ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷರಿಗೆ ಪ್ರಬಲ ಎದುರಾಳಿಗಳೇ ಇಲ್ಲ, ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ, ಡಿಕೆ ಸಹೋದರರಿಗೆ ಟಕ್ಕರ್ ನೀಡಲು ಎಚ್ಡಿಕೆ ಪ್ಲ್ಯಾನ್
ಎಂ.ಅಫ್ರೋಜ್ ಖಾನ್
ರಾಮನಗರ(ಫೆ.08): ಡಿ.ಎಂ.ನಂಜುಡಪ್ಪ ವರದಿಯನುಸಾರ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿರುವ ಕನಕಪುರ, ಅತಿ ಸಿರಿವಂತ ರಾಜಕಾರಣಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ಕ್ಷೇತ್ರ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ಈ ಬಾರಿಯೂ ಕನಕಪುರದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದ್ದು, ಈ ಕ್ಷೇತ್ರಕ್ಕೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದೆ. ಡಿಕೆಶಿಗೆ ತವರು ಕ್ಷೇತ್ರದಲ್ಲಿ ಸವಾಲು ಹಾಕಬಲ್ಲ ಸಮರ್ಥ ಎದುರಾಳಿ ಬಿಜೆಪಿ ಮತ್ತು ಜೆಡಿಎಸ್ಗಳಿಗೆ ಇನ್ನೂ ಸಿಕ್ಕಿಲ್ಲ. ಹಿಂದಿನ ಚುನಾವಣೆಗಳಲ್ಲಿ ಅನ್ಯ ಪಕ್ಷಗಳಿಂದ ಪ್ರತಿಸ್ಪರ್ಧಿಗಳಾಗಿದ್ದವರೆಲ್ಲರೂ ಶಸ್ತ್ರ ತ್ಯಾಗ ಮಾಡಿ ‘ಡಿಕೆ‘ ಬತ್ತಳಿಕೆ ಸೇರಿದ್ದಾರೆ.
ಆರಂಭದಲ್ಲಿ ಡಿಕೆಶಿಗೆ ವಿರುದ್ಧವಾಗಿದ್ದ ಎಚ್.ಕೆ.ಶ್ರೀಕಂಠು, ಕಿರಣಗೆರೆ ಜಗದೀಶ್ ಕಾಂಗ್ರೆಸ್‌ಗೆ ಬಂದರು. ಜೆಡಿಎಸ್ನಿಂದ ಪೈಪೋಟಿ ನೀಡುತ್ತಿದ್ದ ಪಿಜಿಆರ್ ಸಿಂಧ್ಯಾ, ಬಿಎಸ್ಪಿ ಸುತ್ತಾಡಿ ಕೈ ಪಾಳಯ ಸೇರಿದರು. 2004ರಲ್ಲಿ ಸಾತನೂರು ಹಾಗೂ 2008ರಲ್ಲಿ ಕನಕಪುರದಲ್ಲಿ ಜೆಡಿಎಸ್ನಿಂದ ನಿಂತು, ಡಿಕೆಶಿಗೆ ಸೋಲಿನ ಭೀತಿ ಹುಟ್ಟಿಸಿದ್ದ ಡಿ.ಎಂ.ವಿಶ್ವನಾಥ್ ಕೂಡ ಜೆಡಿಎಸ್ ತೊರೆದು ಡಿಕೆಶಿ ಬೆನ್ನಿಗೆ ನಿಂತಿದ್ದಾರೆ.
ಮದಗಜಗಳ ರಾಜಕೀಯ ಕಾದಾಟ: ಚನ್ನಪಟ್ಟಣಕ್ಕಾಗಿ ಕುಮಾರಸ್ವಾಮಿ, ಯೋಗೇಶ್ವರ್ ಕಾದಾಟ..!
ಆದಾಗ್ಯೂ, ಕನಕಪುರದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿಲ್ಲ. ಈಗಲೂ ಆ ಕ್ಷೇತ್ರದಲ್ಲಿ ಜೆಡಿಎಸ್ಗೆ 50 ರಿಂದ 60 ಸಾವಿರ ಸಾಂಪ್ರದಾಯಿಕ ಮತಗಳು ರಿಸರ್ವ್ ಆಗಿವೆ. 2008ರಲ್ಲಿ ದುಂತೂರು ವಿಶ್ವನಾಥ್ ಶೇ.43ರಷ್ಟು ಹಾಗೂ 2013ರಲ್ಲಿ ಪಿಜಿಆರ್ ಸಿಂಧ್ಯಾ ಶೇ.38.93ರಷ್ಟು ಮತ ಪಡೆದಿದ್ದರು. 2018ರಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನ ಅಖೈರುಗೊಂಡ ನಾರಾಯಣಗೌಡಗೆ ಶೇ.25.59ರಷ್ಟುಮತಗಳು ಚಲಾವಣೆಯಾದವು. ಈ ಮತ ಗಳಿಕೆಯೇ ಕನಕಪುರದಲ್ಲಿ ಜೆಡಿಎಸ್ ಸಂಘಟನೆಯ ಅಸ್ತಿತ್ವಕ್ಕೆ ಸಾಕ್ಷಿಯಾಗಿದೆ.
