
ಹುಬ್ಬಳ್ಳಿ/ಬೆಂಗಳೂರು: ವಿಧಾನಪರಿಷತ್ ಚುನಾವಣೆ ಅಡ್ಡಮತದಾನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ಸತ್ಯಾಸತ್ಯತೆ ಹೊರತರಲು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಅಪಸ್ವರ ಕೇಳಿಬಂದಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವರೂ ಆಗಿರುವ ಹಾಲಿ ಶಾಸಕ ಎಸ್.ಸುರೇಶ್‌ಕುಮಾರ್ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವ ನಿರ್ಧಾರ ಕೈಬಿಡುವಂತೆ ಬಹಿರಂಗವಾಗಿಯೇ ಹೇಳಿದ್ದಾರೆ.
ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಅಡ್ಡಮತದಾನದಿಂದಾಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಮನನೊಂದು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಹೇಳಿಕೆ ಗಮನಿಸಿ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದೇನೆ. ಧರ್ಮಸ್ಥಳ ಕ್ಷೇತ್ರ ಅದರದೇ ಆದ ಪಾವಿತ್ರ್ಯತೆ ಹೊಂದಿದೆ. ರಾಜಕಾರಣದ ವಿಚಾರವನ್ನು ಅಂಥ ಪರಿಸರದಲ್ಲಿ ಚರ್ಚಿಸುವುದು, ಆಣೆ ಪ್ರಮಾಣ ಮಾಡುವುದು ಸರಿಯಲ್ಲ. ಹಾಗಾಗಿ, ಅದನ್ನು ಕೈ ಬಿಡುವಂತೆ ತಿಳಿಸಿದ್ದೇನೆ. ಈ ಸಲಹೆ ಸ್ವೀಕರಿಸುವುದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎಂದರು. ಅಡ್ಡ ಮತದಾನ ಮಾಡಿದವರ ಪತ್ತೆಗೆ ಈಗಾಗಲೇ ಸಮಿತಿ ರಚಿಸಲಾಗಿದೆ. ಇದರಲ್ಲಿ ಪತ್ತೆಯಾಗದಿದ್ದರೂ ಮುಂದೊಂದು ದಿನ ಅವರು ಪತ್ತೆಯಾಗೇ ಆಗುತ್ತಾರೆ. ಅವರಿಗೆ ಸೂಕ್ತ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.
ನಿಜಕ್ಕೂ ನನಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ದಿಗ್ಭ್ರಮೆ ಉಂಟು ಮಾಡಿದೆ. ಇದ್ಯಾಕೋ ಸರಿಯಾದ ತೀರ್ಮಾನ ಎಂದೆನಿಸುತ್ತಿಲ್ಲ. ದಯವಿಟ್ಟು ಸ್ವಾಮಿ ಮಂಜುನಾಥನ ಶ್ರೇಷ್ಠತೆಯನ್ನು ಈ ರೀತಿ ಒರೆ ಹಚ್ಚುವುದು ಯಾವುದೇ ಕಾರಣಕ್ಕೂ ಬೇಡ ಎಂದು ಸುರೇಶ್‌ಕುಮಾರ್ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಪಾವಿತ್ರ್ಯತೆ ಹೊಂದಿದೆ. ನಾನು ವಿಧಾನಸಭೆಯಲ್ಲಿ ಹೇಳಿದಂತೆ ನನ್ನ ಜೀವನದಲ್ಲಿ ನನ್ನ ತಾಯಿ ನಂತರ ನನಗಿರುವ ನಿಜವಾದ ಬಂಧು ಎಂದರೆ ಮಂಜುನಾಥ ಸ್ವಾಮಿ. ರಾಜಕಾರಣದಲ್ಲಿ ನಡೆದುಬಿಟ್ಟಿರುವ ಕೀಳು ಮಟ್ಟದ ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ದಯವಿಟ್ಟು ಬೇಡ. ಈ ಅಪಚಾರ ಮಾಡಿರುವವರು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಪಾಪ ಮಾಡಿದ್ದಾರೆ ಎಂದಿದ್ದಾರೆ.
ಈಗಾಗಲೇ ಹಲವರು ಧರ್ಮಸ್ಥಳದ ಹಿರಿಮೆಯನ್ನು ಹಾಳು ಮಾಡುವ ಕೆಲಸ ಮಾಡುವುದರಲ್ಲಿ ವಿಕೃತಾನಂದ ಪಡೆದಿದ್ದಾರೆ. ಇಡೀ ನಾಡಿನ ಜನತೆ ನಂಬಿಕೆ ಇಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಒಂದೊಮ್ಮೆ ಅಡ್ಡ ಮತದಾನ ಮಾಡಿದ ವೀರರು ಆಣೆ-ಪ್ರಮಾಣ ಮಾಡಿ ತಾವು ಉಳಿದುಕೊಳ್ಳಲು ತಮ್ಮ ನೈತಿಕ ದಿವಾಳಿತನ ತೋರಿಸಿದರೆ, ಅದರಿಂದ ಅಪಚಾರದ ಪ್ರಮಾಣ ಹೆಚ್ಚಾಗುತ್ತದಷ್ಟೇ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರ ಅದರದೇ ಆದ ಪಾವಿತ್ರ್ಯತೆ ಹೊಂದಿದೆ. ರಾಜಕಾರಣದ ವಿಚಾರವನ್ನು ಅಂಥ ಪರಿಸರದಲ್ಲಿ ಚರ್ಚಿಸುವುದು, ಆಣೆ ಪ್ರಮಾಣ ಮಾಡುವುದು ಸರಿಯಲ್ಲ. ಹಾಗಾಗಿ, ಅದನ್ನು ಕೈ ಬಿಡುವಂತೆ ತಿಳಿಸಿದ್ದೇನೆ. ಈ ಸಲಹೆ ಸ್ವೀಕರಿಸುವುದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.
- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.