ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್ ಸಿದ್ದರಾಮೋತ್ಸವ ಕಾಂಗ್ರೆಸ್ ನಾಯಕರೇ ನಿರೀಕ್ಷಿಸದ ರೀತಿಯಲ್ಲಿ ಯಶಸ್ವಿಯಾಗಿದ್ದು, ರಾಜಕೀಯದಲ್ಲಿ ಮುಳುಗೇಳುತ್ತಿರುವ ಕಾಂಗ್ರೆಸ್‌ಗೆ ಈ ಜನಸ್ತೋಮ ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿದ್ದು, ಕಾಂಗ್ರೆಸ್ ಹುಮ್ಮಸು ಜೋರಾಗಿದೆ. ಈ ಮಧ್ಯೆ ಹಲವು ನಾಯಕರು ಈ ಉತ್ಸವಕ್ಕೆ ಟೀಕೆ ವ್ಯಕ್ತ ಪಡಿಸಿದ್ದಾರೆ. ಯಾವ ನಾಯಕರು ಏನು ಹೇಳಿದರು ಎಂಬ ಡಿಟೇಲ್ಸ್ ಇಲ್ಲಿದೆ.
ಸೂತಕದ ಮನೆಯಲ್ಲಿ ಸಂಭ್ರಮ
ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ 13 ಜನರು ಜೀವ ಕಳೆದುಕೊಂಡಿದ್ದಾರೆ. ನೂರಾರು ಜನ ನಿರ್ಗತಿಕರಾಗಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷ ಸೂತಕದ ಮನೆಯಲ್ಲಿ ಸಂಭ್ರಮ ಪಡುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡುವಾಗ ಸಿದ್ದರಾಮೋತ್ಸವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸಂವೇದನಶೀಲತೆ ಕಳೆದುಕೊಂಡಿದೆ. ಜನ ಸಂಕಷ್ಟದಲ್ಲಿರುವ ಸಮಯದಲ್ಲಿ ಸಂಭ್ರಮ ಆಚರಿಸಿಕೊಳ್ಳುತ್ತಿದ್ದಾರೆ. ಅತಿವೃಷ್ಟಿಯಲ್ಲಿ ನಿಧನ, ಸಂಕಷ್ಟಕ್ಕೆ ಒಳಗಾದವರ ಬಗ್ಗೆ ಅವರಿಗೆ ಏನೂ ಅನ್ನಿಸುತ್ತಿಲ್ಲವೇ? ಆ ಪಕ್ಷ ಆಲೋಚಿಸಬೇಕಿರುವ ವಿಚಾರವಿದು. ಸಿದ್ದರಾಮಯ್ಯ ಅವರ 75 ವರ್ಷದ ಬದುಕಿನ ಸಾರ್ಥಕತೆ ಬೇರೆ. ಆದರೆ, ಜನ ಸಂಕಷ್ಟದಲ್ಲಿದ್ದಾಗ ಇದನ್ನು ಆಚರಿಸಿಕೊಳ್ಳುವುದು ಹಾಗೂ ಅವರ ನಾಯಕರು ಹಾಡಿ ಹೊಗಳುವುದು ಸಂವೇದನಾಶೀಲತೆ ಇದ್ದವರಿಗೆ ಶೋಭೆ ತರುವ ಸಂಗತಿಯಲ್ಲ ಎಂದರು.
ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಹಾಗೂ ಬಿಜೆಪಿ ಸರ್ಕಾರಕ್ಕೆ 3 ವರ್ಷವಾಗಿರುವ ಹಿನ್ನೆಲೆ ಜನೋತ್ಸವ ಆಚರಿಸಬೇಕು ಎಂದು ತೀರ್ಮಾನಿಸಿ ಸಿದ್ಧತೆ ನಡೆದಿತ್ತು. ಆದರೆ, ಪಕ್ಷದ ಕಾರ್ಯಕರ್ತ ಪ್ರವೀಣ್ ಹತ್ಯೆ ನಡೆದ ಕಾರಣ ಕಾರ್ಯಕ್ರಮ ನಡೆಸದಿರಲು ಒಮ್ಮತದ ನಿರ್ಧಾರ ಮಾಡಿ ರದ್ದು ಮಾಡಲಾಯಿತು. ಅಂದು ಕಾಂಗ್ರೆಸ್ ಸೂತಕದ ಮನೆಯಲ್ಲಿ ಸಂಭ್ರಮ ಆಚರಿಸಿಕೊಳ್ಳಲು ಹೊರಟಿದ್ದೀರಿ ಎಂದು ಪ್ರಶ್ನಿಸಿತ್ತು. ಈಗ 13 ಜನ ನಿಧನರಾಗಿದ್ದಾರೆ. ಅದರಲ್ಲಿ ಶಿಕ್ಷಕರು, ಮಕ್ಕಳು, ಕಾರ್ಮಿಕರು ಸೇರಿದ್ದಾರೆ. ಹೀಗಿರುವಾಗ ಸೂತಕದ ಮನೆಯಲ್ಲಿ ಸಂಭ್ರಮ ಆಚರಿಸಿಕೊಳ್ಳುತ್ತಿದ್ದೇವೆ ಎಂದು ಕಾಂಗ್ರೆಸ್ಸಿನ ಕೆಲವರಿಗಾದರೂ ಅನ್ನಿಸಬೇಕಿತ್ತು. ಬಿಜೆಪಿ ರೀತಿಯಲ್ಲಿ ಅವರು ನಿಲುವು ತೆಗೆದುಕೊಳ್ಳುತ್ತಾರೆ ಎನ್ನುವ ನಮ್ಮ ನಿರೀಕ್ಷೆ ಹುಸಿಯಾಗಿದೆ. ಅದು ದುರಾದೃಷ್ಟಕರ ಎಂದು ಹೇಳಿದರು.
