ಪ್ರಧಾನಿ ನರೇಂದ್ರ ಮೋದಿ ಅವರ ವೇಗಕ್ಕೆ ತಕ್ಕಂತೆ ಕೆಲಸ ಮಾಡದೇ ಇದ್ದರೂ ಅವರ ಆದೇಶ ಪಾಲಿಸುವ ಮುಖ್ಯಮಂತ್ರಿ ಎಲ್ಲ ರಾಜ್ಯಗಳಿಗೆ ಬೇಕು. ಆಗ ಮಾತ್ರ ಕೇಂದ್ರ ಹಾಗೂ ಆಯಾ ರಾಜ್ಯದಲ್ಲಿ ಸಮ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಧಾರವಾಡ (ಏ.28): ಪ್ರಧಾನಿ ನರೇಂದ್ರ ಮೋದಿ ಅವರ ವೇಗಕ್ಕೆ ತಕ್ಕಂತೆ ಕೆಲಸ ಮಾಡದೇ ಇದ್ದರೂ ಅವರ ಆದೇಶ ಪಾಲಿಸುವ ಮುಖ್ಯಮಂತ್ರಿ ಎಲ್ಲ ರಾಜ್ಯಗಳಿಗೆ ಬೇಕು. ಆಗ ಮಾತ್ರ ಕೇಂದ್ರ ಹಾಗೂ ಆಯಾ ರಾಜ್ಯದಲ್ಲಿ ಸಮ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಇಲ್ಲಿಯ ಜೆಎಸ್ಸೆಸ್ ಸಂಸ್ಥೆಯಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ. ಕೇಂದ್ರ ಮತ್ತು ರಾಜ್ಯಕ್ಕೆ ಬೇರೆ ಬೇರೆ ಆಯಾಮ ಇರುತ್ತವೆ. ಕೇಂದ್ರ ಮತ್ತು ರಾಜ್ಯ ಒಂದೇ ದಿಕ್ಕಿನಲ್ಲಿ ಹೋಗಬೇಕು. ದೃಷ್ಟಿಕೋನ ಸಹ ಒಂದೇ ರೀತಿ ಇರಬೇಕು.
ಹಾಗೆ ಆಗದಿದ್ದಲ್ಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಒಂದೇ ವಿಚಾರ ಮಾಡಿದಾಗ ಸಮಪ್ರಮಾಣದ ಅಭಿವೃದ್ಧಿ ಆಗಲಿದೆ. ಅದಕ್ಕಾಗಿ ಎರಡೂ ಕಡೆ ಒಂದೇ ಬಗೆಯ ಸರ್ಕಾರ ಬರಬೇಕು ಎಂಬುದು ಎಲ್ಲರ ಆಶಯ. ರಾಜ್ಯದ ಚುನಾವಣೆಯಲ್ಲಿಯೂ ಈಗ ರಾಷ್ಟ್ರದ ಚಿಂತನೆ ಅಡಗಿದೆ ಎಂದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಈ ಮೊದಲು ಭಾರತದ ಸಂಸ್ಕೃತಿ, ನಡೆ-ನುಡಿ ಬಗ್ಗೆ ಭಾರತೀಯರಿಗೆ ಹೇಳಿಕೊಳ್ಳುವ ಗೌರವ ಇರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಬಗ್ಗೆ ಅಭಿಮಾನ ಮೂಡಿಸುವ ಕೆಲಸವಾಗುತ್ತಿದೆ. ಕೇಂದ್ರದ ಮೂಲಕ ರಾಜ್ಯಕ್ಕೆ ಸಾಕಷ್ಟುಅಭಿವೃದ್ಧಿ ಕೆಲಸಗಳಾಗಿದ್ದು ಅವುಗಳನ್ನು ಮುಂದುವರಿಸಲು ಮತ್ತೊಮ್ಮೆ ತಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ವಿಧಾನಪರಿಷತ್ ಭೋಜೇಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತ: ಆಡಿಯೋ ವೈರಲ್
ಮೋದಿ ರ್ಯಾಲಿಯಿಂದ ಬಿಜೆಪಿ ಶಕ್ತಿ ವೃದ್ಧಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ 12 ರ್ಯಾಲಿಗಳನ್ನು ನಡೆಸಲಿದ್ದು, ಆ ಬಳಿಕ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಪರ ವಾತಾವರಣ ಬದಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ಸಿನಿಂದ ಲಿಂಗಾಯತ ಮತ್ತು ಆರೆಸ್ಸೆಸ್ ಮುಖಂಡ ಸಂತೋಷ ಅವರ ಅಸ್ತ್ರ ಪ್ರಯೋಗ ವಿಚಾರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಯಾವುದೇ ಹೆಸರು ಪ್ರಸ್ತಾಪ ಮಾಡಲಿ, ಜನರಿಗೆ ಸತ್ಯ ಗೊತ್ತಿದೆ. ಹೀಗಾಗಿ ಜನ ಬಿಜೆಪಿ ಪರ ಇದ್ದಾರೆ. ಇದರಿಂದ ಕಾಗ್ರೆಸ್ಸಿನವರು ಮೈ ಪರಚಿಕೊಳ್ಳುವಂತಾಗಿದೆ ಎಂದು ಹೇಳಿದುರ.
