ಸಂಚಾರ ಸುಗಮಕ್ಕೆ ಮತ್ತೆ ಟೋಯಿಂಗ್ ಆರಂಭ: ಸಚಿವ ಡಾ.ಜಿ.ಪರಮೇಶ್ವರ್‌

Kannadaprabha News   | Kannada Prabha
Published : May 28, 2025, 04:30 AM IST
Dr G parameshwar

ಸಾರಾಂಶ

ಮೂರು ವರ್ಷಗಳ ಬಳಿಕ ರಾಜಧಾನಿಯಲ್ಲಿ ವಾಹನಗಳ ಟೋಯಿಂಗ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಧಿಕೃತವಾಗಿ ಮಂಗಳವಾರ ಘೋಷಿಸಿದ್ದಾರೆ.

ಬೆಂಗಳೂರು (ಮೇ.28): ಮೂರು ವರ್ಷಗಳ ಬಳಿಕ ರಾಜಧಾನಿಯಲ್ಲಿ ವಾಹನಗಳ ಟೋಯಿಂಗ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಧಿಕೃತವಾಗಿ ಮಂಗಳವಾರ ಘೋಷಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಪರಿಶೀಲನಾ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಂಚಾರ ಸುಗಮಕ್ಕೆ ಟೋಯಿಂಗ್ ಆರಂಭ ಅನಿರ್ವಾಯವಾಗಿದೆ ಎಂದರು.

ನಗರ ವ್ಯಾಪ್ತಿ ಎಲ್ಲೆಂದರಲ್ಲಿ ವಾಹನಗಳನ್ನು ಸಾರ್ವಜನಿಕರು ನಿಲ್ಲಿಸುತ್ತಿರುವುದು ಸಂಚಾರ ಸಮಸ್ಯೆಗೆ ಪ್ರಮುಖ ಕಾರಣಗಳಲ್ಲೊಂದ್ದಾಗಿದೆ. ಹೀಗಾಗಿ ಈ ಮೊದಲು ಸ್ಥಗಿತಗೊಳಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಟೋಯಿಂಗ್ ವಾಹನಗಳು ರಸ್ತೆಗಿಳಿಯಲಿವೆ ಎಂದು ಹೇಳಿದರು. ಮೊದಲು ವಾರ್ಷಿಕ 28 ಕೋಟಿ ರು.ಗೆ ಖಾಸಗಿ ಸಂಸ್ಥೆಗಳಿಗೆ ಟೋಯಿಂಗ್ ಹೊರಗುತ್ತಿಗೆ ನೀಡುತ್ತಿದ್ದೆವು. ಆ ಖಾಸಗಿ ಸಂಸ್ಥೆಯವರು ಸಂಚಾರ ಉಲ್ಲಂಘನೆ ಸಂಬಂಧ ವಾಹನಗಳನ್ನು ಟೋಯಿಂಗ್ ಮಾಡುವ ವೇಳೆ ಸಾರ್ವಜನಿಕರ ಜತೆ ಅನುಚಿತ ವರ್ತನೆ ಆರೋಪಗಳಿದ್ದವು. ಈ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ಈ ಸಲ ಪೊಲೀಸ್‌ ವಾಹನಗಳು: ಖಾಸಗಿಯವರ ಬದಲಿಗೆ ಪೊಲೀಸ್‌ ಇಲಾಖೆಯ ವಾಹನಗಳನ್ನೇ ಟೋಯಿಂಗ್‌ಗೆ ಬಳಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಪ್ರತಿ ಠಾಣಾ ಮಟ್ಟದಲ್ಲಿ ಟೋಯಿಂಗ್ ವಾಹನ ನೀಡಲಾಗುತ್ತದೆ. ಅಲ್ಲದೆ ಈ ಟೋಯಿಂಗ್‌ಗೆ ಕೆಲಸಕ್ಕೆ ಸಂಚಾರ ಪೊಲೀಸರ ನೆರವಿಗೆ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ನೋ ಪಾರ್ಕಿಂಗ್ ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಮನಬಂದಂತೆ ಎಳೆದಾಡಿ ಜಖಂಗೊಳಿಸುವುದಲ್ಲದೆ ವಾಹನ ಮಾಲಿಕರ ಜತೆ ದರ್ಪ ತೋರಿಸುತ್ತಾರೆ ಎಂದು ಟೋಯಿಂಗ್ ಸಿಬ್ಬಂದಿ ವಿರುದ್ಧ ಮೂರು ವರ್ಷಗಳ ಹಿಂದೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಈ ಜನಾಕ್ರೋಶಕ್ಕೆ ಮಣಿದು 2022ರ ಫೆಬ್ರವರಿಯಲ್ಲಿ ಟೋಯಿಂಗ್‌ಗೆ ಸರ್ಕಾರ ಬ್ರೇಕ್ ಹಾಕಿತ್ತು. ಈಗ ಸುಗಮ ಸಂಚಾರಕ್ಕೆ ಮತ್ತೆ ಟೋಯಿಂಗ್‌ಗೆ ಮರು ಚಾಲನೆ ನೀಡಲು ಸರ್ಕಾರವೇ ಭಾರಿ ಉತ್ಸುಕತೆ ತೋರಿದೆ. ಸಭೆಯಲ್ಲಿ ಡಿಜಿ-ಐಜಿಪಿ ಡಾ.ಎಂ.ಸಲೀಂ, ನಗರ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತರಾದ ಡಾ.ಚಂದ್ರಗುಪ್ತ, ವಿಕಾಸ್ ಕುಮಾರ್ ವಿಕಾಸ್, ಜಂಟಿ ಆಯುಕ್ತರಾದ ಎಂ.ಎನ್.ಅನುಚೇತ್ ಹಾಗೂ ಬಿ.ರಮೇಶ್ ಹಾಜರಿದ್ದರು.