ಕುರಿ ಕಾಯುತ್ತಿದ್ದ ಹುಡುಗ ಸಿಎಂ ಆಗಿದ್ದು ಹೇಗೆ?: ನೀವು ಕಂಡಿರದ ಕೇಳಿರದ ಸಿದ್ದು ಜೀವನ ಚರಿತ್ರೆ!
ರಾಮ ಮಂದಿರ ಕಟ್ಟುವಾಗ ಶಾಲೆ ಕಟ್ಟಿಎಂದು ಬಿಜೆಪಿಗೆ ಪಾಠ ಹೇಳುತ್ತಿದ್ದರು. ಸಿದ್ದರಾಮೋತ್ಸವಕ್ಕೆ ಸುಮಾರು 100 ಕೋಟಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಿಂದ ಸುಮಾರು ಜನರಿಗೆ ಬದುಕು ಕಟ್ಟಿಕೊಡಬಹುದಿತ್ತು. ಆ ಜನರೆಲ್ಲ ಸಾಯುವವರೆಗೆ ಇವರ ಫೋಟೋ ಇಟ್ಟುಕೊಳ್ಳುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತ ಓರ್ವ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾನೆ. ಮಾನವೀಯ ಕಳಕಳಿಯ ಸಂವೇದನಾ ಶೀಲತೆಯೇ ಇಲ್ಲದ ಸ್ಥಿತಿಗೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಈಗೇನೋ ಕೈಹಿಡಿದುಕೊಂಡು ಕಾಂಗ್ರೆಸ್ಸಿಗರು ಒಗ್ಗಟ್ಟು ತೋರಿಸಿದ್ದಾರೆ. ಅದು ಎಷ್ಟುದಿನ ಇರುತ್ತದೋ ಎನ್ನುವುದು ಗೊತ್ತಿಲ್ಲ. ಅದೇ ಜನ ಡಾ. ಜಿ.ಪರಮೇಶ್ವರ್ ಅವರ ಕಾಲೆಳೆದಿದ್ದರು ಎಂದು ಟೀಕಿಸಿದರು.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿಯಾಗಿ 75 ವರ್ಷ ಆಚರಿಸಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಅವರಿಗೆ 100 ಕಾಲ ದೇವರು ಆಯುಷ್ಯ ಕೊಡಲಿ. ಆರೋಗ್ಯ ಚೆನ್ನಾಗಿರಲಿ ಎಂದು ಟೀಕೆಯ ಮಧ್ಯೆಯೇ ಸಿದ್ದರಾಮಯ್ಯಗೆ ಸಿ.ಟಿ ರವಿ ಶುಭಹಾರೈಸಿದರು.
ಮುರಘಾ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಲಿಂಗ ಧಾರಣೆ ಮಾಡಿದ ಮುರಘಾಶ್ರೀ
ವಯಸ್ಸು 75 ಆಯ್ತು, ನಿವೃತ್ತಿ ಘೋಷಿಸಿ
ಮಾಜಿ ಸಿಎಂ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾರೆ. ಇನ್ನು ಮುಂದೆ ಆಗುವುದಿಲ್ಲ. ಈಗ 75 ವರ್ಷ ಆಗಿದೆ. ಇನ್ನೇನಿದೆ. ಹಾಗಾಗಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವದ ಮೂಲಕವೇ ಸಿದ್ದರಾಮಯ್ಯ ನಿವೃತ್ತಿ ತೆಗೆದುಕೊಳ್ಳಬೇಕು. ಒಂದು ಕಾಲದಲ್ಲಿ ಕಾಂಗ್ರೆಸ್ ಇತ್ತು ಎಂದು ಮ್ಯೂಸಿಯಂನಲ್ಲಿ ನೋಡುವ ಕಾಲ ಹತ್ತಿರ ಬಂದಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತೇನೆ. ಮಹಾಪುರುಷರ ಕಾರ್ಯಕ್ರಮ ಆಗುತ್ತಿದೆ. ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಸಿದ್ದರಾಮೋತ್ಸವ ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಆದರೆ, ಅವರು ಹುಟ್ಟುಹಬ್ಬದ ಕಾರ್ಯಕ್ರಮ ಇದೆ. ಮಾಡಿಕೊಳ್ಳಲಿ. 75ನೇ ವರ್ಷದ ಶುಭ ಸಂದರ್ಭದಲ್ಲಿ ಜನರ ವಿಶ್ವಾಸ ಪಡೆದುಕೊಳ್ಳಲು ಶಕ್ತಿ ಪ್ರದರ್ಶನ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.
