
ಕಲಬುರಗಿ (ಏ.16): ಈಚೆಗೆ ಕ್ಯಾಬಿನೆಟ್‌ಗೆ ಸಲ್ಲಿಕೆಯಾಗಿದ್ದು ಜಾತಿ ಗಣತಿ ಅಲ್ಲವೇ ಅಲ್ಲ, ಅದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯಾಗಿದೆ, ಜಾತಿ ಗಣತಿ ಎಂದು ವಿಷಯದ ಚರ್ಚೆ ಸಾಗಿದೆ. ಇದಕ್ಕೆ ನಾನು ಏನನ್ನೂ ಹೇಳೋದಿಲ್ಲವೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅದು ಜಾತಿ ಗಣತಿ ಅಂತ ಯಾರು ಹೇಳಿದ್ರೊ ಗೊತ್ತಿಲ್ಲ. ಜಾತಿ ಗಣತಿ ಅಂದ್ರೆ ಕೋರ್ಟ್‌ನಲ್ಲಿ ನಿಲ್ಲುತ್ತಾ? ಜಾತಿ ಗಣತಿ ಕೇಂದ್ರ ಸರ್ಕಾರ ಮಾಡುತ್ತೆ. ಇಲ್ಲವೇ ಜನಗಣತಿ ಮಾಡುವ ಸಂಬಂಧಿತ ಇಲಾಖೆ ಮಾಡುತ್ತೆ ಎಂದರು.
ಈಗ ಮಂಡನೆಯಾಗಿರುವ ಸಮೀಕ್ಷೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ. ಹಿಂದುಳಿದ ವರ್ಗಗಳ ಆಯೋಗ ಎಲ್ಲಾ ರಾಜ್ಯಗಳಲ್ಲೂ ಇಲ್ಲ. ಒಂದೆರಡು ರಾಜ್ಯಗಳಲ್ಲಿ ಮಾತ್ರ ಇದೆ. ಅವರ ಈ ಸಮೀಕ್ಷೆಯಿಂದ ನೀತಿ ನಿರೂಪಣೆ ಮಾಡಬಹುದು, ಯೋಜನೆಗಳನ್ನು ರೂಪಿಸಬಹುದು ಎಂದರು. ಅವರು ಮಾಡಿರುವ ಈ ಸಮೀಕ್ಷೆ ವೈಜ್ಞಾನಿಕವಾಗಿ ಆಗಿದೆಯೋ ಅವೈಜ್ಞಾನಿಕವಾಗಿ ಆಗಿದೆಯೋ ಚರ್ಚೆಗೆ ಬರಲಿ.ಏ.17ರಂದು ಹಿಂದುಳಿದ ವರ್ಗಗಳ ಆಯೋಗದವರು, ಇಲಾಖೆಯವರು ಬಂದು ಸಚಿವ ಸಂಪುಟದಲ್ಲೇ ತಮ್ಮ ಸಮೀಕ್ಷೆಯನ್ನ ವಿವರಿಸೋದಾಗಿ ಹೇಳಿದ್ದಾರೆ.
ಅದಾದ ನಂತರ ನೋಡೋಣ ಎಂದರು. ಈ ಸಮೀಕ್ಷೆ ಮಾಡಿದ ತಕ್ಷಣ ಕಲ್ಲಲ್ಲಿ ಕೆತ್ತಿದ್ದಾರಂತಲ್ಲ, ಇದನ್ನು ಅನುಷ್ಠಾನಕ್ಕೆ ತರ್ತಿವಿ ಅಂತ ಹೇಳಿಲ್ಲವಲ್ಲ. ಅವರು ಸಮೀಕ್ಷೆಗೆ ದತ್ತಾಂಶ ಹೇಗೆ ತಗೊಂಡಿದ್ದಾರೆ? ಯಾಕೆ ತಗೊಂಡಿದ್ದಾರೆ? ಅದರಲ್ಲಿ ಅಡಗಿರುವ ಅಂಕಿ ಅಂಶ ಏನಿದೆ? ಪರಿಣಾಮ ಏನಾಗುತ್ತೆ? ಎಲ್ಲವೂ ಚರ್ಚೆ ಆಗಲಿ. ವೈಜ್ಞಾನಿಕವೋ, ಅವೈಜ್ಞಾನಿಕವೋ ಎನ್ನುವುದೂ ಚರ್ಚೆ ಮಾಡೋಣವೆಂದರು. ಕ್ಯಾಬಿನೆಟ್‌ನಲ್ಲಿ ಬರಲಿ, ಅಧಿವೇಶನದಲ್ಲಿ ಚರ್ಚೆ ಆಗಲಿ. ಸಾರ್ವಜನಿಕವಾಗಿ ಚರ್ಚೆ ಆಗಲಿ, ಆ ನಂತರ ನೋಡೋಣ. ಕೂಸು ಹುಟ್ಟುವ ಮುನ್ನವೇ ಗಂಡೋ, ಹೆಣ್ಣೋ ಅಂದ್ರೆ ಹೇಗೆ? ಎಂದು ಸಚಿವರು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಸಂಕಲ್ಪ: ಬಿ.ವೈ.ವಿಜಯೇಂದ್ರ
ತಮಗೂ ಇನ್ನೂ ನಿನ್ನೆಯೇ ಸಮೀಕ್ಷೆಯ ವರದಿ ಬಂದು ತಲುಪಿದೆ ಎಂದ ಅವರು ವರದಿ ಓದುತ್ತೇವೆ. ಅಲ್ಲಿನ ಸಂಗತಿಗಳನ್ನು ತಿಳಿದುಕೊಳ್ಳುತ್ತೇವೆ. ನಂತರ ಅಭಿಪ್ರಾಯ ಹೇಳುತ್ತೇವೆಂದರು. ಸಚಿವ ಡಾ.ಶರಣಪ್ರಕಾಶ ಪಾಟೀಲರೂ ಈ ಬಗ್ಗೆ ದನಿಗೂಡಿಸುತ್ತ ಜಾತಿ ಗಣತಿಯಂತಲ್ಲ, ಸಾಮಾಜಿಕ ಆರ್ಥಿಕ ಸಮೀಕ್ಷೆಯಾಗಿದೆ. ಅದನ್ನು ಅಧ್ಯಯನ ಮಾಡಿ ಹೇಳಿಕೆ ಕೊಡುತ್ತೇವೆಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.