ಮತ್ತೆ ಸಿಎಂ ಆಗಲು ಸಿದ್ದರಾಮಯ್ಯಗೆ ಚುನಾವಣೆ ಬೇಕೇನೋ?

By Kannadaprabha NewsFirst Published Nov 6, 2019, 9:40 AM IST
Highlights

ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆ ಇರಬೇಕು, ಹಾಗಾಗಿ ನಾಳೆಯೇ ಚುನಾವಣೆ ಬೇಕಾಗಬಹುದು. ಆದರೆ ನಮಗೆ ಚುನಾವಣೆ ಬೇಕಾಗಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಬೆಂಗಳೂರು [ನ.06]:  ಸಿದ್ದರಾಮಯ್ಯ ಅವರು ಈಗ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರಿಗೆ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆ ಇರಬೇಕು, ಹಾಗಾಗಿ ನಾಳೆಯೇ ಚುನಾವಣೆ ಬೇಕಾಗಬಹುದು. ಆದರೆ ನಮಗೆ ಚುನಾವಣೆ ಬೇಕಾಗಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಜೆ.ಪಿ.ಭವನದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ನಡೆದರೆ ನಾಳೆ ಬೆಳಗ್ಗೆ ಅಭ್ಯರ್ಥಿ ಹಾಕುವ ಯೋಗ್ಯತೆ ನಮಗೆ ಇದೆಯೇ ಎಂಬುದನ್ನು ನೋಡಬೇಕಾಗಿದೆ. ಸಿದ್ದರಾಮಯ್ಯ ಅವರ ಬಳಿ ಆ ಶಕ್ತಿ ಇರಬಹುದು. ಇದೇ ಕಾರಣದಿಂದ ಅವರು ಮತ್ತೆ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅಹಿಂದ ನಾಯಕ. ನಾನು ಯಾವ ಹಿಂದ ನಾಯಕ? ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ನುಡಿದ ಅವರು, ಸಿದ್ದರಾಮಯ್ಯಗೆ ನಾಳೆಯೇ ಚುನಾವಣೆ ಬೇಕಾಗಬಹುದು. ಆದರೆ, ನನಗೆ ಚುನಾವಣೆ ಬೇಕಾಗಿಲ್ಲ. ಅವರ ಪಕ್ಷದಲ್ಲಿ ಸಿದ್ದರಾಮಯ್ಯ ಅವರೇ ನಾಯಕರು. ಅವರ ನಾಯಕತ್ವವನ್ನು ನಾನು ಕಿತ್ತುಕೊಳ್ಳಲು ಸಾಧ್ಯನಾ ಎಂದು ಪ್ರಶ್ನಿಸಿದರು.

ದೇವೇಗೌಡರು ಮಾತಾಡಿದ್ದಾರೆ: ಬಿಎಸ್‌ವೈ ‘ಸಸ್ಪೆನ್ಸ್‌’ ಹೇಳಿಕೆ!...

ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುತ್ತೇವೆ. ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಆಗದ ರೀತಿಯಲ್ಲಿ ಎಲ್ಲ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಈಗಾಗಲೇ ಅಭ್ಯರ್ಥಿಗಳನ್ನು ಗುರುತಿಸುವ ಬಗ್ಗೆ ಅಂತಿಮ ಚರ್ಚೆಯಾಗಿದೆ. ಶೇ.70ರಷ್ಟುಅಭ್ಯರ್ಥಿ ಆಯ್ಕೆಯಾಗಿದೆ. ಕೆಲವೆಡೆ ಯುವಕರು ಮುಂದೆ ಬರುತ್ತಿದ್ದು, ಯಾರಿಗೆ ಟಿಕೆಟ್‌ ನೀಡಬೇಕು ಎಂಬುದರ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಚುನಾವಣೆ ನಡೆದರೆ ಸ್ಪರ್ಧೆ ಇರುತ್ತದೆ, ಇಲ್ಲವಾದಲ್ಲಿ ಇಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಉಪಚುನಾವಣೆಯಲ್ಲಿ ಯಾರ ಜತೆಗೂ ಮೈತ್ರಿ ಇಲ್ಲ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಕಹಿ ಅನುಭವವಾಗಿದೆ. ಪ್ರತಿಪಕ್ಷದಲ್ಲಿ ಕುಳಿತು ಹೋರಾಟ ಮಾಡಿದರೂ ತೊಂದರೆ ಇಲ್ಲ. ಅವರಿಬ್ಬರ ಜತೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಎಲ್ಲಾ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಮಂಗಳೂರು, ದಾವಣಗೆರೆ ನಗರ ಪಾಲಿಕೆಯಲ್ಲಿ ಪೂರ್ತಿ ಅಭ್ಯರ್ಥಿಗಳನ್ನು ಹಾಕಿಲ್ಲ. ಮಂಗಳೂರಲ್ಲಿ 15 ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದಾರೆ. ಪುರಸಭೆ, ನಗರಸಭೆಯಲ್ಲಿ ಯಾರ ಜತೆಗೂ ನಾವು ಸಂಬಂಧ ಇಟ್ಟುಕೊಂಡಿಲ್ಲ. ಕಾಂಗ್ರೆಸ್‌, ಬಿಜೆಪಿ ವಿರುದ್ಧವಾಗಿ ನಾವು ಹೋರಾಟ ಮಾಡುತ್ತೇವೆ. ನಮ್ಮ ಪಕ್ಷಕ್ಕೆ ಎಷ್ಟುಶಕ್ತಿ ಇದೆಯೋ ಅಷ್ಟುಹೋರಾಟ ಮಾಡುತ್ತೇವೆ. ಕೆಲವು ಕಡೆ ಉತ್ತಮ ಫಲಿತಾಂಶ ಬರುವ ವಿಶ್ವಾಸ ಇದೆ. ಕನಕಪುರದಲ್ಲಿಯೇ ನಾವು ನಾಲ್ಕು ಸ್ಥಾನದಲ್ಲಿ ಸ್ಪರ್ಧಿಸಿದ್ದೇವೆ. ಲೋಕಸಭೆ ಸದಸ್ಯರು ಮತ್ತು ಮಾಜಿ ಸಚಿವರು ಆ ಕ್ಷೇತ್ರವನ್ನು ಪ್ರಬಲವಾಗಿ ಇಟ್ಟುಕೊಂಡಿದ್ದಾರೆ. ಹೀಗಾಗಿ ನಮ್ಮ ಸಾಮರ್ಥ್ಯ ಎಷ್ಟಿದೆಯೋ ಅಷ್ಟುಸ್ಪರ್ಧೆ ಮಾಡುತ್ತೇವೆ. ನಾವು ಯಾರ ಜತೆಗೂ ನೆಂಟಸ್ತನ ಮಾಡುವುದಿಲ್ಲ ಎಂದು ತಿಳಿಸಿದರು.

15ಕ್ಕೆ ಸಿಎಂ ಮನೆ ಮುಂದೆ ಪ್ರತಿಭಟನೆ

ಯಾದಗಿರಿ ಜಿಲ್ಲೆ ಗುರುಮಿಟ್ಕಲ್‌ನಲ್ಲಿ ಜೆಡಿಎಸ್‌ ಕಾರ್ಯಕರ್ತನ ಮೇಲೆ ಪೊಲೀಸ್‌ ದೌರ್ಜನ್ಯ ವಿಚಾರ ಮತ್ತು ಮಂಡ್ಯದಲ್ಲಿ ಜೆಡಿಎಸ್‌ ಮುಖಂಡರ ಕ್ವಾರಿ ಆರಂಭಕ್ಕೆ ಹೈಕೋರ್ಟ್‌ ಅನುಮತಿ ನೀಡಿದರೂ ಸರ್ಕಾರ ತಡೆ ಹಿಡಿದಿರುವುದನ್ನು ಖಂಡಿಸಿ ಧರಣಿ ನಡೆಸುತ್ತೇನೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದರು. ನ.15ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು. ಗುರುಮಿಟ್ಕಲ್‌ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಯುವಮುಖಂಡರ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ. ಅದನ್ನೆಲ್ಲಾ ಗಮನಿಸಿದರೆ ರಾಜ್ಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇದೆ. ನಮ್ಮ ಪಕ್ಷದ ಯುವ ಮುಖಂಡನ ಬಾಯಿಗೆ ಪಿಸ್ತೂಲ್‌ ಇಟ್ಟು ಹಿಂಸೆ ಕೊಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು. ಇಲ್ಲದಿದ್ದರೆ ನಾನು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದರು.

ಎಂಎಲ್‌ಸಿಗಳ ಜೊತೆ 12ಕ್ಕೆ ಸಭೆ

ವಿಧಾನಪರಿಷತ್‌ ಸದಸ್ಯರ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ನ.12ಕ್ಕೆ ಸಭೆ ನಡೆಸಲಾಗುವುದು. ಅವರ ಅತೃಪ್ತಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

ಜೆಡಿಎಸ್‌ ಮುಗಿದೇ ಹೋಯಿತು ಎನ್ನುವ ಚರ್ಚೆ ನಡೆಯುತ್ತಿದೆ. ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಚರ್ಚಿಸಿ ಬಗೆಹರಿಸಲಾಗುವುದು. ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲ. ನ.12ರಂದು ವಿಧಾನಪರಿಷತ್‌ ಸದಸ್ಯರ ಜತೆ ಕುಳಿತು ಸಭೆ ನಡೆಸಲಾಗುವುದು. ಚರ್ಚಿಸಿ ಎಲ್ಲವನ್ನೂ ಬಗೆಹರಿಸುತ್ತೇವೆ ಎಂದರು.

click me!