ಸಿದ್ದರಾಮೋತ್ಸವದಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡ ಪಕ್ಷ. ಕಾಂಗ್ರೆಸ್‌ನಲ್ಲಿ ಏನೂ ಉಳಿದಿಲ್ಲ. ಯಾವ ವಿಚಾರ, ತತ್ವ, ಮೌಲ್ಯದಲ್ಲಿ ಇವರು ಒಂದಾಗುತ್ತಾರೆ. ಎಲ್ಲರೂ ನಾನು ನಾನು ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಈಗಿನ ಕಾಲಕ್ಕೆ ಸಂಪೂರ್ಣವಾಗಿ ಇವರು ಅಪ್ರಸ್ತುತ. ಕೈ ನಾಯಕರು ನೂರಕ್ಕೆ ನೂರು ನಿವೃತ್ತಿ ತೆಗೆದುಕೊಂಡು ಆಶೀರ್ವಾದ ಮಾಡಿಕೊಂಡು ಇರಬೇಕು ಎಂದರು.
ಅಧಿಕಾರಕ್ಕೆ ಬರುವುದು ಬಿಜೆಪಿಯೇ
ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಉತ್ಸವವನ್ನಾದರೂ ಮಾಡಿಕೊಳ್ಳಲಿ, ಡಿ.ಕೆ. ಶಿವಕುಮಾರ ಅವರ ಉತ್ಸವವನ್ನಾದರೂ ಮಾಡಿಕೊಳ್ಳಲಿ. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಏನಾದರೂ ಮಾಡಿಕೊಳ್ಳಲಿ. ನಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವ ಇಲ್ಲ. ಆ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೂ ಅಸ್ತಿತ್ವ ಇಲ್ಲ. ಅಸ್ತಿತ್ವಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅಬ್ಬಬ್ಬಾ ಎಂದರೆ ಬುನಾದಿ ಮಟ್ಟದವರೆಗೆ ಬರಬಹುದು ಹೊರತು ಕಟ್ಟಡಪೂರ್ಣ(ಅಧಿಕಾರಕ್ಕೆ)ಗೊಳಿಸಲು ಆಗುವುದಿಲ್ಲ. ಅದೇನಿದ್ದರೂ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿರುವುದರಿಂದ ಖುಷಿಯಾಗಿದೆ ಎಂದ ಸಿ.ಸಿ.ಪಾಟೀಲ, ಅವರು ಎಲ್ಲಿ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಸೋಲುತ್ತೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯಗೆ ಅಭಿನಂದಿಸಿದ ಸಿಎಂ, ಮಾಧ್ಯಮಗಳಿಗೆ ಜಾಣ ಉತ್ತರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ವರ್ಷದ ಸಂಭ್ರಮ ಆಚರಿಸಿಕೊಂಡಿರುವುದಕ್ಕೆ ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಿದ್ದರಾಮಯ್ಯಗೆ 75 ವರ್ಷ ತುಂಬಿದ್ದು, ಅವರು ನೂರು ಕಾಲ ಬಾಳಲಿ ಎಂದು ಹಾರೈಸಿದರು. ರಾಜ್ಯದಲ್ಲಿ ನೆರಹಾವಳಿ, ಸಾವು ನೋವು ಸಂದರ್ಭದಲ್ಲಿ ಸಿದ್ದರಾಮೋತ್ಸವ ಆಚರಿಸಿಕೊಂಡಿರುವುದು ಸರಿಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಉತ್ಸವ ಮಾಡಿಕೊಂಡಿರುವುದು ಸರಿಯೇ ತಪ್ಪೇ ಎನ್ನುವುದನ್ನು ನೀವು ಸಿದ್ದರಾಮಯ್ಯ ಅವರಲ್ಲಿ ಕೇಳಿ ಎಂದರು.