2028ಕ್ಕೂ ಗೆಲ್ತೀವಿ, ನಾನು ಸಿಎಂ ಆಗಲ್ಲ: ಸಿದ್ದರಾಮಯ್ಯ!

Kannadaprabha News   | Kannada Prabha
Published : Aug 23, 2025, 05:39 AM IST
Karnataka CM Siddaramaiah (Photo/ANI)

ಸಾರಾಂಶ

ಮುಂದಿನ (2028ರ) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ, ನಾನು ಮುಖ್ಯಮಂತ್ರಿಯಾಗುವುದಿಲ್ಲ! ಹೀಗಂತ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಘೋಷಿಸಿದ್ದಾರೆ.

ವಿಧಾನಸಭೆ : ಮುಂದಿನ (2028ರ) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ, ನಾನು ಮುಖ್ಯಮಂತ್ರಿಯಾಗುವುದಿಲ್ಲ! ಹೀಗಂತ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಘೋಷಿಸಿದ್ದಾರೆ.

ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ನೀಡುವ ವೇಳೆ ಶುಕ್ರವಾರ ಮಾತನಾಡಿದ ಅವರು, ‘2028ರಲ್ಲಿ ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಆದರೆ, ಮುಂದಿನ ಅವಧಿಗೆ ನಾನು ಮುಖ್ಯಮಂತ್ರಿ ಆಗುವುದಿಲ್ಲ. ಇನ್ನು ಜೆಡಿಎಸ್‌ 2-3 ಸ್ಥಾನ ಬಂದರೆ ಅದೇ ಹೆಚ್ಚು. ಹೀಗಾಗಿ ಜೆಡಿಎಸ್‌ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಲಿ’ ಎಂದು ಲೇವಡಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯಾಗಲಿ, ಜೆಡಿಎಸ್‌ ಆಗಲಿ, ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಯತ್ನಾಳ್‌ ಅವರಾಗಲಿ ಅಧಿಕಾರಕ್ಕೆ ಬರುವುದಿಲ್ಲ. ಯತ್ನಾಳ್‌ ಹೊಸ ಪಕ್ಷ ಮಾಡಿದರೆ ಆ ಸಾಧ್ಯತೆ ಇದ್ದರೂ ಇರಬಹುದು ಎಂದು ಇದೇ ವೇಳೆ ಕಾಲೆಳೆದರು.

ಜೆಡಿಎಸ್‌ನವರು ಅಸ್ಪೃಶ್ಯರ ರೀತಿ ಆಗಿದ್ದೀರಿ :ಬಹುಮತ ಕೊರತೆ ಉಂಟಾದರೆ ನಮ್ಮನ್ನು ಕೇಳಲ್ಲವೇ ಎಂಬ ಜೆಡಿಎಸ್‌ ನಾಯಕ ಸುರೇಶ್‌ ಬಾಬು ಪ್ರಶ್ನೆಗೆ, ‘ನೀವು ಬಿಜೆಪಿ ಜತೆ ಯಾವಾಗ ಸೇರಿಕೊಂಡರೋ ಆಗ ನೀವು ಒಂಥರಾ ಅಸ್ಪೃಶ್ಯರ ರೀತಿ ಆಗಿದ್ದೀರಿ. ನಿಮಗೆ ಯಾವುದೇ ಸಿದ್ಧಾಂತವಿಲ್ಲ. ಜೆಡಿಎಸ್‌ ಪಕ್ಷ ಕಟ್ಟಿದವನು, ಅಧ್ಯಕ್ಷನಾದವನು ನಾನು. ಆ ಪಕ್ಷದಿಂದ ನಾನು ಅಧ್ಯಕ್ಷನಾಗಿದ್ದಾಗ 59 ಸ್ಥಾನ ಗೆದ್ದಿದ್ದೆವು. ಈಗ 18ಕ್ಕೆ ಬಂದಿದ್ದೀರಿ, ಮುಂದಿನ ಸಲ 2-3 ಅಷ್ಟೇ. ನೀವು ಬಿಜೆಪಿ ಜತೆ ವಿಲೀನ ಆದರೂ ಆಗಬಹುದು. ವಿಲೀನಕ್ಕೆ ದೇವೇಗೌಡರಿಗೆ ಸಲಹೆ ನೀಡಿ’ ಎಂದು ಸಿದ್ದರಾಮಯ್ಯ ಕಿಚಾಯಿಸಿದರು. 

ಉಚ್ಚಾಟಿತರು ಸಿಎಂ ಆಗ್ತಾರೆ:

ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ನನ್ನನ್ನು ಉಚ್ಚಾಟಿತ ಎನ್ನುತ್ತಿದ್ದೀರಿ. ನಿಮ್ಮನ್ನೂ ದೇವೇಗೌಡರು ಹಿಂದೆ ಉಚ್ಚಾಟನೆ ಮಾಡಿದ್ದರು. ಉಚ್ಚಾಟನೆ ಮಾಡಿದ ಬಳಿಕ ನೀವು ಮುಖ್ಯಮಂತ್ರಿ ಆಗಿದ್ದೀರಿ. ನಾನೂ ಸಿಎಂ ಆಗುತ್ತೇನೆ. ನಿಮ್ಮದು ಕೊನೇ ಅವಧಿ. ಮುಂದಿನ ಬಾರಿಗೆ ನೀವು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿಬಿಟ್ಟಿದ್ದೀರಿ. ಹೀಗಾಗಿ ನಿಮ್ಮ ಮತ ಪಡೆದು ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಕಾಲೆಳೆದರು.

ನಾನು ಮುಂದಿನ ಅವಧಿಗೆ ಸಿಎಂ ಆಗಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೌದು. ನಾನು ಮುಂದಿನ ಬಾರಿ ಮುಖ್ಯಮಂತ್ರಿ ಆಗುವುದಿಲ್ಲ. ಹಾಗಂತ ನೀವೂ ಆಗಲ್ಲ. ನಮ್ಮ ಮತಗಳು ನಿಮಗೆ ಬರಲು ಸಾಧ್ಯವೇ ಇಲ್ಲ. ನೀವು ಎಸ್ಸಿ,ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರ ವಿರೋಧಿಗಳು ಎಂದರು.

ಆಗ ಯತ್ನಾಳ್‌, ನಾನ್‌ ಅಡ್ಜಸ್ಟ್‌ಮೆಂಟ್‌ ರಾಜಕೀಯ ಪಕ್ಷ ಮಾಡುತ್ತೇನೆ. ನಾನು ಎಸ್ಸಿ,ಎಸ್ಟಿ, ಒಬಿಸಿ ವಿರೋಧಿಯಲ್ಲ. ದೇಶದ್ರೋಹಿಗಳ ವಿರೋಧಿ. ಟೋಪಿ ಹಾಕಿದವರ ಓಟು ಬೇಡ ಎಂದಿರುವುದು ನಿಜ. ಅದನ್ನು ಈಗಲೂ ಹೇಳುತ್ತೇನೆ ಎಂದರು.

ಜನ ನಿರ್ಧಾರ ಮಾಡ್ತಾರೆ-ಅಶೋಕ್‌:

ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಕಳೆದ 30 ವರ್ಷದಲ್ಲಿ ಯಾರೊಬ್ಬರ ಸರ್ಕಾರವೂ ಪುನರ್‌ ಆಯ್ಕೆಯಾಗಿಲ್ಲ. ಹೀಗಾಗಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಅದನ್ನು ಜನ ನಿರ್ಧಾರ ಮಾಡುತ್ತಾರೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು