
ಬೆಂಗಳೂರು: ಸಾವಿರಾರು ಕಾರ್ಯಕರ್ತರ ಸಮ್ಮುಖ ನಡೆದ ಕೆಪಿಸಿಸಿ ನೂತನ ಸಾರಥಿ ಬಿ.ಕೆ.ಹರಿಪ್ರಸಾದ್ ಅವರ ಅದ್ಧೂರಿ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಹಾಗೂ ದೆಹಲಿ ಕಾಂಗ್ರೆಸ್ ನಾಯಕರು ಭರ್ಜರಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಿ 2028ಕ್ಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದಷ್ಟೇ ಅಲ್ಲದೆ, 2029ಕ್ಕೆ ಕೇಂದ್ರದಲ್ಲೂ ಮರಳಿ ಕಾಂಗ್ರೆಸ್‌ನ ಅಧಿಕಾರ ಸ್ಥಾಪಿಸುವ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಶಪಥ ಮಾಡಿದ್ದಾರೆ.
ರಾಜಧಾನಿಯ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬಿ.ಕೆ.ಹರಿಪ್ರಸಾದ್ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ, ಪಕ್ಷದ ಪುಸ್ತಕದಲ್ಲಿ ಸಹಿ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿ ದೆಹಲಿ ಹಾಗೂ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಾಗಿ ಶ್ರಮಿಸುವ ಘೋಷಣೆ ಮಾಡಿದರು. ಅಷ್ಟೇ ಅಲ್ಲದೆ, 2029ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರಲು ಕರ್ನಾಟಕವೇ ಬುನಾದಿ ಆಗಬೇಕೆಂದು ಸಂಕಲ್ಪ ತೊಟ್ಟರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿ ಪಕ್ಷ ಕಟ್ಟಿದರು. ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದಲ್ಲಿ ಗ್ಯಾರಂಟಿ ಸೇರಿ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆಗಳನ್ನು ಅನುಷ್ಠಾನ ಮಾಡಿ ಜನರಿಗೆ ಕೊಟ್ಟ ಮಾತಿನಂತೆ ನಡೆದರು. ಇದೇ ರೀತಿ ನಡೆದರೆ 2028ರಲ್ಲೂ ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹಾಗಾಗಿ ನೂತನ ಮುಖ್ಯಮಂತ್ರಿ ಮತ್ತು ನೂತನ ಅಧ್ಯಕ್ಷರಿಬ್ಬರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಸಮಕಾಲೀನರು. ಇಬ್ಬರೂ ಭಿನ್ನಾಭಿಪ್ರಾಯಗಳಿದ್ದರೆ ಬದಿಗಿಟ್ಟು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಒಂದು ಗಾಲಿ ಮೇಲೆ ಪಕ್ಷ ನಡೆಯಲ್ಲ. ಇಬ್ಬರ ನಡುವೆ ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಕೂತು ಬಗೆಹರಿಸಿಕೊಳ್ಳಿ. ಪ್ರಚಾರಕ್ಕಾಗಿ ಬಹಿರಂಗವಾಗಿ ಮಾತನಾಡಬೇಡಿ. ಹಾಗೆ ಮಾಡಿದರೆ ಇಡೀ ಪಕ್ಷ, ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಐಸಿಸಿ, ಕೆಪಿಸಿಸಿಗೆ ಕೆಟ್ಟ ಹೆಸರು ತರಬೇಡಿ. ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಜಿಲ್ಲೆ, ತಾಲೂಕು, ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡಿ. ಕಾರ್ಯಕರ್ತರನ್ನು ಹುರಿದುಂಬಿಸಿ ಎಂದು ಸಲಹೆ ನೀಡಿದರು.
ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ಕೊಟ್ಟ ಒಂದೂ ಭರವಸೆ ಈಡೇರಿಸದೆ ಬರೀ ಸುಳ್ಳು ಹೇಳಿಕೊಂಡು ದೇಶ ಹಾಳು ಮಾಡುವ ಪ್ರಯತ್ನ ಮಾಡುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗಾಗಿ 2029ರ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಒಟ್ಟಾಗಿ ಮಾಡಬೇಕು. ಇಲ್ಲದಿದ್ದರೆ ಅವರ ದುರಾಡಳಿತದಿಂದ ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ ಹೆಚ್ಚಾಗುತ್ತದೆ. ಜನಸಾಮಾನ್ಯರು ಇನ್ನಷ್ಟು ಬವಣೆಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜನಪರವಾದ ಆಡಳಿತಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ದೇಶಕ್ಕೇ ಮಾದರಿ. ಅದನ್ನು ನೂತನ ಮುಖ್ಯಮಂತ್ರಿ ಮತ್ತು ಪಕ್ಷದ ಹೊಸ ಅಧ್ಯಕ್ಷರಿಬ್ಬರೂ ಉಳಿಸಿಕೊಂಡು ಹೋಗಬೇಕು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯಸಮ್ಮತ ತೆರಿಗೆ ಪಾಲು, ಅನುದಾನ ನೀಡದೆ ನಿರಂತರ ಅನ್ಯಾಯ ಮಾಡುತ್ತಿದೆ. ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಬರಬೇಕಿದ್ದ ಒಟ್ಟಾರೆ 1.87 ಲಕ್ಷ ಕೋಟಿ ರು. ಅನುದಾನ ಖೋತಾ ಆಗಿದೆ. 14 ಮತ್ತು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 11 ಸಾವಿರ ಕೋಟಿ ರು. ವಿಶೇಷ ಅನುದಾನ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿದ 5,300 ಕೋಟಿ ರು.ಗಳಲ್ಲಿ ಒಂದು ಪೈಸೆಯನ್ನೂ ನೀಡಿಲ್ಲ. ಕಳಸಾ ಬಂಡೂರಿ, ಮಹದಾಯಿ, ಮೇಕೆದಾಟಿನಂಥ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ನೀಡದೆ ರಾಜ್ಯದ ವಿರೋಧಿಯಂತೆ ಮೋದಿ ಸರ್ಕಾರ ವರ್ತಿಸುತ್ತಿದೆ. ಇದೆಲ್ಲವನ್ನೂ ಜನರಿಗೆ ತಿಳಿಸಿ ಎಚ್ಚರಗೊಳಿಸುವ ದೊಡ್ಡ ಜವಾಬ್ದಾರಿ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರ ಮೇಲಿದೆ. ಇದಕ್ಕಾಗಿ ಇಬ್ಬರೂ ಜೊತೆಗೂಡಿ ಕೆಲಸ ಮಾಡಬೇಕು. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿ ಮತ್ತೆ 2028ರಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು. 2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕರ್ನಾಟಕದಿಂದಲೇ ಹೆಜ್ಜೆ ಆರಂಭಿಸಬೇಕು ಎಂದರು.
ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದಕ್ಕೂ ಮುನ್ನ ಮಾತನಾಡಿದ ಸಚಿವರಾದ ಎಂ.ಬಿ.ಪಾಟೀಲ್, ಯು.ಟಿ.ಖಾದರ್, ಈಶ್ವರ್ ಖಂಡ್ರೆ, ಕೃಷ್ಣ ಬೈರೇಗೌಡ, ಮಾಜಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಎನ್‌ಎಸ್‌ಯುಐ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸೇರಿ ಅನೇಕ ನಾಯಕರು ಎಲ್ಲರೂ ಒಟ್ಟಾಗಿ ಪಕ್ಷ ಸದೃಢಗೊಳಿಸುವ ಪ್ರತಿಜ್ಞೆ ಮಾಡಿದರು.
ಡಿಕೆ-ಬಿಕೆ ಒಗ್ಗಟ್ಟಿನ ಮಂತ್ರ
ಸಮಾರಂಭದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಗ್ಗಟ್ಟಿನ ಮಂತ್ರ ಪಠಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಹಿಂದೆ ಪಕ್ಷದ ಅಧ್ಯಕ್ಷನಾಗಿ ನಾನು ಮತ್ತು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಒಗ್ಗಟ್ಟಿನಿಂದ ಹಾಗೂ ಎಲ್ಲ ಮುಖಂಡರು, ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿದ್ದರಿಂದ 2024ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂತು.
