ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲಾ ಶೂದ್ರರು. ಶೂದ್ರರು ಓಂ ನಮಃ ಶಿವಾಯ ಎಂದು ಹೇಳಿದರೆ ನಾಲಿಗೆ ಕತ್ತರಿಸುತ್ತಿದ್ದರು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಹಾಸನ (ಏ.14): ನಮ್ಮ ದೇಶದಲ್ಲಿ ಬ್ರಾಹ್ಮಣ ಸಮುದಾಯವನ್ನು ಹೊರತುಪಡಿಸಿ ಉಳಿದ ಎಲ್ಲ ಜಾತಿ, ವರ್ಗದವರು ಶೂದ್ರರಾಗಿದ್ದಾರೆ. ಶೂದ್ರ ಕುಲಕ್ಕೆ ಸೇರಿದವರು ಏನಾದರೂ ಓಂ ನಮಃ ಶಿವಾಯ ಎಂದು ಹೇಳಿದರೆ ನಾಲಿಗೆ ಕತ್ತರಿಸುತ್ತಿದ್ದರು. ಹೀಗಾಗಿಯೇ ಅಂಬೇಡ್ಕರ್ ಅವರು ತಾವು ಹಿಂದೂವಾಗಿ ಸಾಯುವುದಿಲ್ಲ ಎಂದಿದ್ದರು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಹಾಸನದಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಹೊರತು ಪಡಿಸಿ ಉಳಿದ ಎಲ್ಲಾ ಸಮುದಾಯ ಶೂದ್ರ ಸಮುದಾಯದವರು. ಸಂವಿಂಧಾನ ಬದಲಾವಣೆ ಮಾಡಬೇಕು ಅನ್ನೊ ಜನರ ಮಧ್ಯೆ ನಾವಿದ್ದೇವೆ. ಅಂಬೇಡ್ಕರ್ ಒಂದು ವೇಳೆ ಕೆಳ ವರ್ಗದವರಿಗೆ ಮೀಸಲಾತಿ ಕೊಡದೇ ಹೋಗಿದ್ದರೆ ನಾವ್ಯಾರು ಬಿಳಿ ಬಟ್ಟೆ ಹಾಕಲು ಅಗುತ್ತಿರಲಿಲ್ಲ. ನಾನು ಮಾತಾಡಿದರೆ ರಾಜಕೀಯ ಅಂತಾರೆ, ಆದರೂ ಇದನ್ನು ನಾನು ಹೇಳಲೇಬೇಕು. ನಾವೆಲ್ಲಾ ಹಿಂದೂಗಳಲ್ವ ನೀವೂ ಮಾತ್ರ ಹಿಂದುಗಳಾ? ನಾವೆಲ್ಲಾ ಅವರಗಿಂತ ಪ್ರಖರ ಹಿಂದೂಗಳು ಎಂದು ವಾಗ್ದಾಳಿ ಮಾಡಿದರು.
ನಾವೆಲ್ಲಾ ಖಟ್ಟರ್ ಹಿಂದೂಗಳು. ನೀವು ಹೇಳುವ ಪ್ರಕಾರ ನಾವೆಲ್ಲಾ ಹಿಂದೂಗಳಲ್ಲ ಎಂದಾದರೆ ನಾವೆಲ್ಲಾ ಯಾರು ಒಂದು ಸರ್ಟಿಫಿಕೇಟ್ ಕೊಡಿ. ಮಹಾತ್ಮಾ ಗಾಂಧಿಯೂ ಹಿಂದೂನೆ, ಗೂಡ್ಸೆನೂ ಹಿಂದೂನೆ. ನಾವು ಮಹಾತ್ಮಾ ಗಾಂಧಿ ಹಿಂದುತ್ವದವರು, ಅವರೆಲ್ಲಾ ಮಹಾತ್ಮಾ ಗಾಂಧಿಯನ್ನು ಕೊಂದ ಗೂಡ್ಸೆಯನ್ನು ಅನುಸರಿಸುವ ಹಿಂದೂಗಳು. ಅಂಬೇಡ್ಕರ್ ಸುಮ್ಮ ಸುಮ್ಮನೇ ಹೇಳ್ತಾರಾ? ನಾನು ಹಿಂದೂ ಆಗಿ ಸಾಯಲ್ಲ ಅಂತಾ. ಹಿಂದುತ್ವದ ಹೆಸರಲ್ಲಿ ಶೋಷಣೆ ಮಾಡೋದನ್ನ ಅವರು ಸಹಿಸಲಿಲ್ಲ ಎಂದು ಇತಿಹಾಸದ ಮಾಹಿತಿ ತಿಳಿಸಿದರು.
ಇದನ್ನೂ ಓದಿ: Karnataka News Live: ವಕ್ಫ್ ಸರಿಯಾಗಿ ಬಳಸಿದ್ದರೆ, ಮುಸ್ಲಿಂ ಹುಡುಗರು ಪಂಚರ್ ಹಾಕುವ ಸ್ಥಿತಿ ಬರುತ್ತಿರಲಿಲ್ಲ!
