
ಬೆಂಗಳೂರು (ಮೇ.28): ರಾಜ್ಯದ ಹೆಮ್ಮೆಯ ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಘಟಕ ಆಂಧ್ರಕ್ಕೆ ಸ್ಥಳಾಂತರ ಬೇಡಿಕೆ ವಿಚಾರವಾಗಿ ನಮ್ಮ ರಾಜ್ಯದ ಸಂಸದರು, ಕೇಂದ್ರದ ಸಚಿವರು ಧ್ವನಿ ಎತ್ತಬೇಕು. ನಾವು ಯಾವುದೇ ಕಾರಣಕ್ಕೂ ಎಚ್‌ಎಎಲ್ ಬಿಟ್ಟು ಕೊಡುವುದಿಲ್ಲ. ಅವುಗಳನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್‌ಎಎಲ್ ಅನ್ನು ಯಾವ ಬಿಜೆಪಿ ಸರ್ಕಾರವೂ ನೀಡಿದ್ದಲ್ಲ. ಮಾಜಿ ಪ್ರಧಾನಮಂತ್ರಿ ಜವಹಾರ್ ಲಾಲ್ ನೆಹರು ಅವರು ಈ ನಾಡಿನ ಸಾಮರ್ಥ್ಯ ಗಮನಿಸಿ ಬೆಂಗಳೂರಿನಲ್ಲಿ ಎಚ್‌ಎಎಲ್ ಘಟಕ ಸ್ಥಾಪಿಸಿದ್ದಾರೆ. ಬೆಂಗಳೂರಿನ ಯಲಹಂಕ ಮತ್ತು ಎಚ್‌ಎಎಲ್‌ನಲ್ಲಿ ಈಗಾಗಲೇ ವಾಯುಪಡೆಯ ನಿಲ್ದಾಣಗಳಿವೆ. ಹೀಗಾಗಿ, ಎಚ್‌ಎಎಲ್ ನಮ್ಮ ನಗರದಲ್ಲಿ ಮುಂದುವರೆಯಲು ಸೂಕ್ತ ವಾತಾವರಣ ಇದೆ ಎಂದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ರಾಜಕೀಯವಾಗಿ ಇಡುವ ಬೇಡಿಕೆಗೆ ನಮ್ಮ ಆಕ್ಷೇಪ ಇಲ್ಲ. ಅವರು ಹೊಸದಾಗಿ ಸ್ಥಾಪಿಸಿಕೊಳ್ಳಲಿ. ಆದರೆ, ನಮ್ಮ ರಾಜ್ಯದಲ್ಲಿ ಮೊದಲಿನಿಂದಲೂ ಇರುವುದನ್ನು ನಾವು ಉಳಿಸಿಕೊಳ್ಳುತ್ತೇವೆ. ಎಚ್‌ಎಎಲ್ ಸೇರಿ ನವರತ್ನ ಕಂಪನಿಗಳು ನಮ್ಮ ಸ್ವಾಭಿಮಾನವಾಗಿವೆ. ರಾಜ್ಯದ ಯಾವುದೇ ಕಂಪನಿಯನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟು ಕೊಡುವುದಿಲ್ಲ. ಅವುಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಎಚ್‌ಡಿಕೆ ರಾಮನಗರಕ್ಕೆ ಏಕೆ ಬಂದ್ರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದರು? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಟೀಕಾಪ್ರಹಾರ ನಡೆಸಿದ್ದಾರೆ. ಜಿಲ್ಲೆಯ ಕೊಲ್ಹಾರದಲ್ಲಿ ಶುಕ್ರವಾರ ಡಿ.ಕೆ.ಶಿವಕುಮಾರ್, ರಾಮನಗರದ ನಾಮಫಲಕಕ್ಕೆ ಚಿನ್ನದ ತಗಡು ಹೊಡೆಯಲಾಗುತ್ತದೆಯೇ ಎನ್ನುವ ಕುಮಾರಸ್ವಾಮಿ ಅವರ ಸರಣಿ ಟೀಕೆಗಳಿಗೆ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದರು? ಹಾಸನದಲ್ಲಿಯೇ ಏಕೆ ರಾಜಕೀಯ ಮಾಡಲಿಲ್ಲ?
ಮೊದಲು ಎಚ್.ಡಿ.ಕುಮಾರಸ್ವಾಮಿ ಎನ್ನುವ ಹೆಸರಿನಲ್ಲಿರುವ ಅವರ ಊರಿನ ಹೆಸರು ಹಾಗೂ ತಂದೆಯ ಹೆಸರನ್ನು ಏಕೆ ಇನ್ನು ಇಟ್ಟುಕೊಂಡಿದ್ದಾರೆ? ಮೊದಲು ಅದನ್ನು ಬದಲಾವಣೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ನಾವು ಬೆಂಗಳೂರು ಜಿಲ್ಲೆಯವರು. ಒಂದೊಂದು ಊರಿನ ಹೆಸರಿಗೆ ತನ್ನದೇ ಆದ ಇತಿಹಾಸವಿರುತ್ತದೆ. ಮದ್ರಾಸ್ ಅನ್ನು ಮತ್ತೆ ಏಕೆ ಚೆನ್ನೈ ಎಂದು ಕರೆದರು. ಗುಲ್ಬರ್ಗಾವನ್ನು ಕಲಬುರ್ಗಿ ಎಂದು ಏಕೆ ಮರುನಾಮಕರಣ ಮಾಡಲಾಗಿದೆ? ನಮಗೂ ನಮ್ಮದೇ ಆದಂತಹ ಆಸೆ ಇರುತ್ತದೆ. ಅವರಿಗೆ ಏನು ತೊಂದರೆಯಾಗಿದೆ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.