ಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಯ ಮನೆಗೆ ಬಾಗಿಲಿಗೆ: ಸಂಸದ ಮುನಿಸ್ವಾಮಿ

By Kannadaprabha News  |  First Published Jan 13, 2024, 9:23 PM IST

ವಿಕಸಿತ ಭಾರತ ಸಂಕಲ್ಪಯಾತ್ರೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಜಾರಿಗೊಳಿಸಿರುವ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ವ್ಯಕ್ತಿಯ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. 


ಕೆಜಿಎಫ್ (ಜ.12): ವಿಕಸಿತ ಭಾರತ ಸಂಕಲ್ಪಯಾತ್ರೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಜಾರಿಗೊಳಿಸಿರುವ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ವ್ಯಕ್ತಿಯ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ನಗರದ ಉರಿಗಾಂಪೇಟೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕಲ್ಪ ಯಾತ್ರೆಯಲ್ಲಿ ಸೇರಿಸಲಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ವ್ಯಾನ್‌ಗಳು ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ ತೆರಳುವ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದರು.

೨೦೨೩ರ ನ.೧೫ ರಂದು ಜಾರ್ಖಂಡ್ ರಾಜ್ಯದ ಖುಂಟಿಯಿಂದ ಪ್ರಾರಂಭವಾದ ವಿಕಸಿತ ಭಾರತ್ ಸಂಕಲ್ಪ ಯಾತ್ರೆ ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಈ ಯಾತ್ರೆಯ ಮೂಲಕ ಕೇಂದ್ರ ಸರ್ಕಾರವು ಎಲ್ಲ ವರ್ಗಗಳ ಜನರನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಸಮರ್ಥರನ್ನಾಗಿ ಮಾಡಲು ವಿಶೇಷ ಒತ್ತು ನೀಡುತ್ತಿದೆ ಎಂದರು. ಕೆಜಿಎಫ್‌ಗೆ ೧೫ನೇ ಹಣಕಾಸು ಯೋಜನೆಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ೪೭ ಕೋಟಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೌಚಾಲಯ, ಕಸ ವಿಲೇವಾರಿ ಘಟಕ, ಸ್ವಚ್ಛ ಸಂಕೀರ್ಣ, ಸ್ವಚ್ಛ ವಾಹಿನಿಗಳ ಖರೀದಿಗಾಗಿ ೧೩ ಕೋಟಿ, ಪಿಎಂ ಆವಾಸ್ ಯೋಜನೆಯಡಿ ಬಡವರಿಗಾಗಿ ಕೆಜಿಎಫ್ ನಗರದಲ್ಲಿ ೪೫೦ ಮನೆಗಳ ನಿರ್ಮಾಣ, ಪಿಎಂ ಸ್ವನಿಧಿ ಯೋಜನೆಯಡಿ ೨೮೦೦ ಮಂದಿಗೆ ಸಾಲ ನೀಡಲಾಗಿದೆ.

Latest Videos

undefined

ಕೊಲೆ ಯತ್ನದ ಆರೋಪಿ ಆಸ್ಪತ್ರೆಯಿಂದ ಎಸ್ಕೇಪ್: ತಪ್ಪಿಸಿಕೊಳ್ಳಲು ಪೊಲೀಸರ ಮೇಲೂ ಮಚ್ಚು ಬೀಸಿದ್ದ ಪೂರ್ಣೇಶ್!

ಪಿಎಂ ವಿಶ್ವಕರ್ಮ ಯೋಜನೆಯಡಿ ನಗರದ ಸುಮಾರು ೩೮೦೦ ಮಂದಿ ಅರ್ಜಿಗಳನ್ನು ಸಲ್ಲಿಸಿದ್ದು, ಮೊದಲ ಬ್ಯಾಚ್‌ಗೆ ಹಲವಾರು ಜನರು ಆಯ್ಕೆಯಾಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂದರು. ಅಮೃತ್ ಸಿಟಿ ಯೋಜನೆಯಡಿ ೫೦ ಕೋಟಿ, ನಗರದಾದ್ಯಂತ ೩ ಸಾವಿರ ಬೀದಿ ದೀಪಗಳ ಅಳವಡಿಕೆ, ಕುಡಿಯುವ ನೀರು ಪೂರೈಕೆ, ಕೊರೋನಾ ವ್ಯಾಕ್ಸಿನ್, ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೇರಿಸಿರುವುದು, ರಸ್ತೆಗಳ ನಿರ್ಮಾಣ ಇತ್ಯಾದಿಗಳೆಲ್ಲವನ್ನೂ ಯಾವುದೇ ಧರ್ಮ, ಮತ, ಪಂಥ ಎನ್ನುವ ಬೇಧಭಾವ ಮಾಡದೇ ಸಮಾಜದ ಎಲ್ಲ ವರ್ಗದ ಜನರ ಅನುಕೂಲಕ್ಕೆ ಮಾಡಲಾಗಿದೆ.

ಕುಸಿಯುವ ಆತಂಕದಲ್ಲಿ ಕೊಡಗಿನ ಕಿರಂಗದೂರು ಸರ್ಕಾರಿ ಶಾಲೆ: 42ಕ್ಕೆ ಇಳಿದ ವಿದ್ಯಾರ್ಥಿಗಳ ಸಂಖ್ಯೆ!

ಅಧಿಕಾರಿಗಳಾದವರು ಜನರ ಪರವಾಗಿ ಕೆಲಸ ಮಾಡಿದಾಗ ಮಾತ್ರ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಜನರ ಪರವಾಗಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದಾಗ ಜನರೇ ನಿಮ್ಮ ಪರವಾಗಿ ನಿಲ್ಲುತ್ತಾರೆ. ಆದ್ದರಿಂದ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಬರುವ ವಿವಿಧ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದರು. ಯಾತ್ರೆ ಮೂಲಕ ರೈತರನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸಲು ಕೇಂದ್ರ ಸರ್ಕಾರ ಧಣಿವರಿಯದ ಪ್ರಯತ್ನಗಳನ್ನು ಮಾಡುತ್ತಿದೆ. ಕೃಷಿ ಚಟುವಟಿಕೆಗಳಿಗೆ ಆಧುನಿಕ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಕಮಲ್‌ನಾಥ್, ನಗರಸಭೆ ಸದಸ್ಯರಾದ ರಾಮುಲಮ್ಮ ಗಂಟ್ಲಪ್ಪ, ವೇಣಿ ಪಾಂಡಿಯನ್, ನಗರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಸರವಣ, ಗಾಂಧಿ, ನಗರಸಭೆ ಅಧಿಕಾರಿ ಶಿವಕುಮಾರ್ ಇದ್ದರು.

click me!