ಈಗ ನಾನು ಮತ್ತು ಬಿ.ಕೆ.ಹರಿಪ್ರಸಾದ್ ಇಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳು. ವಿದ್ಯಾರ್ಥಿ ನಾಯಕರಾಗಿ ಬೆಳೆದವರು. ಇಡೀ ದೇಶದಲ್ಲಿ ಸಂಚರಿಸಿ ಪಕ್ಷ ಕಟ್ಟಿದವರು ಅವರು. ಪಕ್ಷದ ನಿಷ್ಠಾವಂತ ನಾಯಕನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಸ್ತಾಂತರಿಸುತ್ತಿರುವುದು ಸಮಾಧಾನ ತಂದಿದೆ. ನಾನು ಮುಖ್ಯಮಂತ್ರಿ ಆಗಿರಬಹುದು, ಆದರೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಜೊತೆ ಇರುತ್ತೇನೆ. ಇಡೀ ಸರ್ಕಾರ ನಿಮ್ಮ ಜೊತೆ ಇರುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯ ಮಾತ್ರವಲ್ಲ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರೋಣ, ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಶ್ರಮಿಸೋಣ ಎಂದು ಕರೆ ನೀಡಿದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ನನ್ನ ಜೀವನದಲ್ಲಿ ಇವತ್ತು ಮಹತ್ವ ಪೂರ್ಣ ದಿನ. ಐದು ದಶಕಗಳ ಕಾಲ ಪಕ್ಷ ಸೇವೆ ಗುರುತಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವ ಪಕ್ಷದ ವರಿಷ್ಠರು, ಎಐಸಿಸಿ ಅಧ್ಯಕ್ಷರು ಸೇರಿ ಎಲ್ಲ ನಾಯಕರಿಗೆ, ಕಾರ್ಯಕರ್ತರಿಗೆ ಶತಕೋಟಿ ನಮಸ್ಕಾರ. ನಾನು ಮತ್ತು ಡಿ.ಕೆ.ಶಿವಕುಮಾರ್ ಅವರಿಬ್ಬರೂ ಒಪ್ಪಂದ ಮಾಡಿಕೊಂಡಿದ್ದೇವೆ. ನಮ್ಮ ಪೂರ್ವಜನರು ಪಕ್ಷ ಕಟ್ಟಿ ಬೆಳೆಸಿದ ಮಟ್ಟಕ್ಕೆ ಪಕ್ಷವನ್ನು ತೆಗೆದುಕೊಂಡು ಹೋಗುತ್ತೇವೆ. ಪಕ್ಷದ ಹೊಸ ಪದಾಧಿಕಾರಿಗಳ ನೇಮಕಾತಿಯಲ್ಲಿ ಶೇ.33ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲು ನೀಡುತ್ತೇನೆ. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಕೃಷಿಕರು, ಕಾರ್ಮಿಕರು ಎಲ್ಲ ವರ್ಗದವರನ್ನೂ ಒಟ್ಟಾಗಿ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಗಾಂಧೀಜಿ ಅವರ ಸಂದೇಶದಂತೆ ಮುಖ್ಯಮಂತ್ರಿ ಅವರು ಯಾವುದೇ ನಿರ್ಧಾರ ಮಾಡುವಾಗ ಬಡವರು, ದುರ್ಬಲರ ಮುಖ ನೋಡಿಕೊಂಡು ಮಾಡಬೇಕು. ಅಂಬೇಡ್ಕರ್ ಅವರು ಜನರ ಜೀವನ ಬದಲಾಯಿಸುವ ಬದ್ಧತೆ ಇದ್ದವರು ರಾಜಕೀಯಕ್ಕೆ ಬರಬೇಕು ಎಂದಿದ್ದಾರೆ. ನಾವು ಅದಕ್ಕೆ ಬದ್ಧವಾಗಿ ಕೆಲಸ ಮಾಡೋಣ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನೇಮಕ ಆದ ನಿಗಮ, ಮಂಡಳಿಗಳ ನೇಮಕಾತಿಯನ್ನು ವಾಪಸ್ ಪಡೆದು ಹೊಸಬರಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಕಾರ್ಯಕರ್ತರು ನನಗೆ ಯಾರೂ ಹಾರ, ತುರಾಯಿ ತರಬೇಡಿ. ಅದರ ಬದಲು ಪಕ್ಷ ಕಟ್ಟಲು ಆ ಹಣ ನೀಡಿ. ಉಳ್ಳವರ ಮುಂದೆ ಕೈ ಚಾಚಿದರೆ ಪಕ್ಷ ಅವರಿಗೆ ಅಡಿಯಾಳಾಗಬೇಕು. ಅದು ನಮಗೆ ಬೇಡ. ಕಾರ್ಯಕರ್ತರು ಒಂದು, 10, 100 ರು. ಕೊಡಿ ಸಾಕು. ಪಕ್ಷ ನಿಮಗೆ ಉತ್ತರದಾಯಿಯಾಗಿರುತ್ತದೆ ಎಂದರು.
ಭಿನ್ನಾಭಿಪ್ರಾಯ ಬೇಡ:ಡಿಕೆ, ಬಿಕೆಗೆ ಖರ್ಗೆ
ನೂತನ ಮುಖ್ಯಮಂತ್ರಿ ಮತ್ತು ನೂತನ ಅಧ್ಯಕ್ಷರಿಬ್ಬರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಸಮಕಾಲೀನರು. ಭಿನ್ನಾಭಿಪ್ರಾಯಗಳಿದ್ದರೆ ಬದಿಗಿಟ್ಟು ಎಲ್ಲರನ್ನೂ ಇಬ್ಬರೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಭಿನ್ನಾಭಿಪ್ರಾಯಗಳಿದ್ದರೆ ಕೂತು ಬಗೆಹರಿಸಿಕೊಳ್ಳಿ. ಪ್ರಚಾರಕ್ಕಾಗಿ ಬಹಿರಂಗವಾಗಿ ಮಾತನಾಡಬೇಡಿ. ಎಐಸಿಸಿ, ಕೆಪಿಸಿಸಿಗೆ ಕೆಟ್ಟ ಹೆಸರು ತರಬೇಡಿ.\B
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.