
ಲಕ್ನೋ[ಫೆ.25]: ಒಂದು ದಿನದ ಹಿಂದಷ್ಟೇ ಫೇಸ್ ಬುಕ್ ಪೋಸ್ಟ್ ಮೂಲಕ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ನೀಡುವ ಸುಳಿವು ನೀಡಿದ್ದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿಚಾರವಾಗಿ ಚರ್ಚೆಗಳು ಹೆಚ್ಚಾಗಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಉತ್ತರ ಪ್ರದೇಶದ ಮುರ್ದಾಬಾದ್ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಬ್ಯಾನರ್ ಗಳನ್ನು ಹಾಕಿದ್ದು, ಈ ಚರ್ಚೆಗೆ ಮತ್ತಷ್ಟು ತೀವ್ರಗೊಳಿಸಿದೆ. ಈ ಪೋಸ್ಟರ್ ಗಳಲ್ಲಿ 'ರಾಬರ್ಟ್ ವಾದ್ರಾಜೀ, ಮುರ್ದಾಬಾದ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿಮಗೆ ಹಾರ್ದಿಕ ಸ್ವಾಗತ' ಎಂದು ಬರೆಯಲಾಗಿದೆ.
ಇನ್ನು ಭಾನುವಾರದಂದು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದ ವಾದ್ರಾ ‘ವರ್ಷ, ತಿಂಗಳುಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶದಲ್ಲಿ ಪ್ರಚಾರ ಹಾಗೂ ಕೆಲಸ ಮಾಡಿದ ಬಳಿಕ ಜನರಿಗೆ ಹೆಚ್ಚಿನದನ್ನು ಮಾಡಬೇಕು ಎಂದು ಅನಿಸುತ್ತಿದೆ. ನನ್ನಿಂದಾಗುವ ಸಣ್ಣ ಬದಲಾವಣೆ ಮಾಡಬೇಕು ಎನಿಸುತ್ತಿದೆ. ಇಷ್ಟುವರ್ಷಗಳ ಕಾಲ ಗಳಿಸಿರುವ ಅನುಭವ ಹಾಗೂ ಕಲಿಕೆ ವ್ಯರ್ಥವಾಗಬಾರದು. ಅದನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಬೇಕು’ ಎಂದಿದ್ದರು.
>ಇಷ್ಟೇ ಅಲ್ಲದೇ 'ನನ್ನ ವಿರುದ್ಧದ ಆರೋಪಗಳೆಲ್ಲಾ ಮುಗಿದ ಬಳಿಕ ಜನ ಸೇವೆಗಾಗಿ ಹೆಚ್ಚಿನ ಪಾತ್ರ ವಹಿಸಬೇಕು ಎಂಬ ಭಾವನೆ ಇದೆ’ ಎಂದು ಬರೆದುಕೊಂಡಿದ್ದರು. ಈ ಮೂಲಕ ಚುನಾವಣೆಗೆ ತಾನು ಎಂಟ್ರಿ ನೀಡುತ್ತೇನೆಂಬ ಸುಳಿವು ನೀಡಿದ್ದರು.
ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಕ ಹಾಗೂ ರಾಬರ್ಟ್ ವಾದ್ರಾ ಪತ್ನಿ ಸಕ್ರಿಯ ಲೋಕಸಭಾ ಚುನಾವಣೆಗೆ ಎಂಟ್ರಿ ನೀಡಿದ್ದರು. ಪ್ರಿಯಾಂಕಾರನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದು, ಪಕ್ಷದ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಿತ್ತು. ಅತ್ತ ಪ್ರಿಯಾಂಕಾ ಗಾಂಧಿ ಕೂಡಾ ಈ ಜವಾಬ್ದಾರಿ ವಹಿಸಿಕೊಂಡ ಮರುದಿನವೇ ಸಭೆಗಳನ್ನು ನಡೆಸಿ ಲೋಕಸಭಾ ಚುನಾವಣೆಯ ಗೆಲುವಿಗೆ ರಣತಂತ್ರ ಹೆಣೆಯುವಲ್ಲಿ ವ್ಯಸ್ತರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.