ಇತ್ತೀಚೆಗೆ ಪಂಚರತ್ನ ಯಾತ್ರೆಗೆ ಬಂದಿದ್ದ ಕುಮಾರಸ್ವಾಮಿ, ಇಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಡಿಕೆ ಸಹೋದರರಿಗೆ ಟಕ್ಕರ್ ನೀಡುವುದಾಗಿ ಘೋಷಿಸಿ ಹೋಗಿದ್ದಾರೆ. ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಆದರೆ, ಕನಕಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಸರನ್ನು ಪ್ರಕಟಿಸದೇ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಕಳೆದ ಬಾರಿ ಅಭ್ಯರ್ಥಿಯಾಗಿದ್ದ ನಾರಾಯಣಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು, ಉದ್ಯಮಿ ಬಾಲನರಸಿಂಹೇಗೌಡ, ಕಬ್ಬಾಳೆಗೌಡ ಅವರು ಜೆಡಿಎಸ್ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇನ್ನು, ಬಿಜೆಪಿಗೆ ಇಲ್ಲಿ ನೆಲೆ ಇಲ್ಲ. ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ, ಕನಕಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗನ್ನಾಥ್, ಬಿಜೆಪಿ ಮುಖಂಡ ಕನಕಪುರ ಪ್ರಭಾರಿ ಸೀಗೆಕೋಟೆ ರವಿಕುಮಾರ್ ಟಿಕೆಟ್ ಆಕಾಂಕ್ಷಿಗಳು.
ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದವರ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ
ಕ್ಷೇತ್ರದ ಹಿನ್ನೆಲೆ:
ಕನಕಪುರಕ್ಕೆ ಬರುವುದಕ್ಕೂ ಮೊದಲು ಡಿಕೆಶಿ, ಸಾತನೂರು ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಸಾತನೂರು ಕ್ಷೇತ್ರ ಸ್ಥಾನ ಕಳೆದುಕೊಂಡಿತು. ಬಳಿಕ, ಜೆಡಿಎಸ್ ಭದ್ರಕೋಟೆಯಾಗಿದ್ದ ಕನಕಪುರಕ್ಕೆ ಡಿಕೆಶಿ ಎಂಟ್ರಿಯಾದ ಮೇಲೆ ಜೆಡಿಎಸ್ 2ನೇ ಸ್ಥಾನಕ್ಕೆ ಕುಸಿದಿದೆ. ಕ್ಷೇತ್ರ ಮರುವಿಂಗಡಣೆಯ ನಂತರ 2008ರಿಂದ ಕನಕಪುರಕ್ಕೆ ಬಂದು ಹ್ಯಾಟ್ರಿಕ್ ಜಯಗಳಿಸುವುದಲ್ಲದೆ ತಮ್ಮ ಗೆಲುವಿನ ಅಂತರವನ್ನು ಚುನಾವಣೆಯಿಂದ ಚುನಾವಣೆಗೆ ಹೆಚ್ಚಿಸಿಕೊಳ್ಳುತ್ತ ಕ್ಷೇತ್ರವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಕನಕಪುರ ಕ್ಷೇತ್ರ ಕಸಬಾ, ಕೋಡಿಹಳ್ಳಿ , ಉಯ್ಯಂಬಳ್ಳಿ, ಸಾತನೂರು ಹೋಬಳಿಗಳನ್ನು ಒಳಗೊಂಡಿದೆ.
ಜಾತಿ ಲೆಕ್ಕಾಚಾರ:
ಕ್ಷೇತ್ರದಲ್ಲಿ ಒಟ್ಟು 2,21,425 ಮತದಾರರಿದ್ದು, ಈ ಪೈಕಿ, ಒಕ್ಕಲಿಗರು 95,000, ಪ.ಜಾತಿಯವರು 36,000, ಪ.ಪಂಗಡದವರು 10,000, ಮುಸ್ಲಿಮರು 16,000, ಲಿಂಗಾಯತರು 26,000 ಹಾಗೂ ಇತರರು 38,425 ಮಂದಿ ಇದ್ದಾರೆ. ಈವರೆಗಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಹಣಾಹಣಿ ನಡೆದಿದೆ.