ದೇವೇಗೌಡರು ಮಾತಾಡಿದ್ದಾರೆ: ಬಿಎಸ್‌ವೈ ‘ಸಸ್ಪೆನ್ಸ್‌’ ಹೇಳಿಕೆ!

By Kannadaprabha NewsFirst Published Nov 6, 2019, 7:14 AM IST
Highlights

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಖುದ್ದು ಯಡಿಯೂರಪ್ಪ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು ಎಂಬ ಸಂಗತಿ ರಾಜ್ಯ ರಾಜಕಾರಣದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿದೆ.
 

ಬೆಂಗಳೂರು [ನ.06]:  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೂರೂವರೆ ವರ್ಷಗಳ ಅವಧಿ ಪೂರೈಸಲಿ ಎಂಬ ಜೆಡಿಎಸ್‌ ಹಿರಿಯ ನಾಯಕರ ಬಹಿರಂಗ ಹೇಳಿಕೆಗಳ ನಡುವೆಯೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಖುದ್ದು ಯಡಿಯೂರಪ್ಪ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು ಎಂಬ ಸಂಗತಿ ರಾಜ್ಯ ರಾಜಕಾರಣದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿದೆ.

‘ಒಂದು ಬಾರಿ ಸ್ವತಃ ದೇವೇಗೌಡರೇ ದೂರವಾಣಿ ಮೂಲಕ ನನ್ನ ಜೊತೆ ಮಾತುಕತೆ ನಡೆಸಿದ್ದರು. ಆದರೆ, ನಾನು ಆ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಡಿಯೂರಪ್ಪ ಈ ಹೇಳಿಕೆ ನೀಡಿದ್ದಾರೆ.

ಆದರೆ, ದೂರವಾಣಿ ಮೂಲಕ ಮಾತುಕತೆ ನಡೆಸಿರುವುದನ್ನು ದೇವೇಗೌಡರು ನಿರಾಕರಿಸಿದ್ದಾರೆ. ನಾನು ಮತ್ತು ಯಡಿಯೂರಪ್ಪ ಅವರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದೇವೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಆ ರೀತಿ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ಅವರು ಮಂಗಳವಾರ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಮೂರೂವರೆ ವರ್ಷ ಬಿಎಸ್‌ವೈ- ಎಚ್‌ಡಿಡಿ:

ಈ ನಡುವೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಹೇಳಿದರು.

ಹಾಗಂತ ನಮ್ಮ ಪಕ್ಷದ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂದು ನಾನು ಯಡಿಯೂರಪ್ಪ ಬಗ್ಗೆ ಮೃದು ಧೋರಣೆ ತಳೆದಿಲ್ಲ ಎಂದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ಬಗ್ಗೆ ಜೆಡಿಎಸ್‌ ಮೃದು ಧೋರಣೆ ತೋರುತ್ತಿದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಆದರೆ, ಬಿಜೆಪಿ ಬಗ್ಗೆ ಯಾವುದೇ ಮೃದು ಧೋರಣೆ ತೋರಿಸುತ್ತಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್‌ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲ. ನಾನು ತುಮಕೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಮನೆಯಲ್ಲಿ ಕುಳಿತಿಲ್ಲ. ಇವತ್ತಿಗೂ ರಾಜ್ಯ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದರು.

click me!