ಕಾಂಗ್ರೆಸ್ಸಿಗರಿಗೆ ಯಾರ ಹೆಸರು ಕಾಣದೇ ಇದ್ದಾಗ ಒಂದು ಹೆಸರು ಪ್ರಸ್ತಾಪ ಮಾಡುತ್ತಾರೆ. ಹೆಸರು ತೆಗೆದುಕೊಂಡು ವಿವಾದ ಮಾಡುತ್ತಿದ್ದಾರೆ. ಸಂತೋಷ ಜಿ ಮತ್ತು ಬೇರೆ ಯಾರದೇ ಹೆಸರು ತರುವ ಅಗತ್ಯ ಇಲ್ಲ. ಪಕ್ಷದ ವಿದ್ಯಮಾನಗಳು ಪಕ್ಷದಲ್ಲಿ ನಡೆಯುತ್ತವೆ. ಯಾವುದೇ ಒಂದು ವ್ಯಕ್ತಿಯ ಮೇಲೆ ಇರುವುದಿಲ್ಲ ಎಂದರು. ಕಾಂಗ್ರೆಸ್ ಲಿಂಗಾಯತರನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದು ಚರ್ಚೆಗೆ ಬರಲಿ. ವೀರೇಂದ್ರ ಪಾಟೀಲರಿಗೆ ಹೇಗೆ ಅವಮಾನ ಮಾಡಿದ್ದಾರೆ? ನಿಜಲಿಂಗಪ್ಪ ಅವರಿಗೆ ಇಂದಿರಾ ಗಾಂಧಿ ಹೇಗೆ ಅಪಮಾನ ಮಾಡಿದರು? ಇದು ಎಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ. ಹೀಗಾಗಿ ಕಾಂಗ್ರೆಸ್ ಏನೇ ಮಾಡಿದರೂ ಜನ ಒಪ್ಪುವುದಿಲ್ಲ. ಜನ ನಿಮಗೆ ಸೂಕ್ತ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಖರ್ಗೆಯ ಅಹಂಕಾರದ ಹೇಳಿಕೆ ಖಂಡನಾರ್ಹ: ಪ್ರಧಾನಮಂತ್ರಿ ನರೇಂದ್ರ ಮೋದಿ ‘ವಿಷದ ಹಾವು‘ ಇದ್ದಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ. ಅಹಂಕಾರದಿಂದ ಕೂಡಿದ ಅತ್ಯಂತ ಕೀಳುಮಟ್ಟದ ಭಾಷೆ ಬಳಕೆ ಖರ್ಗೆ ಅಂತಹವರಿಗೆ ಸರಿಯಲ್ಲ ಎಂದರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ಸಿಗರಿಗೆ ಇದೊಂದು ಚಾಳಿ. ಈ ಹಿಂದೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ಅವರನ್ನು ಸಾವಿನ ವ್ಯಾಪಾರಿ ಎಂದು ಟೀಕಿಸಿದ್ದರು. ಆಗ ಗುಜರಾತಿನ ಜನಾನೇ ಅವರಿಗೆ ಉತ್ತರ ಕೊಟ್ಟಿದ್ದರು. ಸುರ್ಜೆವಾಲಾ ಸಹ ನರೇಂದ್ರ ಮೋದಿ ಅವರ ಸಮಾಧಿಯ ಬಗ್ಗೆ ಮಾತನಾಡುತ್ತಾರೆ.
ಶಿವಮೊಗ್ಗ ಏರ್ಪೋರ್ಟ್ನಲ್ಲಿ ‘ಕಾಂಗ್ರೆಸ್’ ಅಭ್ಯರ್ಥಿಗಳಿಗೆ ಶುಭ ಕೋರಿದ ರಾಹುಲ್ ಗಾಂಧಿ
ಅವರು ಮಾಡಿದ ತಪ್ಪಿನ ಬಗ್ಗೆ, ಬಳಸಿದ ಭಾಷೆಯ ಬಗ್ಗೆಯೂ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೀಗ ಖರ್ಗೆ ಸಹ ಈ ರೀತಿಯ ಕೀಳುಮಟ್ಟದ ಪದ ಬಳಕೆ ಮಾತನಾಡುತ್ತಿದ್ದಾರೆ ಎಂದರು. ಗಾಂಧಿ ಪರಿವಾರದವರು ಕುಳಿತುಕೊಳ್ಳಬೇಕಾಗಿದ್ದ ಪ್ರಧಾನಮಂತ್ರಿ ಸ್ಥಾನದಲ್ಲಿ ಬಡ ಕುಟುಂಬದಿಂದ ಬಂದಂತಹ ಮೋದಿ ಕುಳಿತುಕೊಂಡಿರುವುದನ್ನು ನೋಡಿ ಸಹಿಸಲಾಗುತ್ತಿಲ್ಲ. ಮೋದಿ ಬಗ್ಗೆ ಇಂತಹ ಕೀಳುಮಟ್ಟದ ಭಾಷೆ ಬಳಸಿರುವುದು ನಿಜಕ್ಕೂ ಖಂಡನಾರ್ಹ ಎಂದು ಜೋಶಿ ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.