ರಾಜ್ಯ ಕಾಂಗ್ರೆಸ್ ಮೂರು ಬಣವಾಗಿ ಮುಂದಿನ ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಗರಣಗಳ ಸರಮಾಲೆಯೇ ನಡೆದಿತ್ತು. ಆದರೂ ಕಾಂಗ್ರೆಸ್ ಮುಖಂಡರು ನಮ್ಮ ಸರ್ಕಾರದ ಮೇಲೆ ಶೇ.40 ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ ಎಂದ ಕಟೀಲ್
ಭಟ್ಕಳ(ಫೆ.08): ಮುಂದಿನ ವಿಧಾನಸಭಾ ಚುನಾವಣೆ ಬಿಜೆಪಿ-ಕಾಂಗ್ರೆಸ್ ಮಧ್ಯದ ಹೋರಾಟವಲ್ಲ. ಬದಲಾಗಿ ವೀರ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಮಧ್ಯದ ಹೋರಾಟವಾಗಿ ಮಾರ್ಪಡಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್ ಹೇಳಿದರು. ಶಿರಾಲಿಯ ಜನತಾ ವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯ ಸಂಕಲ್ಪ ಅಭಿಯಾನ ಮತ್ತು ಮತಗಟ್ಟೆಪೇಜ್ ಪ್ರಮುಖರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಜನರಿಗೆ ಮತಾಂಧ ಟಿಪ್ಪು ಪರ ಇರುವ ಪಕ್ಷ ಬೇಕಾ? ಅಥವಾ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಪರ ಇರುವ ಪಕ್ಷ ಬೇಕಾ ಎಂದು ರಾಜ್ಯದ ಜನತೆಯೇ ನಿರ್ಧರಿಸಲಿದ್ದಾರೆ ಎಂದರು. ರಾಜ್ಯ ಕಾಂಗ್ರೆಸ್ ಮೂರು ಬಣವಾಗಿ ಮುಂದಿನ ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಗರಣಗಳ ಸರಮಾಲೆಯೇ ನಡೆದಿತ್ತು. ಆದರೂ ಕಾಂಗ್ರೆಸ್ ಮುಖಂಡರು ನಮ್ಮ ಸರ್ಕಾರದ ಮೇಲೆ ಶೇ.40 ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ ಎಂದರು.
undefined
ಮತ್ತೊಮ್ಮೆ ಬಿಜೆಪಿ ಸರ್ಕಾರ: ಕಾಂಗ್ರೆಸ್ ಮನೆ ಖಾಲಿ ಆಗಲಿದೆ ಕಾದು ನೋಡಿ: ನಳಿನ್ ಕುಮಾರ್ ಕಟೀಲು
ದೂರು ದಾಖಲಾಗಿಲ್ಲ:
ಕಾಂಗ್ರೆಸ್ ಮುಖಂಡರಿಗೆ ಈ ಹಿಂದೆಯೇ ಬಿಜೆಪಿ ಸಚಿವರು, ಸರ್ಕಾರದಲ್ಲಿ ಭ್ರಷ್ಟಾಚಾರ ಇದ್ದರೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಸವಾಲು ಹಾಕಿದ್ದೆ. ಆದರೆ ಇನ್ನೂ ತನಕ ನಮ್ಮ ಸಚಿವರ ಮೇಲಾಗಲೀ, ಸರ್ಕಾರದ ಮೇಲಾಗಲೀ ಭ್ರಷ್ಟಾಚಾರ ಕುರಿತಂತೆ ಒಂದೇ ಒಂದೇ ದೂರು ದಾಖಲಿಸಿಲ್ಲ ಎಂದು ಕಟೀಲ್ ಹೇಳಿದರು.
ಭಟ್ಕಳಕ್ಕೆ ಕಾಂಗ್ರೆಸ್ ಕೊಡುಗೆ ಏನು?:
ಕಾಂಗ್ರೆಸ್ ಅಧಿಕಾರದಲ್ಲಿ ಲೋಕಾಯುಕ್ತರ ಅಧಿಕಾರ ಮೊಟಕುಗೊಳಿಸಿ ಎಸಿಬಿ ರಚನೆ ಮಾಡಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಆರ್.ವಿ. ದೇಶಪಾಂಡೆ ತಮ್ಮ ಅಧಿಕಾರದ ಅವಧಿಯಲ್ಲಿ ಭಟ್ಕಳಕ್ಕೆ ಏನು ಕೊಡುಗೆ ನೀಡಿದ್ದಾರೆನ್ನುವುದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಭಟ್ಕಳ ಹಿಂದುತ್ವ ಹೋರಾಟ ಭೂಮಿ:
ರಾಜ್ಯ, ದೇಶದಲ್ಲಿ ಬಿಜೆಪಿಯಿಂದಲೇ ಅಭಿವೃದ್ಧಿ ಆಗಿದೆ. ಸರ್ಕಾರ ಸಾಧನೆಗಳನ್ನು ಪೇಜ್ ಪ್ರಮುಖರು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಬಿಜೆಪಿಗೆ ಭಟ್ಕಳ ಕ್ಷೇತ್ರವೇ ಪ್ರೇರಣೆಯಾಗಿದೆ. ಭಟ್ಕಳದ ಹಿಂದುತ್ವದ ಹೋರಾಟದ ಭೂಮಿಯಾಗಿದೆ ಎಂದರು.
ಬಿಸಿಲಿಗೆ ಪಂಚರತ್ನ ಯಾತ್ರೆ ಪಂಚರ್ ಆಗಿದೆ; ಪ್ರಜಾಧ್ವನಿಯಾತ್ರೆ ಬ್ರೇಕ್ ಫೇಲ್ ಆಗಿದೆ: ಕಟೀಲ್ ವ್ಯಂಗ್ಯ
ಶಾಸಕ ಸುನೀಲ ನಾಯ್ಕ ಮಾತನಾಡಿ, ಭಟ್ಕಳ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ .1300 ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ. ಅಧಿಕಾರ ಅವಧಿಯಲ್ಲಿ ಬಿಜೆಪಿ, ಹಿಂದೂಪರ ಕಾರ್ಯಕರ್ತರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಟ್ಕಳ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ ಸ್ವಾಗತಿಸಿದರು. ಮುಖಂಡ ಧನ್ಯಕುಮಾರ ಜೈನ್ ನಿರೂಪಿಸಿದರು. ವೇದಿಕೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಬಿಜೆಪಿ ಉಸ್ತುವಾರಿ ಭಾರತಿ ಜಂಬಿಗೆ, ಪ್ರಮುಖರಾದ ಎನ್.ಎಸ್. ಹೆಗಡೆ, ಚಂದ್ರು ಎಸಳೆ, ಪ್ರಸನ್ನ ಕೆರೆಕೈ, ಶಿವಾನಿ ಶಾಂತರಾಮ, ಈಶ್ವರ ನಾಯ್ಕ ಮತ್ತಿತರರಿದ್ದರು. ಸಮಾವೇಶದಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದ 248 ಮತಗಟ್ಟೆಗಳಿಂದಲೂ 1800 ಮಂದಿ ಪೇಜ್ ಪ್ರಮುಖರು, ಕಾರ್ಯಕರ್ತರು ಇದ್ದರು.