‘ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯ ಹಿಂದೆ ನಾನಾಗಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಲಿ ಇಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಮಾ.31): ‘ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯ ಹಿಂದೆ ನಾನಾಗಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಲಿ ಇಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ಕೇಂದ್ರದ ವರಿಷ್ಠರು ಹಲವು ಬಾರಿ ಯತ್ನಾಳ್ ಅವರಿಗೆ ನೋಟಿಸ್ ನೀಡಿ ತಿದ್ದುವ ಪ್ರಯತ್ನ ಮಾಡಿದ್ದರು. ಉಚ್ಛಾಟನೆ ಸಂಬಂಧ ಈಗ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು.
ಉಚ್ಛಾಟನೆ ಕ್ರಮ ಏನಿದ್ದರೂ ಅದು ಹೈಕಮಾಂಡ್ ತೀರ್ಮಾನವಾಗಿದೆ. ಹಾಗೆಂದ ಮಾತ್ರಕ್ಕೆ ಯತ್ನಾಳ್ ಉಚ್ಛಾಟನೆಯನ್ನು ನಾನು ಸಂಭ್ರಮಿಸುವುದಿಲ್ಲ ಎಂದು ಹೇಳಿದರು. ರಾಜ್ಯಾಧ್ಯಕ್ಷನಾದ ಆರಂಭದಲ್ಲಿಯೇ ಅವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಕುರಿತು ಚರ್ಚೆ ನಡೆಸಿದ್ದೆ. ಪಕ್ಷದ ಹಿತದೃಷ್ಟಿಯಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಸಂಘಟನೆಯತ್ತ ಗಮನ ಹರಿಸುವ ಬಗ್ಗೆ ಮಾತುಕತೆ ನಡೆಸಿದ್ದೆ. ಸದನ ನಡೆಯುವಾಗಲೂ ವೈಯಕ್ತಿಕವಾಗಿ ಭೋಜನಕೂಟಕ್ಕೆ ಆಹ್ವಾನ ನೀಡಿದ್ದೆ. ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಳ್ಳೋಣ ಎಂದಿದ್ದೆ. ವಯಸ್ಸಲ್ಲಿ ಮತ್ತು ಅನುಭವದಲ್ಲಿ ಯತ್ನಾಳ್ ಅವರಿಗಿಂತ ನಾನು ಚಿಕ್ಕವನು.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ನನ್ನ ಕರ್ತವ್ಯ ಎಂದು ಭಾವಿಸಿ ಸಾಕಷ್ಟು ಬಾರಿ ಪ್ರಯತ್ನ ಮಾಡಿದೆ ಎಂದು ತಿಳಿಸಿದರು. ನಾನು ಹಿಂದೊಂದು, ಮುಂದೊಂದು ಮಾತನಾಡುವ ವ್ಯಕ್ತಿಯಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯವಾಗಿ ಹಲವರನ್ನು ಬೆಳೆಸಿದ್ದಾರೆ. ಅವರು ಎಂದಿಗೂ ಯಾರನ್ನೂ ತುಳಿಯುವ ಕೆಲಸ ಮಾಡಿಲ್ಲ. ಎಲ್ಲವನ್ನೂ ನಾನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದೆ. ಸಂಘಟನೆಯ ವಿಷಯದಲ್ಲಿ ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ವರಿಷ್ಠರು ಎಲ್ಲವನ್ನು ಪರಿಶೀಲಿಸಿ ನಿರ್ಧಾರ ಪ್ರಕಟಿಸಿದ್ದಾರೆ ಎಂದರು.
ಜನತೆಗೆ ಬೆಲೆ ಏರಿಕೆ ವಿರುದ್ಧ ಏ.2ರಿಂದ ಬಿಜೆಪಿ ಸರಣಿ ಧರಣಿ: ಬಿ.ವೈ.ವಿಜಯೇಂದ್ರ
ಅಧಿಕಾರದ ಮದವೇರಿದೆ: ರಾಜ್ಯದಲ್ಲಿ ದರಿದ್ರ, ಜನವಿರೋಧಿ, ಕೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ನಾಡಿನ ಜನತೆಗೆ ಕೊಟ್ಟ ಏಕೈಕ ಗ್ಯಾರಂಟಿ ಎಂದರೆ ಅದು ಬೆಲೆ ಏರಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ವಿಫಲವಾಗಿದೆ. ಅಧಿಕಾರದ ಮದ, ಭ್ರಮೆ ಇವರ ನೆತ್ತಿಗೇರಿದೆ. ಹೇಳಿ ಕೇಳಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೇಶದ ಎರಡನೇ ಅತಿ ಶ್ರೀಮಂತ ಶಾಸಕ ಎಂದು ವ್ಯಂಗ್ಯವಾಡಿದರು. ಬೆಲೆ ಏರಿಕೆಯಿಂದ ನಾಡಿನ ಸಾಮಾನ್ಯ ಜನರು, ಬಡವರು, ರೈತರು ಸೇರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಇವರ ಹುಳುಕು ಮುಚ್ಚಿ ಹಾಕಲು ಪದೇಪದೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.