
ಬೆಂಗಳೂರು(ಜೂ.10): ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರಾಜ್ಯಸಭೆ ಚುನಾವಣೆಯ ಮತದಾನ ಶುಕ್ರವಾರ ನಡೆಯಲಿದ್ದು, ನಾಲ್ಕನೆಯ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಒಟ್ಟು ನಾಲ್ಕು ಸ್ಥಾನಗಳ ಪೈಕಿ ಮೊದಲ ಮೂರು ಸ್ಥಾನಗಳ ಗೆಲುವು ಬಹುತೇಕ ನಿಶ್ಚಿತವಾಗಿವೆ. ಆದರೆ, ನಾಲ್ಕನೇ ಸ್ಥಾನಕ್ಕಾಗಿ ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪೈಪೋಟಿ ನಡೆಸಿರುವುದರಿಂದ ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದಕ್ಕೆ ಶುಕ್ರವಾರ ಸಂಜೆವರೆಗೆ ಕಾಯಬೇಕಾಗಿದೆ.
ಅಂದರೆ, ಬಿಜೆಪಿಗೆ ಎರಡು ಮತ್ತು ಕಾಂಗ್ರೆಸ್‌ಗೆ ಒಂದು ಸ್ಥಾನ ಖಚಿತವಾಗಿವೆ. ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಂ ರಮೇಶ್ ಅವರ ಗೆಲುವು ಹೆಚ್ಚೂ ಕಡಮೆ ನಿರ್ಧಾರವಾಗಿದೆ. ನಾಲ್ಕನೇ ಸ್ಥಾನಕ್ಕಾಗಿ ಬಿಜೆಪಿಯಿಂದ ಲೆಹರ್ ಸಿಂಗ್ ಸಿರೋಯ, ಕಾಂಗ್ರೆಸ್‌ನಿಂದ ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದಾರೆ.
ಈ ನಾಲ್ಕನೇ ಸ್ಥಾನಕ್ಕಾಗಿ ಗುರುವಾರದವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಗ್ಗ ಜಗ್ಗಾಟ ನಡೆದರೂ ಅಂತಿಮವಾಗಿ ತಮ್ಮ ಅಭ್ಯರ್ಥಿಯನ್ನು ಕಣದಿಂದ ಹಿಂಪಡೆಯಲು ಉಭಯ ಪಕ್ಷಗಳ ನಾಯಕರು ಒಪ್ಪಲಿಲ್ಲ. ಬದಲಿಗೆ ತೀವ್ರ ವಾಕ್ಸಮರ, ಆರೋಪ-ಪ್ರತ್ಯೋರಾಪಗಳೂ ನಡೆದವು. ಜೆಡಿಎಸ್ ನಾಯಕರು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಿ ಬೆಂಬಲ ಕೋರಿದರೂ ಪ್ರಯೋಜನವಾಗಲಿಲ್ಲ. ಈ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆತ್ಮಸಾಕ್ಷಿ ಅಸ್ತ್ರವನ್ನು ರಾಜಕೀಯ ದಾಳವಾಗಿ ಬಿಟ್ಟಿದ್ದು, ಜೆಡಿಎಸ್ ಶಾಸಕರೆಲ್ಲರಿಗೂ ಪತ್ರ ಬರೆದಿದ್ದಾರೆ.
ಹಾಗೊಂದು ವೇಳೆ ಕಾಂಗ್ರೆಸ್ ಅಥವಾ ಜೆಡಿಎಸ್ ಪೈಕಿ ಒಬ್ಬರು ಹಿಂದೆ ಸರಿದಿದ್ದರೆ ನಾಲ್ಕನೇ ಸ್ಥಾನದ ಫಲಿತಾಂಶ ನಿರ್ಧಾರವಾಗುತ್ತಿತ್ತು. ಬಿಜೆಪಿಗೆ ಗೆಲುವು ಗಗನಕುಸುಮವಾಗುತ್ತಿತ್ತು. ಸದ್ಯದ ಮತಗಳ ಲೆಕ್ಕಾಚಾರದ ಪ್ರಕಾರವೇ ನಡೆದರೆ ಬಿಜೆಪಿಯ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಅಡ್ಡಮತದಾನವಾದರೆ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆ ಇದೆ. ಹೀಗಾಗಿ ಆಯಾ ಪಕ್ಷಗಳ ಮುಖಂಡರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ನಡೆಸಿದ್ದಾರೆ. ಮತದಾನ ಮುಗಿಯುವರೆಗೆ ಶಾಸಕರ ಮೇಲೆ ನಿಗಾ ವಹಿಸಲಿದ್ದಾರೆ.
ಇದೀಗ ನಾಲ್ಕನೇ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿರುವುದರಿಂದ ಮೂರೂ ಪಕ್ಷಗಳಿಗೂ ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಡ್ಡಮತದಾನದ ಭೀತಿ ಕಾಣಿಸಿಕೊಂಡಿದೆ. ಒಂದೊಂದು ಮತವೂ ನಿರ್ಣಾಯಕವಾಗಿರುವುದರಿಂದ ಮತದಾರರಾಗಿರುವ ಶಾಸಕರನ್ನು ಸೆಳೆಯುವ ಪ್ರಯತ್ನ ಗುರುವಾರ ರಾತ್ರಿವರೆಗೂ ತೆರೆಮರೆಯಲ್ಲಿ ಭರ್ಜರಿಯಾಗಿಯೇ ನಡೆದಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಂಬಂಧ ಮೂರೂ ಪಕ್ಷಗಳು ಗುರುವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಿ ಯಾರು ಯಾರಿಗೆ ಮತ ಚಲಾಯಿಸಬೇಕು ಎಂಬುದರ ವಿವರ ಒಳಗೊಂಡ ವಿಪ್ ಜಾರಿಗೊಳಿಸಿವೆ.
ಇದು ಗೌಪ್ಯ ಮತದಾನವಲ್ಲ. ಅಂದರೆ, ಪಕ್ಷದ ಚುನಾವಣಾ ಏಜೆಂಟರಿಗೆ ತೋರಿಸಿಯೇ ಮತ ಚಲಾಯಿಸಬೇಕಾಗುತ್ತದೆ. ಹೀಗಾಗಿ, ಯಾರು ಅಡ್ಡಮತದಾನ ಮಾಡಿದರೂ ಅದು ಬಹಿರಂಗವಾಗಲಿದೆ.
ಶುಕ್ರವಾರ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 5ಗಂಟೆಗೆ ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳ ಗೆಲುವಿಗೆ ಕನಿಷ್ಠ 45 ಮತಗಳ ಅಗತ್ಯ ಇದೆ. ಇದು ಮೊದಲ ಪ್ರಾಶಸ್ತ್ಯ ಮತಗಳಾಗಿರುತ್ತದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಬಲ 122, ಕಾಂಗ್ರೆಸ್ ಶಾಸಕರ ಸಂಖ್ಯೆ 70 ಮತ್ತು ಜೆಡಿಎಸ್‌ನ ಬಲ 32 ಇದೆ. ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಜಯಗಳಿಸಲಿದೆ. ಜೆಡಿಎಸ್‌ನ ಕುಪೇಂದ್ರರೆಡ್ಡಿಗೆ ಸಂಖ್ಯಾಬಲದ ಕೊರತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಎರಡನೇ ಪ್ರಾಶಸ್ತ್ಯ ಮತ ಚಲಾವಣೆಯ ಅವಕಾಶ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.