನ ಸಮರ್ಥ ನಾಯಕತ್ವ ಎಲ್ಲವನ್ನೂ ನಿಭಾಯಿಸುತ್ತದೆ, ನಮಗೆ ಎಷ್ಟೇ ಕಷ್ಟವಾದರೂ ಜನರಿಗೆ ಸ್ವಾಭಿಮಾನದ ಬದುಕು ಕೊಡುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತ್ಯೇಕವಾಗಿ ಮಾತನಾಡಿರುವ ಸಚಿವರು, ಗ್ಯಾರಂಟಿ ಯೋಜನೆ ದುರುಪಯೋಗ ತಪ್ಪಿಸಲು ಸರ್ಕಾರ ಚರ್ಚಿಸುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಪಡೆಯಬಾರದು, ಯಾವುದೇ ವಿಚಾರವಾದರೂ ಪರಿಷ್ಕರಣೆ ಕಾಲಕಾಲಕ್ಕೆ ಆಗಬೇಕು ಎಂದಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಎಷ್ಟೇ ಕಷ್ಟವಾದರೂ ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ಯಾವುದೇ ರೀತಿಯ ಪರಿಷ್ಕರಣೆಯನ್ನೂ ಮಾಡುವುದಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳ ದುರುಪಯೋಗ ತಪ್ಪಿಸಬೇಕಿದೆ. ಮೃತಪಟ್ಟಿರುವ ಕೆಲವರಿಗೆ ಗ್ಯಾರಂಟಿ ಯೋಜನೆ ಹಣ ಸಂದಾಯವಾಗಿದೆ. ಪಡಿತರ ಅಕ್ಕಿಯನ್ನೂ ಮೃತಪಟ್ಟಿರುವವರ ಹೆಸರಿನಲ್ಲಿ ಪಡೆಯಲಾಗುತ್ತಿದೆ. ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಈ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬುದನ್ನು ಸರ್ಕಾರ ಚರ್ಚೆ ಮಾಡುತ್ತಿದೆ ಎಂದರು.

100 ಎಕರೆ ಜಮೀನು ಇರುವವರೂ ಗ್ಯಾರಂಟಿ ತೆಗೆದುಕೊಳ್ಳುತ್ತಿದ್ದಾರೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಗ್ಯಾರಂಟಿ ಯೋಜನೆ ಜಾರಿ ಮಾಡುವಾಗ ನಾವು ಯಾವುದೇ ರೀತಿ ನಿಯಮ ಮಾಡಿರಲಿಲ್ಲ. ಸ್ಥಿತಿವಂತರು ಗ್ಯಾರಂಟಿ ತೆಗೆದುಕೊಳ್ಳಲ್ಲ ಎಂದು ಯೋಚಿಸಿದ್ದೆವು. ಆದರೆ 100 ಎಕರೆ ಜಮೀನು ಇರುವವರೂ ಗ್ಯಾರಂಟಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಒಂದು ಭಾಗವಾಗಿದ್ದು, ಯಾವುದೇ ಹೊರೆಯಾಗುವುದಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ಇನ್ನು ಸಚಿವ ಪ್ರಿಯಾಂಕ್‌ ಮಾತನಾಡಿ, ಜನರ ಬದುಕು ರೂಪಿಸುತ್ತಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಆರ್ಥಿಕವಾಗಿ ಏನೇ ಇದ್ದರೂ ನಮ್ಮಲ್ಲಿನ ಸಮರ್ಥ ನಾಯಕತ್ವ ಅದನ್ನು ನಿಭಾಯಿಸುತ್ತಿದೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿಯಲ್ಲಿ ಅರ್ಧ ಭಾಗ ನಾವು ಗ್ಯಾರಂಟಿ‌ ಯೋಜನೆಗೆ ಖರ್ಚು ಮಾಡುತ್ತಿದ್ದೇವೆ, ಸುಮಾರು 60 ಸಾವಿರ ಕೋಟಿ ರು. ಖರ್ಚು‌ ಮಾಡುತ್ತಿದ್ದೇವೆ ಎಂದರು.

ಸಿರಿವಂತರು ಗ್ಯಾರಂಟಿ ಬಿಟ್ಟು ಕೊಟ್ಟರೆ ತಪ್ಪೇನಿಲ್ಲ: ಡಿಸಿಎಂ

ಬೆಂಗಳೂರು: ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ? ಸರ್ಕಾರಿ ನೌಕರರು, ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಬಹಳಷ್ಟು ಮಂದಿ ಗ್ಯಾರಂಟಿ ಯೋಜನೆ ಬೇಡ ಎಂದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದಷ್ಟು ಸಿರಿವಂತರು ನಮಗೆ ಗ್ಯಾರಂಟಿ ಅವಶ್ಯಕತೆಯಿಲ್ಲ ಎಂದಿದ್ದಾರೆ. 200 ಯುನಿಟ್‌ ಉಚಿತ ವಿದ್ಯುತ್‌ ಬಗ್ಗೆಯೂ ಹೇಳಿದ್ದಾರೆ. ಅದಕ್ಕೆ ನಾವು ಆ ಬಗ್ಗೆ ವಿಮರ್ಶೆ ಮಾಡುತ್ತಿದ್ದೇವೆ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚುವ ಅವಶ್ಯಕತೆಯಿಲ್ಲ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎನ್ನುವುದು ಸುಳ್ಳು. ಬರುವ ಬಜೆಟ್‌ನಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಘೋಷಿಸಲಿದೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಆದರೂ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿ ನಿಭಾಯಿಸುತ್ತಿದ್ದೇವೆ. 21 ಕೋಟಿ ರು. ಮೃತಪಟ್ಟಿರುವ ಮಹಿಳೆಯರ ಖಾತೆಗೆ ಜಮೆಯಾಗಿದ್ದು, ಅದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೇಮಕಾತಿ ಪ್ರಕ್ರಿಯೆ ಇನ್ನು ಸುಗಮ-ಒಳಮೀಸಲು ಬಿಲ್‌ಗೆ ಕೊನೆಗೂ ಗೌರ್ನರ್‌ ಗೆಹಲೋತ್‌ ಅಂಕಿತ
ಡಿಕೆಶಿ ಬಣದ 18 ಶಾಸಕರು, ಸಚಿವರಿಂದ ಡಿನ್ನರ್‌ ಪಾರ್ಟಿ