ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲೂ ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ಜ.03): ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲೂ ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶಿ, ಮಥುರಾದಲ್ಲೂ ಸರ್ವೇಗೆ ಆದೇಶವಾಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. 496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸ ಮಾಡಿ, ಬಾಬರ್ ಮಸೀದಿ ಕಟ್ಟಿದ್ದರು. ಈಗ ಆ ಗುಲಾಮಗಿರಿ ಮಸೀದಿ ಒಡೆದು ರಾಮಮಂದಿರ ಕಟ್ಟಿದ್ದೇವೆ ಇದು ನಮ್ಮೆಲ್ಲರ ಸೌಭಾಗ್ಯ ಎಂದರು.
ಇನ್ನು, ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಶ್ರೀರಾಮಚಂದ್ರನ ಭಕ್ತರು ಯಾರಿದ್ದಾರೋ ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ‘ಬಿಜೆಪಿ ರಾಮ’ ಎನ್ನುವವರಿಗೆ ಕೇಂದ್ರದ ನಾಯಕರು ಆಹ್ವಾನ ಕೊಟ್ಟಿಲ್ಲ ಎಂದು ಕುಟುಕಿದರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿಲ್ಲ. ಕಾರಣ, ರಾಮಮಂದಿರವನ್ನು ರಾಜಕಾರಣ ದೃಷ್ಟಿಯಿಂದ ನೋಡುವವರಿಗೆ, ರಾಮನನ್ನು ಬಿಜೆಪಿಯ ರಾಮ ಅಂತ ವರ್ಗೀಕರಿಸುವವರಿಗೆ ಕೇಂದ್ರದ ರಾಮಮಂದಿರ ಸಮಿತಿ ಆಮಂತ್ರಣ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಸೀದಿ ತೆರವು ಮಾಡಿ, ಇಲ್ಲ ಹಿಂದೂ ಸಮಾಜವೇ ಪುಡಿಗಟ್ಟೀತು: ಮುಸಲ್ಮಾನರು ಎಲ್ಲೆಲ್ಲಿ ದೇವಸ್ಥಾನ ಒಡೆದು ಮಂದಿರ ನಿರ್ಮಿಸಿದ್ದಾರೋ ಅಲ್ಲೆಲ್ಲಾ ಮರ್ಯಾದೆಯಿಂದ ಮಸೀದಿಗಳ ತೆರವು ಮಾಡಬೇಕು, ಇಲ್ಲವಾದರೆ ಹಿಂದೂ ಸಮಾಜ ಮಸೀದಿಗಳನ್ನು ಒಡೆದು ಪುಡಿಗಟ್ಟುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶದಿಂದ ನುಡಿದರು. ಪಟ್ಟಣದಲ್ಲಿ ಶ್ರೀ ರಾಮಸೇನೆ ಆಯೋಜಿಸಿದ್ದ ‘ಮೋದಿ ಗೆಲ್ಲಿಸಿ ಭಾರತ ಉಳಿಸಿ’ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಅಖಂಡ ಭಾರತ ನಿರ್ಮಾಣಕ್ಕೆ ‘ಜೈ ಶ್ರೀರಾಮ’ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ.
ವಿಜಯೇಂದ್ರ, ಅಶೋಕ್‌ಗೆ ಎಲ್ಲರನ್ನೂ ಜೊತೆಗೊಯ್ಯುವ ಜವಾಬ್ದಾರಿ: ಡಿ.ವಿ.ಸದಾನಂದಗೌಡ
ಸದ್ಯ ಪಾಕಿಸ್ತಾನದವರೂ ಸಹ ಮೋದಿ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ ಎಂದವರು ಹೇಳಿದರು. ಕಾಂಗ್ರೆಸ್ ಅಧಿಕಾರದ ಆಸೆಯಿಂದಾಗಿ ನಮ್ಮ ದೇಶ ತುಂಡು ತುಂಡಾಯಿತು ಎಂದರಲ್ಲದೆ, ಜನವರಿ 22 ರಾಮ ಮಂದಿರ ಉದ್ಘಾಟನೆ ದಿನದಂದು ಸ್ವತಂತ್ರ್ಯ ಹೋರಾಟ ಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದರು. ಇನ್ನು, ಪ್ರಿಯಾಂಕ್ ಖರ್ಗೆ ಎನ್ನುವ ಚಿಲ್ಲರೇ ವ್ಯಕ್ತಿ ನರೆಂದ್ರ ಮೋದಿ ಬಗ್ಗೆ ಮಾತನಾಡುತ್ತಾನೆ, ಪ್ರಧಾನಿ ಮೋದಿ ಸೂರ್ಯ ಇದ್ದ ಹಾಗೆ, ಸೂರ್ಯನಿಗೆ ಉಗಿದರೆ ಉಗಿದಿದ್ದು ಪ್ರಿಯಾಂಕ ಖರ್ಗೆಗೇ ಬೀಳುತ್ತದೆ ಎಂದು ಕಿಡಿಕಾರಿದರು.