ಟೋಯಿಂಗ್ ಪ್ರತಿಭಟಿಸಿದ್ದು ನೀವೇ ಅಲ್ಲವೇ?: ಬಿಜೆಪಿ ಸರ್ಕಾರದ ಅ‍ವಧಿಯಲ್ಲಿ ಟೋಯಿಂಗ್ ವ್ಯವಸ್ಥೆ ನಿರ್ವಹಣೆ ಸರಿಯಿಲ್ಲದ ಕಾರಣ ಸಮಸ್ಯೆಯಾಗಿತ್ತು. ಈಗ ನಾವು ನ್ಯೂನತೆಗಳನ್ನು ಸರಿಪಡಿಸಿ ಸೂಕ್ತವಾಗಿ ಜಾರಿಗೊಳಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು. ಮೂರು ವರ್ಷಗಳ ಹಿಂದೆ ಟೋಯಿಂಗ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಪ್ರಶ್ನಿಸಿದರು. ಆಗ ಲೋಪದೋಷ ಸರಿಪಡಿಸಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ವರ್ಷಾನುಗಟ್ಟಲೇ ಸಮಯ ತೆಗೆದುಕೊಂಡರೇ ಹೇಗೆ? ಚರಂಡಿ, ರಸ್ತೆ ಸರಿಪಡಿಸಿಲ್ಲವೆಂದರೆ ಬಿಬಿಎಂಪಿಯವರನ್ನೇ ಜನರು ಕೇಳೋದಿಲ್ಲ. ಆದರೆ ಟ್ರಾಫಿಕ್ ಸಮಸ್ಯೆಯಾದರೆ ಪೊಲೀಸರನ್ನೇ ಜನರು ಪ್ರಶ್ನಿಸೋದು ನೆನಪಿರಲಿ ಎಂದು ಅಧಿಕಾರಿಗಳಿಗೆ ಸಚಿವರು ಮಾತಿನ ಚಾಟಿ ಬೀಸಿದ್ದಾರೆ. ಸದ್ಯ ನಗರದಲ್ಲಿ 1.30 ಕೋಟಿ ವಾಹನಗಳಿದ್ದು, ಇನ್ನು ಈ ಸಂಖ್ಯೆ ಹೆಚ್ಚಾಗಲಿದೆ. ಪ್ರತಿ ದಿನ 3 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಕಳೆದ ಅಕ್ಟೋಬರ್‌ನಿಂದ 70 ಸಾವಿರ ಹೊಸ ವಾಹನಗಳ ನೋಂದಣಿ ಆಗಿವೆ. ಹೀಗಾಗಿ ಸಂಚಾರ ಸಮಸ್ಯೆಗೆ ಪರಿಹಾರ ಹುಡುಕದೆ ಹೋದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಎಸಿ ರೂಂ ಬಿಟ್ಟು ರಸ್ತೆಗೆ ಬನ್ನಿ: ಪಿಕ್ ಆವರ್‌ನಲ್ಲಿ ಡಿಸಿಪಿ, ಎಸಿಪಿಗಳು ಎಸಿ ಕಚೇರಿ ಬಿಟ್ಟು ರಸ್ತೆಗಿಳಿದು ಕೆಲಸ ಮಾಡುವಂತೆ ನೂರು ಸಲ ಹೇಳಿದರೂ ಕೇಳೋದಿಲ್ಲ. ಬೆಳಗ್ಗೆ 8 ರಿಂದ 11 ಹಾಗೂ ಸಂಜೆ 5 ರಿಂದ ರಾತ್ರಿ 9 ವರೆಗೆ ಸಮಯದಲ್ಲಿ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಆದರೆ ಸಂಚಾರ ನಿರ್ವಹಣೆಗೆ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಿ ಅಧಿಕಾರಿಗಳು ಆರಾಮ ಆಗಿರುತ್ತಾರೆ. ನೀವೇ (ಅಧಿಕಾರಿಗಳು) ಕೆಲಸ ಮಾಡಲ್ಲ ಅಂದರೇ ಸಮಸ್ಯೆ ಬಗೆ ಹರಿಯೋದು ಹೇಗೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