ಅಂದಿನ ಕಾಲದಲ್ಲಿ ಬ್ರಾಹ್ಮಣರನ್ನು ಬಿಟ್ಟು ಬೇರೆ ಶೂದ್ರ ವರ್ಗದವರು 'ಓಂ ನಮಃ ಶಿವಾಯ' ಎಂದು ಹೇಳಿದರೆ ನಾಲಿಗೆ ಕತ್ತರಿಸುತ್ತಿದ್ದರು. ಶಿವನ ಹೆಸರು ಶೂದ್ರರಾದವರ ನಾಲಿಗೆಯಲ್ಲಿ ಹೇಳಿದರೆ ಶಿವನ ಹೆಸರು ಮಲಿನ ಅಂತ ನಾಲಿಗೆ ಕತ್ತರಿಸುತ್ತಿದ್ದಂತಹ ಕಾಲವಿತ್ತು. ಇದೀಗ ಸನಾತನಿಗಳಿಗೆ ಸರಿ ಬುದ್ದಿ ಹೇಳದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ನಮ್ಮ ಪೂರ್ವಜರು ನಮಗೆ ಬಿಟ್ಟು ಹೋಗಿರೋದನ್ನ, ನಮ್ಮ ಹೊಸಪೀಳಿಗೆಯನ್ನ ಇನ್ನೊಬ್ಬರ ಗುಲಾಮಗಿರಿಗೆ ತಳ್ಳೋ ಕೆಲಸ ಮಾಡಬಾರದು ಎಂದು ಸಚಿವ ರಾಜಣ್ಣ ಹೇಳಿದರು.
ಕಾಂಗ್ರೆಸ್ ಸಮಾಜ ಒಡೆಯುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರದ ಬಗ್ಗೆ ಮಾತನಾಡಿ, ನಾವು ಯಾವ ಸಮಾಜ ಒಡೆದಿದ್ದೇವೆ? ಹಿಂದೂ ಸಮಾಜದ ಮತಕ್ಕಾಗಿ ಬಿಜೆಪಿಯವರು ಹೇಳ್ತಾರೆ. ಅಂಬೇಡ್ಕರ್ ಸಾಯುವಾಗ ಏನು ಹೇಳಿದ್ದರು? ನಾನು ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಲಿಲ್ಲವಾ, ಏಕೆ ಈ ರೀತಿ ಹೇಳಿದ್ದರು? ಹಿಂದೂ ಹೆಸರಿನಲ್ಲಿ ಏನೆಲ್ಲಾ ಮೂಢನಂಬಿಕೆಗಳು, ದಬ್ಬಾಳಿಕೆಗಳು, ಅಸ್ಕೃಶ್ಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದ ಬೆಸತ್ತು ನಾನು ಹಿಂದೂವಾಗಿ ಸಾಯಲ್ಲ ಎಂದು ಬೌದ್ಧ ಧರ್ಮಕ್ಕೆ ಹೋದರು. ಆ ಹಿಂದೂ ಧರ್ಮ ಬೇಕಾ ನಮಗೆ? ಅಂಬೇಡ್ಕರ್ ಪ್ರತಿಪಾದನೆ ಮಾಡಿದ ಹಿಂದೂ ಧರ್ಮ ಬೇಕಾ? ನಾವು ಎಲ್ಲಾ ಹಿಂದೂಗಳೇ, ನಮ್ಮದು ಗಾಂಧೀಜಿ ಪ್ರತಿಪಾದನೆ ಮಾಡಿದ ಹಿಂದುತ್ವ ಎಂದು ಹೇಳಿದರು.
ಇದನ್ನೂ ಓದಿ: ಅಂಬೇಡ್ಕರ್ ಕನಸನ್ನು ರಾಜ್ಯದಲ್ಲಿ ನಾವು ನನಸು ಮಾಡುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ
ನಾವು ಮಾತನಾಡುವುದರಲ್ಲಿ ರಾಜಕೀಯ ಲಾಭ, ನಷ್ಟದ ಪ್ರಶ್ನೆ ಬರೋದಿಲ್ಲ. ಯಾರು ಅಸಹಾಯಕರು, ಧ್ವನಿ ಇಲ್ಲದವರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಅಷ್ಟೇ. ಯಾವ ಜನಾಕ್ರೋಶ ಇದೆ. ಮನ್‌ಮೋಹನ್ ಸಿಂಗ್ ಇದ್ದಾಗ, ಒಂದು ಡಾಲರ್‌ಗೆ ಎಷ್ಟು ರೂಪಾಯಿ ಇತ್ತು ಇವತ್ತು ಎಷ್ಟಿದೆ. ಅವತ್ತು ಡಿಸೇಲ್, ಪೆಟ್ರೋಲ್, ಗ್ಯಾಸ್, ಯಾವುದು ಬೇಡ ರೈತರು ಉಪಯೋಗಿಸುವ ಗೊಬ್ಬರದ ಬೆಲೆ ಎಷ್ಟಿತ್ತು? ಇದಕ್ಕೆಲ್ಲಾ ಯಾರೂ ಕಾರಣ. ಸುಮ್ಮನೆ ದೂಷಣೆ ಮಾಡುವುದಕ್ಕೋಸ್ಕರ ದೂಷಣೆ ಮಾಡಿದರೆ ಉತ್ತರ ಹೇಳಲು ಆಗಲ್ಲ ಎಂದು ರಾಜಣ್ಣ ವಾಗ್ದಾಳಿ ಮಾಡಿದರು.