
ಬೆಂಗಳೂರು (ಮೇ.28): ಅಕ್ರಮ ಬಾಂಗ್ಲಾದೇಶಿ ವಲಸಿಗರ ಮೇಲೆ ರಾಜ್ಯ ಸರ್ಕಾರ ಮತ್ತೊಂದು ಪ್ರಹಾರಕ್ಕೆ ಸಜ್ಜಾಗಿದೆ. ‘ಅಕ್ರಮ ಬಾಂಗ್ಲಾ ವಲಸಿಗರು ಸೇರಿದಂತೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಗಣತಿ ನಡೆಸಿ ತ್ವರಿತವಾಗಿ ವರದಿ ಸಲ್ಲಿಸಿ’ ಎಂದು ಪೊಲೀಸರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ. ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿ ಪ್ರಜೆಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಬಹಿರಂಗಪಡಿಸಲಾಗುತ್ತದೆ ಎಂದರು.
ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಕಾರ್ಮಿಕರಾಗಿದ್ದಾರೆ ಎಂಬ ಮಾಹಿತಿ ಇದೆ. ಅದೇ ರೀತಿ ಬೆಂಗಳೂರಿನ ಆನೇಕಲ್ ಸೇರಿ ಕೆಲ ಪ್ರದೇಶಗಳಲ್ಲಿ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆ. ಇನ್ನು ಡ್ರಗ್ಸ್ ದಂಧೆಯಲ್ಲಿ ಎರಡ್ಮೂರು ದೇಶದ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರತರಾಗಿದ್ದು, ಬೆಂಗಳೂರಿನ ಬಾಣಸವಾಡಿ ಹಾಗೂ ಹೆಣ್ಣೂರು ಭಾಗದಲ್ಲಿ ಆ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.
ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಪಾಕಿಸ್ತಾನ ಹೀಗೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿಯರ ಗಣತಿ ನಡೆಸುವಂತೆ ಸೂಚಿಸಲಾಗಿದ್ದು, ಎರಡು ತಿಂಗಳಲ್ಲಿ ಈ ಗಣತಿ ಪೂರ್ಣಗೊಳ್ಳಬಹುದು. ಆದರೆ ಶೀಘ್ರ ವರದಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಕಾಫಿ ತೋಟಗಳಲ್ಲಿರುವ ಬಾಂಗ್ಲಾ ಪ್ರಜೆಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ. ಮುಂದಿನ ಹಂತಗಳಲ್ಲಿ ರಾಜ್ಯವ್ಯಾಪಿ ವಿದೇಶಿಯರ ಗಣತಿ ಶುರುವಾಗಲಿದೆ ಎಂದು ನುಡಿದರು.
ಡ್ರಗ್ಸ್ ಸೇರಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಸ್ವದೇಶಕ್ಕೆ ನಿರಂತರವಾಗಿ ಗಡಿಪಾರು ಮಾಡಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ 200 ವಿದೇಶಿ ಪ್ರಜೆಗಳು ಬಂಧಿಸಿ ಅವರ ದೇಶಕ್ಕೆ ಕಳುಹಿಸಲಾಗಿದೆ. ಆದರೆ ಕೆಲವರು ಇಲ್ಲೇ ಉಳಿದುಕೊಳ್ಳುವ ಸಲುವಾಗಿ ದುರುದ್ದೇಶ ಪೂರ್ವಕವಾಗಿಯೇ ಅಪರಾಧ ಕೃತ್ಯ ಎಸಗುತ್ತಿದ್ದಾರೆ ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು. ವಿದೇಶಿ ಪ್ರಜೆಗಳ ಮೇಲೆ ಕಣ್ಗಾವಲು ಬಿಗಿಗೊಳಿಸುವಂತೆ ಸಹ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿದೇಶಿಯರ ಎಷ್ಟು ಜನರಿದ್ದಾರೆ ಎಂಬುದು ಖಚಿತವಾದ ಕೂಡಲೇ ಮತ್ತಷ್ಟು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.