ನಮ್ಮ ಸರ್ಕಾರ ಈ ವಿವಾದವನ್ನು ಬಗೆಹರಿಸಿರುವುದರಿಂದ ಈ ಭಾಗದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ಅಮಿತ್ ಶಾ
ಬೆಳಗಾವಿ(ಜ.29): ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ, ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾದ ಮಹದಾಯಿಗೆ ಸಂಬಂಧಿಸಿದ ಜಲ ವಿವಾದವನ್ನು ಬಿಜೆಪಿ ಸರ್ಕಾರ ಇತ್ಯರ್ಥಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಶನಿವಾರ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿ, ಗೋವಾ ಮತ್ತು ಕರ್ನಾಟಕವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸರ್ಕಾರ ಈ ಜಲ ವಿವಾದವನ್ನು ಬಗೆಹರಿಸಿದೆ. ಆದರೆ, ಕಾಂಗ್ರೆಸ್ ನಾಯಕಿ ಈ ಹಿಂದೆ ಗೋವಾ ಚುನಾವಣೆ ವೇಳೆ ಮಹದಾಯಿಯಿಂದ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ವಿರುದ್ಧ ಕಿಡಿಕಾರಿದರು. ನಮ್ಮ ಸರ್ಕಾರ ಈ ವಿವಾದವನ್ನು ಬಗೆಹರಿಸಿರುವುದರಿಂದ ಈ ಭಾಗದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ದೂರ ಇಡಿ:
ಈ ಹಿಂದೆ ಅಧಿಕಾರದಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಭ್ರಷ್ಟಾಚಾರದಲ್ಲೇ ಮುಳುಗಿದ್ದವು. ಈ ಎರಡೂ ಪಕ್ಷಗಳು ಬಡವರಿಗೆ ಏನು ಮಾಡಿವೆ? ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದ ಶಾ ಅವರು, ಕರ್ನಾಟಕದಲ್ಲಿ 35 ರಿಂದ 40 ಶಾಸಕ ಸ್ಥಾನ ಗೆದ್ದು ಜನಹಿತ ಮರೆತು ಸ್ವಾರ್ಥಕ್ಕಾಗಿ ಅಧಿಕಾರ ಅನುಭವಿಸುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ದೂರ ಇರಿಸಬೇಕು. ಕರ್ನಾಟಕದಲ್ಲಿ ನೀವು ಜೆಡಿಎಸ್‌ಗೆ ಹಾಕುವ ಮತ ಕಾಂಗ್ರೆಸ್‌ಗೆ ಲಾಭವಾಗಲಿದೆ ಎನ್ನುವುದನ್ನು ಮರೆಯಬಾರದು. ಕಾಂಗ್ರೆಸ್, ಜೆಡಿಎಸ್ ಪ್ರತ್ಯೇಕವಾಗಿ ಕಂಡರೂ, ನೀವು ಜೆಡಿಎಸ್‌ಗೆ ನೀಡುವ ಮತ ಕಾಂಗ್ರೆಸ್‌ಗೆ ಹಾಕಿದಂತೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
Assembly election: ಕರ್ನಾಟಕವನ್ನು ದೇಶದಲ್ಲಿ No: 1 ರಾಜ್ಯ ಮಾಡ್ತೀವಿ: ಅಮಿತ್ ಶಾ ಭರವಸೆ
ಜನರಿಂದ ಚಪ್ಪಾಳೆ ತಟ್ಟಿಸಿ ಸಿಎಂಗೆ ಶುಭ ಕೋರಿದ ಶಾ
ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದ ಅಮಿತ್ ಶಾ, ವೀರ ಸಾವರ್ಕರ್ ಅವರಿಗೆ ಸಹಾಯ ಮಾಡಿದ ಆಲೂರು ವೆಂಕಟರಾಯ ಅವರನ್ನು ಸ್ಮರಿಸಿದರು. ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ಅನೇಕ ಕ್ರಾಂತಿವೀರರು ಯುದ್ಧದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ ಎಂದರು. ಭಾಷಣ ಆರಂಭಿಸುತ್ತಿದ್ದಂತೆಯೇ, ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನವಿಂದು. ಹಾಗಾಗಿ, ಎಲ್ಲರೂ ಚಪ್ಪಾಳೆ ಬಾರಿಸುವ ಮೂಲಕ ಶುಭಾಶಯ ಕೋರಬೇಕೆಂದ ಅವರು, ಸವದತ್ತಿ ಯಲ್ಲಮ್ಮದೇವಿ, ಕಿತ್ತೂರು ಚನ್ನಮ್ಮ, ಬಸವಣ್ಣ, ಕಲ್ಮಠ, ಸಿದ್ದಾರೂಢ ಮಠ, ಸಿದ್ದಯ್ಯ ಶ್ರೀಗಳಿಗೆ ನಮಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು.